ಬೆಂಗಳೂರು: 33ಸಾವಿರ ಕೋಟಿ ರೂ.ಗಳ 19 ಯೋಜನೆಗಳಿಗೆ ಪ್ರಧಾನಿ ಚಾಲನೆ

Update: 2022-06-20 13:58 GMT

ಬೆಂಗಳೂರು, ಜೂ. 20: ಸುಮಾರು 15,767 ಕೋಟಿ ರೂ.ವೆಚ್ಚದ 148 ಕಿ.ಮೀ ಉದ್ದದ ಬೆಂಗಳೂರಿನ ಉಪನಗರ ರೈಲ್ವೆ(ಸಬ್ ಅರ್ಬನ್) ಯೋಜನೆ ಸೇರಿದಂತೆ ಸುಮಾರು 33 ಸಾವಿರ ಕೋಟಿ ರೂ.ವೆಚ್ಚದ 19 ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಿದರು.

ಸೋಮವಾರ ಹೊಸದಿಲ್ಲಿಯಿಂದ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿಯವರು ಇಲ್ಲಿನ ಕೆಂಗೇರಿ ಸಮೀಪದ ಕೊಮ್ಮಘಟ್ಟದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರು, `ಕರುನಾಡಿನ ಜನತೆಗೆ ನನ್ನ ಪ್ರೀತಿಯ ನಮಸ್ಕಾರಗಳು' ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು.

`ವಿವಿಧ ಅಭಿವೃದ್ದಿ ಯೋಜನೆಗಳನ್ನು ಜಾರಿಗೊಳಿಸಲು ನನಗೆ ಅತೀವ ಸಂತೋಷವಾಗುತ್ತಿದೆ. ಬೆಂಗಳೂರು ನಗರ ಅಭಿವೃದ್ಧಿಯೇ ಯುವಕರ ಕನಸಾಗಿದೆ. ಒಂದು ಭಾರತ ಶ್ರೇಷ್ಠ ಭಾರತ ಸಾಲಿಗೆ ಬೆಂಗಳೂರು ಮಾದರಿಯಾಗಿದೆ. ಬೆಂಗಳೂರು ಅಭಿವೃದ್ಧಿಗೆ ಡಬಲ್ ಎಂಜಿನ್ ಸರಕಾರ ಬದ್ಧ' ಎಂದು ಪ್ರಧಾನಿ ಮೋದಿ ಇದೇ ವೇಳೆ ಅಭಯ ನೀಡಿದರು.

`ಬಿಜೆಪಿ ನೇತೃತ್ವದ ಸರಕಾರ ಕರ್ನಾಟಕ ರಾಜ್ಯದ ತ್ವರಿತ ಅಭಿವೃದ್ಧಿಯ ಭರವಸೆ ನೀಡಿತ್ತು. ಆ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಇಂದು 33ಸಾವಿರ ಕೋಟಿ ರೂ.ವೆಚ್ಚದ 19 ವಿವಿಧ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಉನ್ನತ ಶಿಕ್ಷಣ ಸಂಶೋಧನೆ, ಆರೋಗ್ಯ ಕ್ಷೇತ್ರದ ಯೋಜನೆಗಳನ್ನು ಉದ್ಘಾಟಿಸಲಾಗಿದೆ. ನಿಮ್ಮ ಸೇವೆಗೆ ನಾವು ಸದಾ ಸಿದ್ಧರಿದ್ದೇವೆ' ಎಂದರು.

`ನಿಮ್ಮ ಸಂಭ್ರಮದಲ್ಲಿ ಭಾಗಿಯಾಗಲು ನಾನಿಲ್ಲಿಗೆ ಬಂದಿದ್ದೇನೆ. ಮೈಸೂರಿನಲ್ಲೂ ಇದೇ ವಿಕಾಸಯಾತ್ರೆಗೆ ವೇಗ ನೀಡಲಾಗುತ್ತಿದೆ. ರಾಜ್ಯದ 5 ರಾಷ್ಟ್ರೀಯ ಹೆದ್ದಾರಿಯ ಯೋಜನೆ, ಏಳು ರೈಲು ಯೋಜನೆಗಳಿಗೆ ಚಾಲನೆ ನೀಡಿದ್ದೇವೆ. ಬೆಂಗಳೂರು ಕನಸುಗಳ ನಗರವಾಗಿದೆ' ಎಂದು ಮೋದಿ ಇದೇ ವೇಳೆ ಬಣ್ಣಿಸಿದರು.

