ಬಿಜೆಪಿ ಮುಖಂಡರ ಹೇಳಿಕೆ ಸೈನ್ಯಕ್ಕೆ ಮಾಡಿದ ಅವಮಾನ: ದಿನೇಶ್ ಗುಂಡೂರಾವ್
ಬೆಂಗಳೂರು, ಜೂ. 20: 'ಅಗ್ನಿಪಥ್' ವಿರುದ್ಧ ಹೋರಾಡುತ್ತಿರುವ ಯುವಕರ ಬಗ್ಗೆ ಬಿಜೆಪಿಯವರ ಹೇಳಿಕೆಗಳು ಆ ಪಕ್ಷದ ಮನೋವಿಕಾರವನ್ನು ಅನಾವರಣ ಮಾಡಿದೆ. ಯೋಜನೆಯ ಮೂಲಕ ಆಯ್ಕೆಯಾಗಿ ನಿರ್ಗಮಿಸುವ ಅಗ್ನಿವೀರರು ಬಿಜೆಪಿ ಕಚೇರಿ ಕಾಯುವ ಸೆಕ್ಯೂರಿಟಿ ಗಾರ್ಡ್ ಆಗಲು ಆದ್ಯತೆ ಎಂದಿರುವ ಕೈಲಾಶ್ ಹೇಳಿಕೆ ಖಂಡನೀಯ. ಈ ಹೇಳಿಕೆ ಯುವ ಸಮುದಾಯ ಮಾತ್ರವಲ್ಲ ಇಡೀ ಸೈನ್ಯಕ್ಕೆ ಮಾಡಿದ ಅವಮಾನ' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಬಿಜೆಪಿ ಕಚೇರಿಯ ಬಾಗಿಲು ಕಾಯಲು ಯುವಕರು ಸೈನ್ಯ ಸೇರಬೇಕೆ? ಸೆಕ್ಯೂರಿಟಿ ಗಾರ್ಡ್ ಮಾಡಿಕೊಳ್ಳಲು ಬಿಜೆಪಿಯವರಿಗೆ ಸೈನ್ಯಕ್ಕೆ ಸೇರಿದ ಅಗ್ನಿವೀರರೆ ಬೇಕೆ? ಯುವ ಸಮುದಾಯದ ಬಗ್ಗೆ ಬಿಜೆಪಿಯವರ ನಿಲುವೇನು ಎಂಬುದು ಅವರ ಹೇಳಿಕೆಗಳಿಂದಲೇ ತಿಳಿಯುತ್ತದೆ. ಸೇನೆಯಲ್ಲಿ ಸೇವೆ ಸಲ್ಲಿಸಿದವರು ಬಿಜೆಪಿಯ ಪರಿಚಾರಕರಾಗಬೇಕೆಂಬುದು ಬಿಜೆಪಿ ನಾಯಕರ ಅಜೆಂಡಾವೇ?' ಎಂದು ಪ್ರಶ್ನಿಸಿದ್ದಾರೆ.
‘ಇತ್ತ ಗೃಹ ಸಚಿವ ಆರಗ ಜ್ಞಾನೇಂದ್ರ ‘ಅಗ್ನಿಪಥ್' ವಿರುದ್ಧ ಬೀದಿಗೆ ಬಿದ್ದಿರುವ ಯುವಕರನ್ನು ಪುಂಡರು ಎಂದಿದ್ದಾರೆ. ಜ್ಞಾನೇಂದ್ರ ಅವರೆ, ಸೈನ್ಯಕ್ಕೆ ಸೇರುವುದಾಕ್ಕಾಗಿಯೇ ಲಕ್ಷಾಂತರ ಯುವಕರು ತಪ್ಪಸ್ಸಿನಂತೆ ಶ್ರಮ ಪಟ್ಟಿರುತ್ತಾರೆ. ಆ ಯುವಕರಿಗೆ ಕೇವಲ 4 ವರ್ಷ ಕೆಲಸ ಕೊಟ್ಟು, ನಂತರ ಮನೆಗೆ ಕಳಿಸಿದರೆ ಅವರೇನು ಮಾಡಬೇಕು? ಯುವಕರು ಪ್ರತಿಭಟಿಸುವುದು ತಪ್ಪೆ?' ಎಂದು ದಿನೇಶ್ ಗುಂಡೂರಾವ್ ಕೇಳಿದ್ದಾರೆ.
‘ಅಗ್ನಿಪಥ್ ಕೇವಲ ಯುವಕರ ಬದುಕಿಗೆ ಮಾತ್ರ ಸಂಬಂಧಿಸಿದಲ್ಲ. ದೇಶದ ಭದ್ರತೆಯ ವಿಚಾರದಲ್ಲೂ ಇದು ಅತ್ಯಂತ ಅಪಾಯಕಾರಿ ಪ್ರಯೋಗ. ದೇಶದ ರಕ್ಷಣೆಯಲ್ಲಿ ತೊಡಗಿಕೊಳ್ಳುವ ಹಾಗೂ ಗಡಿ ಕಾಯುವ ಯೋಧನನ್ನು ರೂಪಿಸಲು ವರ್ಷಗಳೇ ಬೇಕು. ಕೇವಲ 6 ತಿಂಗಳ ತರಬೇತಿ ಪಡೆದ ಯುವಕ ಪರಿಪೂರ್ಣ ಯೋಧನಾಗಲು ಸಾಧ್ಯವೆ? ಕೇಂದ್ರಕ್ಕೆ ದೇಶದ ಭದ್ರತಾ ವಿಚಾರದಲ್ಲಿ ರಾಜಿಯೇಕೆ?' ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.