ಜು.3-4ಕ್ಕೆ ರಾಯಚೂರಿನಲ್ಲಿ ಜನಶಕ್ತಿ ಸಂಘಟನೆಯ 3ನೇ ರಾಜ್ಯ ಸಮ್ಮೇಳನ: ಕೆ.ಎಲ್. ಅಶೋಕ್

Update: 2022-06-22 13:20 GMT

ಚಿಕ್ಕಮಗಳೂರು, ಜೂ.22: ಕರ್ನಾಟಕ ಜನಶಕ್ತಿ ಸಂಘಟನೆಯಿಂದ ಜು.3 ಮತ್ತು 4ರಂದು ರಾಯಚೂರು ನಗರದ ಜಂಬಲದಿನ್ನಿ ಕಲಾ ಮಂದಿರದಲ್ಲಿ ರಾಜ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಜನಶಕ್ತಿ ಸಂಘಟನೆಯ ರಾಜ್ಯ ಸಂಚಾಲಕ ಕೆ.ಎಲ್.ಅಶೋಕ್ ತಿಳಿಸಿದರು.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಿವೃತ್ತ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್‍ವಾಡ್ ಸೇರಿದಂತೆ ರೈತ ಸಂಘಟನೆಯ 3 ಬಣದ ಮುಖಂಡರು, ದಲಿತ ಸಂಘಟನೆಯ ಎಲ್ಲ ಬಣಗಳ ಮುಖಂಡರು ಮತ್ತು ಹೆಸರಾಂತ ಹೋರಾಟಗಾರರು ಭಾಗವಹಿಸಲಿದ್ದಾರೆ ಎಂದರು.

ನವಭಾರತ ನಿರ್ಮಾಣಕ್ಕಾಗಿ, ನಾಳೆಯ ನೆಮ್ಮದಿಗಾಗಿ ಈ ಸಮ್ಮೇಳನದ ಹಮ್ಮಿಕೊಳ್ಳಲಾಗಿದೆ. ಪ್ಯಾಸಿಸ್ಟ್ ಸಂಸ್ಕೃತಿ ಮತ್ತು ಸರ್ವಾಧಿಕಾರವನ್ನು ಕೊನೆಗಾಣಿಸಬೇಕರುವುದು ಇಂದಿನ ಅಗತ್ಯವಾಗಿದ್ದು, ಸಮ್ಮೇಳನದ ಮೂಲಕ ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಲಾಗುವುದು ಎಂದ ಅವರು, ರಾಜ್ಯದ 17 ಜಿಲ್ಲೆಗಳಲ್ಲಿ ಜನಶಕ್ತಿ ಸಂಘಟನೆಯು ಅನೇಕ ಹೋರಾಟಗಳನ್ನು ಮಾಡಿದೆ. ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯಲ್ಲೂ ದಲಿತರೂ ಸೇರಿದಂತೆ ಎಲ್ಲ ವರ್ಗಗಳ ಜನರಿಗೆ ನಿವೇಶನ ಭೂಮಿ, ಸ್ಮಶಾನ ಭೂಮಿ, ಭೂ ರಹಿತರಿಗೆ ಕೃಷಿ ಭೂಮಿ, ಅರಣ್ಯ ಯೋಜನೆ ವಿರೋಧಿಸಿ ಹಲವಾರು ಹೋರಾಟಗಳನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಕೊಂಚ ಯಶಸ್ಸನ್ನೂ ಪಡೆದಿದ್ದೇವೆ. ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿನ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ವಿರುದ್ಧ ಸೇರಿದಂತೆ ಅನೇಕ ಹೋರಾಟಗಳನ್ನು ಮಾಡಿದ್ದೇವೆ. ದುಡಿಯುವ ಜನ, ಧಮನಿತರ ಮತ್ತು ಯುವಜನತೆಯ ಏಳಿಗೆಗಾಗಿ ಜನಜಾಗೃತಿ ಮೂಡಿಸಲು ಜನಶಕ್ತಿ ಸಂಘಟನೆ ದುಡಿಯುತ್ತಿದ್ದು, ಈಗಿನ ಸರಕಾರಗಳ ಸರ್ವಾಧಿಕಾರಿ ಧೋರಣೆ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸಮ್ಮೇಳನ ಆಯೋಜಿಸಲಾಗಿದೆ ಎಂದರು.