`ಇಂದು ಚಾಲನೆ ನೀಡಿರುವ ಬೆಂಗಳೂರು ಉಪನಗರ ರೈಲ್ವೆ ಯೋಜನೆ 40 ವರ್ಷಗಳಿಂದ ಚರ್ಚೆಯಾಗುತ್ತಿತ್ತು. ನಾವು ಈ ಚರ್ಚೆಯನ್ನು ಪೂರ್ಣಗೊಳಿಸಿ ಕೇವಲ 40 ತಿಂಗಳುಗಳಲ್ಲಿ ಕೆಲಸ ಪೂರ್ಣಗೊಳಿಸಲಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಅಭಿವೃದ್ಧಿ ಕಾರ್ಯಗಳು ಜಾರಿಯಾಗಿವೆ. ಪ್ರತಿಕ್ಷಣವನ್ನು ನಿಮ್ಮ ಸೇವೆಗೆ ಮುಡುಪಾಗಿಟ್ಟಿದ್ದೇನೆ' ಎಂದು ಅವರು ತಿಳಿಸಿದರು.

ಜಿಡಿಪಿ ಶೇ.2ರಷ್ಟು ವೃದ್ಧಿ: `ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ನೆರವೇರಿಸಿರುವ 33 ಸಾವಿರ ಕೋಟಿ ರೂ.ವೆಚ್ಚದ 19 ವಿವಿಧ ಯೋಜನೆಗಳ ಕಾಮಗಾರಿ ಪೂರ್ಣಗೊಂಡರೆ ಕರ್ನಾಟಕ ರಾಜ್ಯದ ಜಿಡಿಪಿ ಶೇ.2ರಷ್ಟು ಹೆಚ್ಚಳವಾಗಲಿದೆ' ಎಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ವ್ಯಕ್ತಪಡಿಸಿದರು.

`ಕರ್ನಾಟಕದ ಪ್ರಗತಿಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಅಷ್ಟು ಮಹತ್ವದ ಯೋಜನೆ ಇದಾಗಿದೆ. ನಮ್ಮೆಲ್ಲರ ಬಹಳ ದಿನಗಳ ಕನಸು ಬೆಂಗಳೂರು ಉಪನಗರ (ಸಬ್ ಅರ್ಬನ್) ರೈಲು ಯೋಜನೆ ನನೆಗುದಿಗೆ ಬಿದ್ದಿತ್ತು. ಪ್ರಧಾನಿ ಮೋದಿ ಕೇಂದ್ರದ ಸಹಾಯವನ್ನು ನೀಡಿ ಯೋಜನೆ ನೆರವೇರಿಸಿದ್ದು, ನಾಲ್ಕು ದಿಕ್ಕಿನಲ್ಲಿ ಬೆಂಗಳೂರಿನ ವಿವಿಧ ಭಾಗಗಳನ್ನು ಸಂಪರ್ಕ ಮಾಡುವ ಅದ್ಭುತವಾದ ಯೋಜನೆ ಪ್ರಾರಂಭವಾಗಿದೆ' ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ನವ ಭಾರತಕ್ಕೆ ನವ ಕರ್ನಾಟಕ: ಪ್ರಧಾನಿ ಮೋದಿಯವರ ಕನಸಾದ 5 ಟ್ರಿಲಿಯನ್ ಆರ್ಥಿಕತೆಗೆ ಕನಿಷ್ಠ 1.2 ಟ್ರಿಲಿಯನ್ ಡಾಲರ್‍ಗಳನ್ನು ಕರ್ನಾಟಕದಿಂದ ಭಾರತಕ್ಕೆ ಕೊಡುಗೆ ನೀಡಬೇಕು. ಕರ್ನಾಟಕ ಅತ್ಯಂತ ಪ್ರಗತಿಪರ ರಾಜ್ಯ. ಕೃಷಿ, ಉತ್ಪಾದನಾ ತಂತ್ರಜ್ಞಾನ ವಲಯದಲ್ಲಿ ಮುಂಚೂಣಿಯಲ್ಲಿದೆ. ಅತಿ ಹೆಚ್ಚಿನ ಎಫ್‍ಡಿಐ ರಾಜ್ಯಕ್ಕೆ ಬಂದಿದೆ. ಅತಿಹೆಚ್ಚಿನ ಕೃಷಿ ಉತ್ಪನ್ನ ಕರ್ನಾಟಕದಲ್ಲಿ ಆಗುತ್ತಿದೆ. ರಾಜ್ಯ ಹೆದ್ದಾರಿಗಳು, 5ಹೊಸ ವಿಮಾನ ನಿಲ್ದಾಣಗಳು, ಮೂರು ಬಂದರುಗಳು, ಇವೆಲ್ಲವನ್ನೂ ನಾವು ಕಾರ್ಯರೂಪಕ್ಕೆ ತರುತ್ತಿದ್ದೇವೆ.  ಮೋದಿಯವರ ಕಲ್ಪನೆಯ ನವ ಭಾರತಕ್ಕೆ ನವ ಕರ್ನಾಟಕ ಜೊತೆ ನೀಡಲಿದೆ. ನವ ಕರ್ನಾಟಕದ ನಿರ್ಮಾಣದ ಕನಸನ್ನು ನಾವು ನನಸು ಮಾಡುತ್ತೇವೆ. `ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ' ಎಂಬ ಮಾತನ್ನು ಅಕ್ಷರಶಃ ನಿರೂಪಿಸುತ್ತೇವೆ' ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

