ಹಿಜಾಬ್‌ ಶಿಕ್ಷಣಕ್ಕೆ ಅಡ್ಡಿಯಲ್ಲ: ಪಿಯು ಪರೀಕ್ಷೆ ಟಾಪರ್ ಮಂಗಳೂರಿನ ಇಲ್ಹಾಮ್‌ ಗೆ ಪ್ರಶಂಸೆಯ ಮಹಾಪೂರ

Update: 2022-06-23 03:38 GMT

ಬೆಂಗಳೂರು:  ಇತ್ತೀಚೆಗೆ ಪ್ರಕಟಗೊಂಡ ದ್ವಿತೀಯ ಪಿಯು ಪರೀಕ್ಷೆ ಟಾಪರ್ ಮಂಗಳೂರಿನ ಇಲ್ಹಾಮ್‌ ಗೆ ಸಾಮಾಜಿಕ ತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. 

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ಇಲ್ಹಾಮ್ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ 597 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. 

ಈ ಹಿಂದೆ ರಾಜ್ಯದ ಹಲವು ಕಾಲೇಜುಗಳಲ್ಲಿ ಹಿಜಾಬ್ ವಿಚಾರಕ್ಕೆ ಸಂಬಂಧಿಸಿ ವಿವಾದ ಏರ್ಪಟ್ಟು ಬಳಿಕ ಹಿಜಾಬ್ ಧರಿಸುವ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆದಿತ್ತು.  ಅಲ್ಲದೇ ಹಿಜಾಬ್‌ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುತ್ತದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿತ್ತು. ಬಳಿಕ ಹಲವಾರು ಮುಸ್ಲಿಮ್‌ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿಯೇ ವಿದ್ಯಾರ್ಜನೆಗೈದು ಮಹತ್ವದ ಸಾಧನೆಗಳನ್ನು ಮಾಡಿದ್ದರು.

ಇದೀಗ ಎಸೆಸೆಲ್ಸಿ ಬಳಿಕ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲೂ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರ ಸಾಧನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ಪ್ರಶಂಸಿಸಿದ್ದಾರೆ. 

'ಹಿಜಾಬ್ ಶಿಕ್ಷಣಕ್ಕೆ ಅಡ್ಡಿಯಾಗುವುದಿಲ್ಲ. ಪಿಯುಸಿಯಲ್ಲಿ ರಾಜ್ಯಕ್ಕೆ 2 ನೇ ಸ್ಥಾನ ಗಳಿಸಿದ್ದಕ್ಕಾಗಿ ಇಲ್ಹಾಮ್ ಅವರಿಗೆ ಅಭಿನಂದನೆಗಳು' ಎಂದು ಕಲಬುರಗಿ ಉತ್ತರ ವಿಧಾನಸಭೆ ಕ್ಷೇತ್ರದ ಶಾಸಕಿ ಕನೀಝ್ ಫಾತಿಮಾ ಟ್ವೀಟ್ ಮಾಡಿದ್ದಾರೆ. 

'ಹಿಜಾಬ್ ಮತ್ತು ಶಿಕ್ಷಣದ ನಡುವೆ ಆಯ್ಕೆ ಮಾಡಿಕೊಳ್ಳಬೇಕೆಂದ ಸರಕಾರ ಮತ್ತು ಅದರ ಬೆಂಬಲಿಗರಿಗೆ ಇಲ್ಹಾಮ್ ಕಪಾಳಮೋಕ್ಷ ಮಾಡಿದ್ದಾರೆ.  ನಾವು ನಮ್ಮ ತಲೆಯನ್ನು ಮುಚ್ಚುತ್ತೇವೆ ಹೊರತು ಮೆದುಳನ್ನಲ್ಲ' ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. 

'ಹಿಜಾಬ್ ಶಿಕ್ಷಣಕ್ಕೆ ಅಡ್ಡಿಯಾಗುವುದಿಲ್ಲ. ನಿಮ್ಮ ತಲೆಯ ಮೇಲಿರುವುದಕ್ಕಿಂತ ನಿಮ್ಮ ತಲೆಯ ಒಳಗಿರುವ ವಿಚಾರ ಮುಖ್ಯ.  ಪಿಯುಸಿ ಪರೀಕ್ಷೆಯಲ್ಲಿ 2ನೇ ಸ್ಥಾನ  ಗಳಿಸಿದ್ದಕ್ಕಾಗಿ ಇಲ್ಹಾಮ್ ಅವರಿಗೆ ಅಭಿನಂದನೆಗಳು. ಆಕೆಯ ಯಶಸ್ಸಿನ ಬಳಿಕವಾದರೂ ರಾಜ್ಯ ಸರ್ಕಾರ ತನ್ನ ಮುಸ್ಲಿಂ ಹೆಣ್ಣು ಮಕ್ಕಳ ವಿರೋಧಿ ನೀತಿಯನ್ನು ಪರಿಶೀಲಿಸಬಹುದು ಎಂದು ಆಶಿಸುತ್ತೇವೆ ಎಂದು ಇನ್ನೊಬ್ಬರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಕೇವಲ ಕರ್ನಾಟಕ ಮಾತ್ರವಲ್ಲದೇ ದೇಶದಾದ್ಯಂತ ಹಲವರು ಇಲ್ಹಾಂಗೆ ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News