ಸಾರಿಗೆ ಸಿಬ್ಬಂದಿ ತಮ್ಮ ಮಕ್ಕಳಿಗೆ ಅತ್ಯುನ್ನತ ವಿದ್ಯಾಭ್ಯಾಸ ಕೊಡಿಸುತ್ತಿರುವುದು ಶ್ಲಾಘನೀಯ: ಎಂ.ಚಂದ್ರಪ್ಪ

Update: 2022-06-22 14:06 GMT

ಬೆಂಗಳೂರು, ಜೂ. 22: ‘ಸಾರಿಗೆ ಸಂಸ್ಥೆಯ ಸಿಬ್ಬಂದಿ ಹಗಲಿರುಳುಗಳ ಪರಿವೆ ಮರೆತು ಬಸ್ಸುಗಳನ್ನು ಚಾಲನೆ ಮಾಡುತ್ತಾ, ಕಷ್ಟಪಟ್ಟು ದುಡಿಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೂ ಅವರ ಮಕ್ಕಳಿಗೆ ಅತ್ಯುನ್ನತ ವಿದ್ಯಾಭ್ಯಾಸ ನೀಡಿಸುವಲ್ಲಿ ಸಫಲರಾಗಿರುವುದು ನಿಜಕ್ಕೂ ಶ್ಲಾಘನೀಯ ಹಾಗೂ ಮಾದರಿಯಾದದ್ದು' ಎಂದು ಕೆಎಸ್ಸಾರ್ಟಿಸಿ ಅಧ್ಯಕ್ಷ ಹಾಗೂ ಶಾಸಕ ಎಂ.ಚಂದ್ರಪ್ಪ ಇಂದಿಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬುಧವಾರ ಇಲ್ಲಿನ ಶಾಂತಿನಗರದಲ್ಲಿನ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಬೀದರ್ ವಿಭಾಗದ ಭಾಲ್ಕಿ ಘಟಕದ ಚಾಲಕ ಮಾಣಿಕ್ ರಾವ್ ದಂಪತಿಯ ಪುತ್ರ ಅನುರಾಗ್ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ 569ನೆ ಸ್ಥಾನ ಪಡೆದು ಐಪಿಎಸ್ ಆಯ್ಕೆಯಾಗಿದ್ದು, ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿದ ಬಳಿಕ ಮಾತನಾಡಿದ ಅವರು, ‘ಇದು ನಮ್ಮ ಸಾರಿಗೆ ಸಂಸ್ಥೆಗೆ ಹೆಮ್ಮೆಯ ವಿಷಯ' ಎಂದು ತಿಳಿಸಿದರು.

‘ಸಾರಿಗೆ ಸಂಸ್ಥೆ ಸಿಬ್ಬಂದಿ ಮಾಣಿಕ್ ರಾವ್ ಮತ್ತು ತಾಯಿ ಕಾಶಿಬಾಯಿ ಪುತ್ರ ಅನುರಾಗ್ ಉನ್ನತ ಸ್ಥಾನಕ್ಕೇರಿಸಲು ಶ್ರಮಿಸಿದ ದಂಪತಿಗೆ ಅಭಿನಂದನೆಗಳು. ಅನುರಾಗ್ ಅವರು ತಮ್ಮ ಆಡಳಿತದಲ್ಲಿ ಸಮಾಜದ ಕೆಳಮಟ್ಟದ ಪ್ರತಿಯೊಬ್ಬ ಪ್ರಜೆಯ, ನೊಂದವರ ಕೂಗಿಗೆ ಧ್ವನಿಯಾಗಬೇಕು' ಎಂದು ಚಂದ್ರಪ್ಪ ಇದೇ ವೇಳೆ ಅಪೇಕ್ಷೆಪಟ್ಟರು.

‘ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಬೆಳಗ್ಗೆ 9 ಗಂಟೆಗೆ ಕಚೇರಿಗೆ ಬಂದು ತಮ್ಮ ಕರ್ತವ್ಯವನ್ನು ಪ್ರಾರಂಭಿಸುತ್ತಾರೆ. ಇಂತಹ ಅಧಿಕಾರಿಗಳು ಸಮಾಜಕ್ಕೆ ಮಾದರಿ. ಯಾರೋ ನಮ್ಮನ್ನು ಕೇಳುತ್ತಾರೆಂದು ಕಾರ್ಯನಿರ್ವಹಿಸಬಾರದು. ನಾವೇ ನಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿದ್ದಲ್ಲಿ ನಮ್ಮಿಂದ ಸಮಾಜಕ್ಕೆ ಒಳಿತಾಗುತ್ತದೆ. ಅದು ನೂತನ ಅಧಿಕಾರಿಯಾಗಲಿರುವ ಅನುರಾಗ್ ಅವರಿಂದ ಆಗಲಿ' ಎಂದು ಚಂದ್ರಪ್ಪ ಆಶಿಸಿದರು.

ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಮಾತನಾಡಿ, ‘ಬಹಳಷ್ಟು ಮಂದಿಗೆ ಐಎಎಸ್, ಐಪಿಎಸ್ ಆಗಬೇಕೆಂಬ ಕನಸ್ಸಾಗಿದ್ದರೂ ಅದನ್ನು ನನಸು ಮಾಡಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಸತತ ಪರಿಶ್ರಮ, ಶ್ರದ್ಧೆಯ ಮೂಲಕ ನಿಯಮಬದ್ಧ ಕಲಿಕೆಯ ಸಾಧನೆ ಮಾಡಬಹುದು. ಅದನ್ನು ಸಂಸ್ಥೆಯ ಚಾಲಕರ ಪುತ್ರ ಮಾಡಿರುವುದು ನಮ್ಮ ಸಂಸ್ಥೆಯ ಹೆಮ್ಮೆ' ಎಂದು ಹೇಳಿದರು. ಈ ವೇಳೆ ಸಂಸ್ಥೆಯ ನಿರ್ದೇಶಕ ನವೀನ್ ಭಟ್, ಸಂಸ್ಥೆಯ ಚಾಲಕ ಮಾಣಿಕ್ ರಾವ್, ಆತನ ಪತ್ನಿ ಕಾಶಿಬಾಯಿ, ಅವರ ಪುತ್ರ ಅನುರಾಗ್ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News