ರಾಂಚಿ ಪ್ರತಿಭಟನೆಯಲ್ಲಿ ಗುಂಡೇಟಿನಿಂದ ಮೃತಪಟ್ಟ ಬಾಲಕನ ಕುಟುಂಬ ದೂರು ನೀಡಿದ್ದರೂ ಕೇಸು ದಾಖಲಿಸದ ಪೊಲೀಸರು

Update: 2022-06-20 10:21 GMT

 ಹೊಸದಿಲ್ಲಿ: ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಜೂನ್ 10ರಂದು ಬಿಜೆಪಿ ನಾಯಕರ ಪ್ರವಾದಿ ವಿರುದ್ಧದ ಹೇಳಿಕೆಗಳನ್ನು ಖಂಡಿಸಿ ನಡೆದ ಪ್ರತಿಭಟನೆಗಳ ವೇಳೆ  ಗುಂಡೇಟಿಗೊಳಗಾಗಿ ಅಪ್ರಾಪ್ತ ಬಾಲಕನೊಬ್ಬ ಮೃತಪಟ್ಟ ಘಟನೆ ನಡೆದು ಹತ್ತು ದಿನಗಳೇ ಸಂದರೂ ಪೊಲೀಸರು ಇನ್ನೂ ಎಫ್ಐಆರ್ ದಾಖಲಿಸಿಲ್ಲ ಎಂದು ಆತನ ಕುಟುಂಬ ಆರೋಪಿಸಿದೆಯಲ್ಲದೆ ಹೈಕೋರ್ಟ್ ಕದ ತಟ್ಟುವುದಾಗಿ ಹೇಳಿದ್ದಾಗಿ thewire.in ವರದಿ ಮಾಡಿದೆ. ಕುಟುಂಬ ಇಂದು ರಾಂಚಿ ಹೈಕೋರ್ಟಿಗೆ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ. ಪ್ರತಿಭಟನೆ ವೇಳೆ 15 ವರ್ಷದ ಬಾಲಕ ಹಾಗೂ ಒಬ್ಬ ಯುವಕ ಮೃತಪಟ್ಟಿದ್ದರು.

ಬಾಲಕನ ಸಾವಿಗೆ ಕಾರಣರಾದವರನ್ನು ಪೊಲೀಸರು ರಕ್ಷಿಸುತ್ತಿದ್ದಾರೆ ಹಾಗೂ ಇದೇ ಕಾರಣಕ್ಕಾಗಿ ಎಫ್ಐಆರ್ ದಾಖಲಿಸಲು ನಿರಾಕರಿಸುತ್ತಿದ್ದಾರೆ ಎಂದು ಆತನ ಕುಟುಂಬ ಆರೋಪಿಸಿದೆ

ಜೂನ್ 10ರಂದು ನಡೆದ ಪ್ರತಿಭಟನೆಗಳ ವೇಳೆ ಗುಂಡು ಹಾರಿಸಿದ್ದನೆನ್ನಲಾದ ಭೈರೋಂ ಸಿಂಗ್ ಎಂಬಾತ ಪ್ರತಿ ದೂರು ದಾಖಲಿಸಿದ್ದಾನೆಂದೂ ಬಾಲಕನ ಕುಟುಂಬ ಆರೋಪಿಸಿದೆ. ಘಟನೆಯ ಮರುದಿನ ಬಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಆತನ ತಂದೆ ಹಣ್ಣು ವ್ಯಾಪಾರಿಯಾಗಿದ್ದಾರೆ.

"ಸರಕಾರ ತನ್ನ ಪೊಲೀಸ್ ಇಲಾಖೆಯನ್ನು, ಆಡಳಿತವನ್ನು ಹಾಗೂ ತನ್ನ ಹಿತಾಸಕ್ತಿಯನ್ನು ರಕ್ಷಿಸಲು ಯತ್ನಿಸುತ್ತಿದೆ" ಎಂದು ಬಾಲಕನ ಕುಟುಂಬ ಆರೋಪಿಸಿದೆ.

ಬಾಲಕನ ಕುಟುಂಬ ಸಲ್ಲಿಸಿದ ದೂರಿನಲ್ಲಿ ಭೈರೋಂ ಸಿಂಗ್, ಶಶಿ ಶರದ್ ಕರಣ್ ಮತ್ತು ಸೋನು ಸಿಂಗ್ ಹಾಗೂ ಇತರರು ಎಂದು ಆರೋಪಿಗಳನ್ನು ಉಲ್ಲೇಖಿಸಲಾಗಿದೆ. ಅವರು ದೇವಸ್ಥಾನವೊಂದರ ಛಾವಣಿಯಲ್ಲಿ ನಿಂತು ಗುಂಡು ಹಾರಿಸಿದ್ದರೆಂದು ದೂರಲಾಗಿದೆ. ಆಗ ಪ್ರತಿಭಟನಾಕಾರರೂ ಕಲ್ಲು ತೂರಾಟ ಆರಂಭಿಸಿದ್ದರು. ಪೊಲೀಸರು ಕೂಡ ಗುಂಡು ಹಾರಾಟ ನಡೆಸಿದ್ದರು ಎನ್ನಲಾಗಿದೆ.

ದೂರು ಸ್ವೀಕರಿಸಿರುವುದನ್ನು ಡೈಲಿ ಮಾರ್ಕೆಟ್ ಪೊಲೀಸ್ ಠಾಣೆ ದೃಢೀಕರಿಸಿದ್ದರೂ ಎಫ್ಐಆರ್ ದಾಖಲಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿಲ್ಲ.

ಆರೋಪಿ ಭೈರೋಂ ಸಿಂಗ್ ಸ್ಥಳೀಯವಾಗಿ ಹಿಂದುತ್ವ ಕಾರ್ಯಕರ್ತನೆಂದು ಗುರುತಿಸಲ್ಪಟ್ಟಿದ್ದಾನೆ. ಆತ ಈ ಹಿಂದೆ ಮುಸ್ಲಿಮರ ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡಿದ್ದ. ಜಾರ್ಖಂಡ್ ಸೀಎಂ ಹೇಮಂತ್ ಸೊರೇನ್ ಅವರ ಬೆಂಗಾವಲು ಪಡೆ ಮೇಲೆ ದಾಳಿ ನಡೆಸಿದ್ದಕ್ಕಾಗಿ ಕೆಲವು ಸಮಯ ಆತ ಜೈಲಿನಲ್ಲಿದ್ದ ಎಂದು ವರದಿ ಉಲ್ಲೇಖಿಸಿದೆ.

ಆತ ನೀಡಿದ ಪ್ರತಿದೂರಿನಲ್ಲಿ ತಬ್ಲೀಗಿ ಜಮಾತ್ ಮತ್ತು ಮುಸ್ಲಿಂ ಯೂತ್ ಫೋರಂನ ಸೋಫಿಯಾ ಮತ್ತು ಪರ್ವೇಝ್ ತನಗೆ ಕೊಲೆ ಬೆದರಿಕೆಯೊಡ್ಡಿದ್ದಾರೆಂದು ಆರೋಪಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News