ಸಂಘಟನೆಯ ಜಿಲ್ಲಾ ಸಂಚಾಲಕ ಗೌಸ್ ಮೋಹಿದ್ದೀನ್ ಮಾತನಾಡಿ, ಒತ್ತುವರಿ ಭೂಮಿಯನ್ನು ಭೂ ಮಾಲಕರಿಗೆ ಲೀಸ್‍ಗೆ ನೀಡಲು ಸರಕಾರ ಮುಂದಾಗಿದ್ದು, ಇದು ಅವೈಜ್ಞಾನಿಕ. ಒತ್ತುವರಿ ತೆರವು ಮಾಡಿದ ಭೂಮಿಯನ್ನು ಭೂ ಹೀನರಿಗೆ ನೀಡಬೇಕು ಎಂದು ಒತ್ತಾಯಿಸಿದ ಅವರು, ಕೇಂದ್ರ ಮತ್ತು ರಾಜ್ಯ ಸರಕಾರಗಳ ದುರಾಡಳಿತದ ವಿರುದ್ಧ ಮಾತನಾಡಿದರೇ ಅವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತಿದೆ. ನಗರಸಭೆಯಿಂದ ಜೆಸಿಬಿ ಕಾರ್ಯಾಚರಣೆ ನಡೆಯುತ್ತಿದ್ದು, ಬಿಜೆಪಿಯವರು ನಗರದಲ್ಲಿ ಬಡವರನ್ನು ಗುರಿಯಾಗಿಸಿಕೊಂಡು ಅವರ ಬದುಕನ್ನು ನಾಶ ಮಾಡಲು ಮುಂದಾಗಿದೆ, ಶಾಸಕ ಸಿ.ಟಿ.ರವಿ ಸೇರಿದಂತೆ ಬಿಜೆಪಿ ಮುಖಂಡರು ನಗರದಲ್ಲಿ ಸರಕಾರಿ ಕೆರೆ ಒತ್ತುವರಿ ಮಾಡಿದ್ದಾರೆ, ನಗರಸಭೆ ಅಧ್ಯಕ್ಷರು, ಅಧಿಕಾರಿಗಳಿಗೆ ಬಿಜೆಪಿ ನಾಯಕರ ಒತ್ತುವರಿ ತೆರವು ಮಾಡಲು ಜೆಸಿಬಿಯೊಂದಿಗೆ ಏಕೆ ಹೋಗುವುದಿಲ್ಲ ಎಂದು ಪ್ರಶ್ನಿಸಿದರು.

18ರಿಂದ 21ವರ್ಷದ ಯುವಕರನ್ನು ಸೇನೆಗೆ ನೇಮಿಸಿಕೊಳ್ಳುವ ಅಗ್ನಿಪಥ ಯೋಜನೆಯ ಮೂಲಕ ಗೂಂಡಾ ಪಡೆಯನ್ನು ಹುಟ್ಟುಹಾಕುವ ಷಡ್ಯಂತರವನ್ನು ಕೇಂದ್ರ ಸರಕಾರ ಮಾಡುತ್ತಿದೆ. ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹೇಳುವಂತೆ ಸೈನ್ಯದಲ್ಲಿ 4ವರ್ಷಗಳ ತರಬೇತಿಯನ್ನು ನೀಡಲಾಗುತ್ತದೆ. ಆದರೆ ಅಗ್ನಿಪಥ್ ಯೋಜನೆಯಲ್ಲಿ ಕೇವಲ 6 ತಿಂಗಳ ತರಬೇತಿ ನೀಡಲಾಗುತ್ತದೆ. ಈ ತರಬೇತಿ ಪಡೆದ ಯುವಕರು ಸೈನ್ಯದಲ್ಲಿ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಕೇಂದ್ರ ಸರಕಾರ ಈ ಯೋಜನೆಯನ್ನು ಕೈಬಿಡಬೇಕು ಎಂದರು.

ಮುಖಂಡ ಯೂಸೂಫ್ ಹಾಜಿ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲ ಧರ್ಮದ ಜನರು ಸಾಮರಸ್ಯದಿಂದ ಬದುಕುತ್ತಿದ್ದು, ಇಲ್ಲಿನ ಸಾಮರಸ್ಯ ಕದಡಲು ಕೆಲವರು ಸಂಚು ಮಾಡಿದ್ದಾರೆ. ಬುಲ್ಡೋಜರ್ ಸಂಸ್ಕೃತಿಯಿಂದಾಗಿ ಜಿಲ್ಲೆಯಲ್ಲಿ ಶಾಂತಿ ಕದಡಲು ನಗರಸಭೆ ಮುಂದಾಗಿದೆ. ಈ ಮೂಲಕ ಬಡವರ ಬದುಕು ನಾಶ ಮಾಡುವ ಕೆಲಸಕ್ಕೆ ನಗರಸಭೆ ಮುಂದಾಗಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅತೀಕ್ ಅಹ್ಮದ್, ಟಿ.ಎಲ್.ಗಣೇಶ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News