ಸಿದ್ದರಾಮಯ್ಯರ ಹುಚ್ಚು ಬಿಡಿಸಲು ಪ್ರಪಂಚದಲ್ಲೇ ಔಷಧಿ ಇಲ್ಲ : ಕೆ.ಎಸ್ ಈಶ್ವರಪ್ಪ

Update: 2022-06-22 11:43 GMT

ಶಿವಮೊಗ್ಗ : ಸಿದ್ದರಾಮಯ್ಯರ ಹುಚ್ಚು ಬಿಡಿಸಲು ಪ್ರಪಂಚದಲ್ಲೇ ಔಷಧಿ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ಬಗ್ಗೆ ಟೀಕೆ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಶಿವಮೊಗ್ಗದಲ್ಲಿ ತಿರುಗೇಟು ನೀಡಿದ ಅವರು, ಎಂತೆಂಥಾ ಸಂದರ್ಭದಲ್ಲಿ ದೇಶಕ್ಕಾಗಿ ಮೋದಿ ಸೇವೆ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ವಿಶ್ವವೇ ಮೆಚ್ಚುವಂತೆ ಕೆಲಸ ಮಾಡಿದ್ದಾರೆ. ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಉಚಿತವಾಗಿ ವ್ಯಾಕ್ಸಿನ್ ಕೊಟ್ಟಿರುವುದು ಪ್ರಧಾನಿ ಮೋದಿ. ಇದನ್ನು ಬೇರೆ ದೇಶದವರೇ ಮೆಚ್ಚಿಕೊಂಡಿದ್ದಾರೆ. ಸಿದ್ದರಾಮಯ್ಯ ಟೀಕೆಗೆ ಬೆಲೆ ಇಲ್ಲ. ಟೀಕೆ ಮಾಡುವ ಸಲುವಾಗಿಯೇ ಟೀಕೆ ಮಾಡಿದರೆ ನಮ್ಮ ದೇಶದಲ್ಲಿ ಅದಕ್ಕೆ ಔಷಧಿ ಇಲ್ಲ ಎಂದರು.

ಇನ್ನು ಜನರೇ ಕಾಂಗ್ರೆಸ್‌ನವರಿಗೆ ದೇಶದಲ್ಲಿ ಉತ್ತರ ಕೊಟ್ಟಿದ್ದಾರೆ. ಇದೀಗ ಕಾಂಗ್ರೆಸ್ ಬೆಂಬಲಿತ ಮಹಾರಾಷ್ಟ್ರ ಸರ್ಕಾರಕ್ಕೂ ಔಷಧಿ ಸಿಗುತ್ತಿದೆ. ರಾಜ್ಯದಲ್ಲೂ ಕೂಡ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೂ ಪೂರ್ಣ ಔಷಧಿ ಕೊಟ್ಟು ಓಡಿಸುತ್ತಾರೆ. ಮಹಾರಾಷ್ಟ್ರ ಸರ್ಕಾರ ಕೂಡ ಪತನವಾಗಲಿದೆ. ಕಾಂಗ್ರೆಸ್ ಮುಟ್ಟಿದವರೆಲ್ಲಾ ನಾಶವಾಗುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದ್ದಾರೆ.

ಇನ್ನು ಶಿವಮೊಗ್ಗದಲ್ಲಿ ಪೊಲೀಸರಿಗೆ ಚಾಕು ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜನ ಸಾಮಾನ್ಯರಿಗೆ ರಕ್ಷಣೆ ಮಾಡುವ ಪೊಲೀಸರ ಮೇಲೆಯೇ ಮುಸ್ಲಿಂ ಗೂಂಡಾಗಳು ಚಾಕು ಹಾಕಿದ್ದಾರೆ. ಚಾಕು ಹಾಕಿ ತಪ್ಪಿಸಿಕೊಂಡು ಹೋಗುವ ಪ್ರಯತ್ನ ಇಲಾಖೆಗೂ ಅಪಮಾನ ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.

ಕಾನೂನು ಬಾಹಿರ ಚಟುವಟಿಕೆಗಳನ್ನು ಆರೋಪಿಗಳು ಧೈರ್ಯವಾಗಿ ಮಾಡ್ತಿದ್ದಾರೆ ಅಂದ್ರೆ ಶಾಸಕನಾಗಿ ನನಗೇ ನಾಚಿಕೆಯಾಗುತ್ತಿದೆ. ಕೆಲವರು ಯಾವ ಭಯ ಇಲ್ಲದೇ ಗೂಂಡಾಗಿರಿ ಮಾಡ್ತಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದವರಿಗೆ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ ಅಂತ ತಿಳಿಸಿದ್ದಾರೆ. ಚಾಕು ಇರಿತಕ್ಕೆ ಒಳಗಾಗಿ ಗಾಯಗೊಂಡಿದ್ದ ಕಾನ್ಸ್‌ಟೇಬಲ್ ಆರೋಗ್ಯ ಸುಧಾರಿಸುತ್ತಿದೆ. ಜೀವಕ್ಕೆ ಯಾವುದೇ ತೊಂದರೆ ಇಲ್ಲ. ಪೊಲೀಸರು ಆರೋಪಿಗೆ ಗುಂಡು ಹೊಡೆದಿದ್ದಾರೆ. ಪೊಲೀಸರ ಕ್ರಮವನ್ನು ಸ್ವಾಗತಿಸುತ್ತೇನೆ. ಪೊಲೀಸರ ಬಗ್ಗೆ ಭಯ ಇದೆ. ಆದರೆ ಪೊಲೀಸರು ಆರೋಪಿಗಳಿಗೆ ಇನ್ನು ಭಯ ಹುಟ್ಟಿಸುವ ಅಗತ್ಯವಿದೆ. ಕೆಲವು ಮುಸ್ಲಿಂ ಗೂಂಡಾಗಳು ಶಿವಮೊಗ್ಗವನ್ನು ಗೂಂಡಾ ರಾಜ್ಯ ಮಾಡಲು ಹೊರಟ್ಟಿದ್ದಾರೆ. ಇಂತಹವರ ವಿರುದ್ಧ ಪೊಲೀಸರು ಬಿಗಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News