ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆ ಕನ್ನಡದಲ್ಲಿ ನಡೆಸಿ: ಎಂ.ಎಸ್.ರಕ್ಷಾ ರಾಮಯ್ಯ

Update: 2022-06-20 13:28 GMT
ಎಂ.ಎಸ್.ರಕ್ಷಾ ರಾಮಯ್ಯ

ಬೆಂಗಳೂರು, ಜೂ.20: ಕೇಂದ್ರ ಲೋಕಸೇವಾ ಆಯೋಗದ ಪೂರ್ವ ಭಾವಿ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸುವ ಮೂಲಕ ಯುವ ಜನಾಂಗ ಉದ್ಯೋಗ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಒತ್ತಾಯಿಸಿದ್ದಾರೆ.

ಸೇನೆಗೆ ನೇಮಕಗೊಳ್ಳುವ ಅಗ್ನಿಪಥ್ ಯೋಜನೆಯಿಂದ ದೇಶಾದ್ಯಂತ ಯುವ ಸಮೂಹ ಆಕ್ರೋಶಗೊಂಡಿದ್ದು, ಉದ್ಯೋಗದ ಭರವಸೆಗಳನ್ನು ಈಡೇರಿಸಿಕೊಳ್ಳಲು ಕೇಂದ್ರ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು. ವಿಶೇಷವಾಗಿ ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆಯನ್ನು ಸ್ಥಳೀಯ ಭಾಷೆಯಲ್ಲಿ ಬರೆಯಲು ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಹಿಂದಿ ಹೇರಿಕೆ ಬಗ್ಗೆ ಕನ್ನಡಿಗರು ಎತ್ತಿರುವ ಪ್ರಶ್ನೆ ವಿಷಯದಲ್ಲಿ ತಾವು ಮೌನ ವಹಿಸಿದ್ದೀರಿ. ವಿಚಿತ್ರವೆಂದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಿಂದಿ ಪರ ಮಾತನಾಡುತ್ತಿದ್ದಾರೆ. ಹೀಗಾಗಿ ಗೊಂದಲದಲ್ಲಿರುವ ಕನ್ನಡಿಗರ ಪ್ರಶ್ನೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ರಕ್ಷಾ ರಾಮಯ್ಯ ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಕ್ಷಾ ರಾಮಯ್ಯ, ರಾಜ್ಯ ಬಿಜೆಪಿ ಸರಕಾರದಲ್ಲಿ ಶೇ.40 ರಷ್ಟು ಕಮಿಷನ್ ನೀಡುವಂತೆ ಸರಕಾರದಲ್ಲಿರುವವರು ಒತ್ತಡ ಹೇರುತ್ತಿದ್ದಾರೆ ಎಂದು ಗುತ್ತಿಗೆದಾರರು ತಮಗೆ ಪತ್ರ ಬರೆದಿರುವ ಬಗ್ಗೆಯೂ ನೀವು ಸ್ಪಷ್ಟನೆ ನೀಡಬೇಕು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿಸಿದ್ದಾರೆ. 

ಭ್ರಷ್ಟಾಚಾರದ ವಿರುದ್ಧ ತಾವು ಸಮರ ಸಾರಿದ್ದು ನಿಜವೇ ಆಗಿದ್ದಲ್ಲಿ ತಾವು ಕರ್ನಾಟಕ ಭೇಟಿ ಸಮಯದಲ್ಲಿ ಈ ಕುರಿತು ಮಾತನಾಡಬೇಕು.  ಇಲ್ಲವಾದಲ್ಲಿ ಭ್ರಷ್ಟಾಚಾರದ ವಿರುದ್ಧದ ನಿಮ್ಮ ನಿಲುವು ಆಷಾಢಭೂತಿತನದಿಂದ ಕೂಡಿದೆ ಎಂಬ ತೀರ್ಮಾನಕ್ಕೆ ಬರುತ್ತೇವೆ ಎಂದು ರಕ್ಷಾ ರಾಮಯ್ಯ ಹೇಳಿದ್ದಾರೆ.

ನಾವು ಅಧಿಕಾರಕ್ಕೆ ಬಂದರೆ ಮಹಾದಾಯಿ ನೀರು ಹಂಚಿಕೆ ವಿವಾದದ ಬಗ್ಗೆ ಗೋವಾದೊಂದಿಗೆ ಮಾತುಕತೆ ನಡೆಸಿ ಕನ್ನಡ ನಾಡಿನ ರೈತರಿಗೆ ನ್ಯಾಯ ದೊರಕಿಸಿಕೊಡುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಗ್ದಾನ ನೀಡಿ ತಮ್ಮ ಮಾತು ತಪ್ಪಿದ್ದಾರೆ. ರಾಜ್ಯ, ಕೇಂದ್ರ, ಗೋವಾದಲ್ಲೂ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಸಮಸ್ಯೆ ಪರಿಹರಿಸುವ ಬಗ್ಗೆ ತಾವು ರಾಜ್ಯದ ಜನರಿಗೆ ಸೂಕ್ತ ಭರವಸೆ ನೀಡುತ್ತೀರಿ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ರಕ್ಷಾ ರಾಮಯ್ಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News