ಕಟ್ಟಡ ಉದ್ಘಾಟನೆ ಜೊತೆಗೆ ಅವರ ಆಶಯಗಳ ಉದ್ಘಾಟನೆಯೂ ಆಗಲಿ: ಡಾ.ಎಚ್.ಸಿ.ಮಹದೇವಪ್ಪ

Update: 2022-06-20 16:33 GMT
ಡಾ.ಎಚ್.ಸಿ.ಮಹದೇವಪ್ಪ

ಬೆಂಗಳೂರು: "ಕರ್ನಾಟಕ ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿಯವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಮಂಜೂರಾಗಿ, ಆರಂಭಗೊಂಡ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನ ಉದ್ಘಾಟನೆಗೆ ಆಗಮಿಸುತ್ತಿದ್ದು, ಅಂಬೇಡ್ಕರ್ ಆಶಯಗಳ ಉದ್ಘಾಟನೆಯೂ ಆಗಲಿ" ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಲಹೆ ನೀಡಿದ್ದಾರೆ.

ಸೋಮವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, "ತಾನು ಪಡೆದ ವಿದ್ಯೆಯ ಕಾರಣಕ್ಕೆ ತನ್ನ ಬದುಕಿನಲ್ಲಿ ಎಲ್ಲ್ಲ ಸುಖ ಸಂತೋಷವನ್ನು ಅನುಭವಿಸುವ ಅವಕಾಶ ಇದ್ದರೂ ಬಾಬಾ ಸಾಹೇಬರು ತಮ್ಮ ಬದುಕನ್ನೇ ತ್ಯಾಗ ಮಾಡಿದರು. ಅವರ ತ್ಯಾಗದ ಫಲವೇ ಈ ದೇಶದ ಆಮ್ಲಜನಕವಾಗಿರುವ ಸಂವಿಧಾನ' ಎಂದು ಬಣ್ಣಿಸಿದ್ದಾರೆ.

‘ಇಂತಹ ತ್ಯಾಗಮಯಿ ವ್ಯಕ್ತಿತ್ವದ ವ್ಯಕ್ತಿಯ ಹೆಸರಲ್ಲಿ ನಿರ್ಮಾಣಗೊಂಡ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯ ಕಟ್ಟಡ ಉದ್ಘಾಟನೆ ಮಾಡಲು ಬರುತ್ತಿರುವ ಮೋದಿಯವರು ಅದರ ಜೊತೆಗೆ ತಮ್ಮ ಅವಧಿಯಲ್ಲಿ ವಿಷಪೂರಿತವಾಗಿ ಹೆಚ್ಚಾಗಿರುವ ಧಾರ್ಮಿಕ ದ್ವೇಷ, ಅಸಹನೆ ಹಾಗೂ ಅಸಂವಿಧಾನಿಕ ವಾತಾವರಣವನ್ನು ನಿಯಂತ್ರಣ ಮಾಡುವ ಮೂಲಕ ಅಂಬೇಡ್ಕರ್ ಆಶಯಗಳಿಗೆ ತಾವು ಚಾಲನೆ ನೀಡಬೇಕು' ಎಂದು ಮಹದೇವಪ್ಪ ಆಗ್ರಹಿಸಿದ್ದಾರೆ.

‘ಸರಕಾರ ಎಂಬುದು ನಿರಂತರ ಪ್ರಕ್ರಿಯೆ ಆಗಿರುವುದರಿಂದ ಬರೀ ಕಟ್ಟಡ ಉದ್ಘಾಟನೆಯನ್ನು ಈ ದಿನ ಪ್ರಧಾನಿ ಮೋದಿ ಮಾಡಬಹುದು ನಾಳೆ ಇನ್ಯಾರಾದರೂ ಮಾಡಬಹುದು. ಆದರೆ, ವಿಷದ ವಾತಾವರಣವನ್ನು ನಿಯಂತ್ರಿಸುವ ಮೂಲಕ ಅಂಬೇಡ್ಕರ್ ಆಶಯಗಳನ್ನು ಕಾಪಾಡಬೇಕಿರುವುದು ದೇಶದ ಪ್ರಧಾನಿಯ ಆದ್ಯ ಕರ್ತವ್ಯ ಎಂದು ಹೇಳಲು ಬಯಸುತ್ತೇನೆ. ಜೊತೆಗೆ ಕಾಂಗ್ರೆಸ್ ಅವಧಿಯಲ್ಲಿ ನಡೆದಿರುವ ಮಹತ್ವದ ಕೆಲಸಗಳಲ್ಲಿ ಇದೂ ಒಂದಾಗಿದ್ದು ಎಲ್ಲರೂ ಈ ಸಂಗತಿಯನ್ನು ಗಮನಿಸಬೇಕೆಂದು ವಿನಂತಿಸುತ್ತೇನೆ' ಎಂದು ಮಹದೇವಪ್ಪ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News