ವಿಚಾರಣೆ ನೆಪದಲ್ಲಿ ರಾಹುಲ್‌ ಗಾಂಧಿಗೆ ಕಿರುಕುಳ: ಮಾಜಿ ಸಿಎಂ ಕುಮಾರಸ್ವಾಮಿ ಟೀಕೆ

Update: 2022-06-22 06:38 GMT

ಹಾಸನ: ಈಡಿ ವಿಚಾರಣೆ ಹೆಸರಿನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.‌ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ. 

ಹಾಸನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು; “ರಾಹುಲ್ ಗಾಂಧಿ ಅವರ ಬಗ್ಗೆ ಮಾಹಿತಿ ತೆಗೆದುಕೊಳ್ಳಲು ನಿರಂತರವಾಗಿ ವಿಚಾರಣೆಗೆ ಕರೆಯುತ್ತಿದ್ದಾರೆ. ವಿಚಾರಣೆ ಮಾಡಲು ಐದು ದಿನಗಳು ಬೇಕಾ? ಎಲ್ಲಾ ದಾಖಲಾತಿಗಳೂ ಈಡಿ ಬಳಿಯೇ ಇರುತ್ತದೆ. ಅರ್ಧ ಗಂಟೆಯಲ್ಲೇ ಎಲ್ಲಾ ವಿಚಾರಣೆ‌ ಮಾಡಿ ಮುಗಿಸಬಹುದು” ಎಂದು ಅಭಿಪ್ರಾಯಪಟ್ಟರು.

ಸುಮ್ಮನೆ ರಾಹುಲ್‌ ಗಾಂಧಿ ಅವರಿಗೆ ಕಿರಿಕುಳ ನೀಡುವ ದುರುದ್ದೇಶದಿಂದ ಈ ರೀತಿ ವಿಚಾರಣೆ ಮಾಡುತ್ತಿದ್ದಾರೆ. ಸುಬ್ರಹ್ಮಣ್ಯಸ್ವಾಮಿ ದೂರು ನೀಡಿದರು ಎಂದು ತನಿಖೆ ಆರಂಭಿಸಿದ್ದಾರೆ. ಕರ್ನಾಟಕದಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಸ್ವತಃ ಪ್ರಧಾನಿಗಳಿಗೇ ಪತ್ರ ಬರೆದು 40% ಕಮಿಷನ್‌ ಬಗ್ಗೆ ದೂರಿದ್ದರು. ಈ ಬಗ್ಗೆ ಯಾಕೆ ಇಲ್ಲಿಯವರೆಗೆ ತನಿಖೆ ‌ನಡೆಸಲಿಲ್ಲ ಎಂದು‌ ಅವರು ಪ್ರಶ್ನೆ ಮಾಡಿದರು.

ಕೇವಲ ರಾಜಕೀಯ ಕಾರಣಗಳನ್ನು ಮುಂದಿಟ್ಟುಕೊಂಡು ರಾಹುಲ್‌ ಗಾಂಧಿ ಅವರ ವಿಚಾರಣೆ ನಡೆಸಲಾಗುತ್ತಿದೆ ಎನ್ನುವುದು ಎಲ್ಲರಿಗೂ ಅರ್ಥವಾಗುತ್ತದೆ ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News