ದೇಶದಲ್ಲಿ ಗಾಂಧಿ ಕುಟುಂಬಕ್ಕೊಂದು ಕಾನೂನು, ಜನಸಾಮಾನ್ಯರಿಗೊಂದು ಕಾನೂನಿಲ್ಲ: ಗೃಹಸಚಿವ ಆರಗ ಜ್ಞಾನೇಂದ್ರ

Update: 2022-06-22 13:03 GMT

ಚಿಕ್ಕಮಗಳೂರು: ಈ ದೇಶದಲ್ಲಿ ಜನಸಾಮಾನ್ಯರಿಗೊಂದು ಕಾನೂನು ಗಾಂಧಿ ಕುಟುಂಬಕ್ಕೊಂದು ಕಾನೂನಿಲ್ಲ. ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನಿದೆ. ಈ ನೆಲದ ಕಾನೂನನ್ನು ಎಲ್ಲರೂ ಗೌರವಿಸಬೇಕು. ರಾಹುಲ್‍ಗಾಂಧಿ, ಸೋನಿಯಾಗಾಂಧಿ ವಿರುದ್ಧ ಇಡಿ ವಿಚಾರಣೆ ಮಾಡಿದ್ದಕ್ಕೆ ದೇಶಾದ್ಯಂತ ಕಾಂಗ್ರೆಸ್‍ನವರು ಪ್ರತಿಭಟನೆ ಮಾಡುವ ಮೂಲಕ ಕಾಂಗ್ರೆಸ್‍ನವರಿಗೆ ಈ ದೇಶದ ಕಾನೂನಿನ ಮೇಲೆ ಗೌರವ ಇಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಬಗ್ಗೆ ಸಹಜವಾಗಿ ಇಡಿ ಅಧಿಕಾರಿಗಳು ರಾಹುಲ್‍ಗಾಂಧಿ ಹಾಗೂ ಸೋನಿಯಾಗಾಂಧಿ ಅವರನ್ನು ವಿಚಾರಣೆ ಮಾಡುತ್ತಿದ್ದಾರೆ. ಇಡಿ ಕೇವಲ ವಿಚಾರಣೆ ಮಾಡಿದ್ದಕ್ಕೆ ಕಾಂಗ್ರೆಸ್‍ನವರು ಪ್ರತಿಭಟನೆ ಮಾಡುತ್ತಿದ್ದಾರೆ. ಕಾಂಗ್ರೆಸ್‍ನವರಿಗೆ ಈ ದೇಶದ ಕಾನೂನಿನ ಬಗ್ಗೆ ಕಿಂಚಿತ್ ಗೌರವವಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ. ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊ ಳ್ಳುತ್ತಿದೆ. ಆ ಪಕ್ಷವನ್ನು ಜನ ತುಚ್ಛವಾಗಿ ನೋಡುತ್ತಿದ್ದಾರೆ ಎಂದು ದೂರಿದರು.

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅತೃಪ್ತ ಶಾಸಕರು ರೆಸಾರ್ಟ್‍ಗೆ ತೆರಳಿದ್ದಾರೆ. ಇದಕ್ಕೆ ಉದ್ಧವ್ ಠಾಕ್ರೆಯವರ ಉದ್ಧಟತನವೇ ಕಾರಣ. 2019ರಲ್ಲಿ ಬಿಜೆಪಿ-ಶಿವಸೇನೆ ಒಟ್ಟಿಗೆ ಸೇರಿ ಜನರ ಬಳಿಗೆ ಹೋಗಿದ್ದವು, ಜನರ ತೀರ್ಮಾನಕ್ಕೆ ವಿರುದ್ಧವಾಗಿ ಶಿವಸೇನೆ ನಡೆದುಕೊಂಡಿದ್ದರಿಂದ ಇಂತಹ ಪರಿಸ್ಥಿತಿ ಬಂದಿದೆ. ಉದ್ಧವ್ ಠಾಕ್ರೆಯವರ ಉದ್ಧಟತನ ಮಾಡಿ 8 ಪಕ್ಷಗಳನ್ನು ಒಟ್ಟಿಗೆ ಸೇರಿಸಿಕೊಂಡು ಮುಖ್ಯಮಂತ್ರಿಯಾದರು. ಈ ಮೈತ್ರಿ ಬಹಳಕಾಲ ಉಳಿಯಲ್ಲ ಎಂದು ಅಂದೇ ಗೊತ್ತಿತ್ತು. ಇವತ್ತು ಅದರಂತೆಯೇ ಎಲ್ಲಾ ನಡೆಯುತ್ತಿದೆ ಎಂದರು.

ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಶೇ.100ರಷ್ಟು ಕ್ಷೀಣಿಸುವರೆಗೂ ನಕ್ಸಲ್ ನಿಗ್ರಹ ಪಡೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ. ನಕ್ಸಲ್ ನಿಗ್ರಹ ಪಡೆಯನ್ನು ಈಗಾಗಲೇ ಪರಿಚಯಿಸಿದ್ದೇವೆ. ಸಂಪೂರ್ಣವಾಗಿ ನಕ್ಸಲ್ ಚಟುವಟಿಕೆ ನಿಗ್ರಹ ಆಗುವವರೆಗೂ ಕಾದು ನೋಡುತ್ತೇವೆ ಎಂದ ಅವರು, ಇದುವರೆಗೂ ಅನೇಕ ನಕ್ಸಲರ ಬಂಧನವಾಗಿದೆ. ಕೆಲವರು ಶರಣಾಗತಿಯೂ ಆಗಿದ್ದಾರೆ, ಬೇರೆ ರಾಜ್ಯದಲ್ಲಿರುವ ನಕ್ಸಲರ ವಿರುಧ್ಧ ಅಲ್ಲಿನ ಸರಕಾರ ಕ್ರಮ ಕೈಗೊಂಡಾಗ ಇಲ್ಲಿಗೆ ಬರುತ್ತಾರೆ. ಇಲ್ಲಿ ಕ್ರಮ ಕೈಗೊಂಡಾಗ ಅಲ್ಲಿಗೆ ಹೋಗುತ್ತಾರೆ. ಇದಕ್ಕೆ ಅಂತ್ಯಹಾಡಲು ನಕ್ಸಲ್ ನಿಗ್ರಹ ಪಡೆ ಸಕ್ರಿಯವಾಗಿರಲಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News