"ಹಿಂದಿನ ಸರಕಾರಗಳ ನಿರ್ಲಕ್ಷ್ಯದಿಂದ ರಾಜ್ಯದ ಹಲವು ಯೋಜನೆಗಳು ನನೆಗುದಿಗೆ ಬಿದ್ದಿದ್ದವು. 40 ವರ್ಷದಿಂದ ಚರ್ಚೆಯಲ್ಲಿದ್ದ ಉಪನಗರ ರೈಲ್ವೆ ಯೋಜನೆ ಸಹಿತ ಹಲವು ಯೋಜನೆಗಳನ್ನು 40 ತಿಂಗಳಲ್ಲಿ ಪೂರ್ಣಗೊಳಿಸಲಿದ್ದೇವೆ. ಆ ಬದ್ಧತೆ ನಮಗೆ ಇದೆ. ಭಾರತೀಯ ರೈಲ್ವೆಯಲ್ಲಿ ಈಗ ವಿಮಾನ ರೀತಿಯ ಸೌಲಭ್ಯಗಳಿವೆ. ಈಗ ಸ್ವಚ್ಛ, ಸುರಕ್ಷಿತ ಆಧುನಿಕತೆಯಿಂದ ರೈಲುಗಳು ಮಾರ್ಪಾಡಾಗಿವೆ. ಬೆಂಗಳೂರು ಅಭಿವೃದ್ಧಿಗಾಗಿ ನಿರಂತರ ಶ್ರಮಿಸಿದ್ದೇವೆ. ಶೀಘ್ರದಲ್ಲೇ ಬೆಂಗಳೂರಿನ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಜನರ ಕನಸು ನನಸಾಗಲಿದೆ'
-ನರೇಂದ್ರ ಮೋದಿ ಪ್ರಧಾನಮಂತ್ರಿ

"ಇಲ್ಲಿನ ಕೊಮ್ಮಘಟ್ಟದಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ `ಕರುನಾಡ ಜನತೆಗೆ ನನ್ನ ಪ್ರೀತಿಯ ನಮಸ್ಕಾರಗಳು'. ಬೆಂಗಳೂರಿನ ಮಹಾ ಜನತೆಗೆ ವಿಶೇಷ ಧನ್ಯವಾದ" ಎಂದು ಕನ್ನಡದಲ್ಲೇ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News