ಪರಿಷ್ಕೃತ ಪಠ್ಯದಲ್ಲಿ ಕೃತಿಚೌರ್ಯ ಆರೋಪ: ಕಾನೂನು ಹೋರಾಟಕ್ಕೆ ಮುಂದಾದ ಸಾಹಿತಿ ಗಿರಿರಾಜ ಹೊಸಮನಿ

Update: 2022-06-22 15:19 GMT
ಸಾಂದರ್ಭಿಕ ಚಿತ್ರ (PTI)

ರಾಯಚೂರು: ಪಠ್ಯಪುಸ್ತಕ ಪರಿಷ್ಕರಣೆ ವಿವಾದದ ಮಧ್ಯೆ ಮತ್ತೊಂದು ಯಡವಟ್ಟು ಇದೀಗ ಬಯಲಾಗಿದ್ದು, ಎರಡು ದಶಕಗಳ ಹಿಂದಿನ ಕವಿತೆಯನ್ನು ಕದ್ದು ಹೊಸ ಪಠ್ಯ ಪುಸ್ತಕದಲ್ಲಿ ಪ್ರಕಟಣೆ ಮಾಡಲಾಗಿದೆ ಎಂದು ಆರೋಪಿಸಿ ಹಿರಿಯ ಸಾಹಿತಿ ಗಿರಿರಾಜ್ ಹೊಸಮನಿ ಅವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. 

ಈ ಹಿನ್ನೆಲೆ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಮತ್ತೊಂದು ಅವಾಂತರ ಬೆಳಕಿಗೆ ಬಂದಿದೆ. ಸದ್ಯ 7ನೆ ತರಗತಿಯ ದ್ವಿತೀಯ ಭಾಷೆ ಕನ್ನಡ ವಿಭಾಗದ ಪಠ್ಯದಲ್ಲಿನ ಕವಿತೆಯ ಕುರಿತಂತೆ ಅಪಸ್ವರ ಕೇಳಿಬಂದಿದೆ. 

ಆಮೆಯ ಕವಿತೆಯ ಬಗ್ಗೆ ಅದರ ಮೂಲ ರಚನೆಕಾರ ರಾಯಚೂರು ಜಿಲ್ಲೆಯ ನಿವೃತ್ತ ಶಿಕ್ಷಕ, ಸಾಹಿತಿ ಗಿರಿರಾಜ್ ಹೊಸಮನಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 20 ವರ್ಷಗಳ ಹಿಂದೆ 3ನೆ ತರಗತಿಯಲ್ಲಿ ಆಮೆ ಹೆಸರಿನ ಕವಿತೆ ಪ್ರಕಟವಾಗಿದ್ದು, ಈಗ ಅದನ್ನೇ ಜಾಣ ಆಮೆ ಎಂದು ತಿರುಚಿ 7ನೆ ತರಗತಿಯಲ್ಲಿ ಪ್ರಕಟ ಮಾಡಲಾಗಿದೆ. 1973ರಲ್ಲೆ ಪ್ರಕಟಿಸಲಾಗಿದ್ದ ಕವಿತೆಯನ್ನ ನಕಲು ಮಾಡಿದ ಆರೋಪ ಮಾಡಲಾಗಿದೆ.

ಹೊಸಮನಿ ಅವರು ಆಮೆಯ ಕುರಿತಂತೆ ಈ ಹಿಂದೆ ಬರೆದಿದ್ದ ಕವಿತೆ 3ನೆ ತರಗತಿ ಪಠ್ಯದಲ್ಲಿ ಪ್ರಕಟಣೆಗೊಂಡಿತ್ತು. ಆದರೆ, ಈಗ ಅದೇ ಕವಿತೆಯನ್ನ ಭಾಸ್ಕರ್ ನೆಲ್ಯಾಡಿ ಎನ್ನುವವರು ತಿರುಚಿ ಬರೆದಿದ್ದಾರೆ ಎಂದು ಆರೋಪಿಸಲಾಗಿದೆ. ಯಾವುದೇ ಪರಿಷ್ಕರಣೆಯನ್ನು ಮಾಡದೇ ಪಠ್ಯದಲ್ಲಿ ಕವಿತೆ ಅಳವಡಿಸಿದ್ದಕ್ಕೆ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕವಿತೆಯ ಮೂಲ ಕತೃ ಹೊಸಮನಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಕೂಡಲೇ ಆಗಿರುವ ಲೋಪದೋಷ ಸರಿಪಡಿಸಬೇಕು. ಈಗಿನ 7ನೆ ತರಗತಿ ಪಠ್ಯದಿಂದ ತಿರುಚಲಾದ ಕವಿತೆಗೆ ಕತ್ತರಿ ಹಾಕಬೇಕು ಎಂದು ಒತ್ತಾಯಿಸಿದ್ದಾರೆ. 

ಗಿರಿರಾಜ್ ಹೊಸಮನಿ ಬರೆದ ಕವಿತೆಯಲ್ಲಿ ಆಮೆ ಕೆಳಗೆ ಬಿದ್ದು ಸತ್ತು ಹೋಗುತ್ತೆ. ಮಕ್ಕಳನ್ನು ಬೈಯಲು ಹೋಗಿ ಕೆಳಗೆ ಬಿದ್ದು ಆಮೆ ಸತ್ತು ಹೋಗುವುದು ಈ ಕವನದಲ್ಲಿದೆ. ಈಗ ಬರೆದವರ ಪದ್ಯದಲ್ಲಿ ಆಮೆ ಬೈಯಲು ಬಾಯಿ ತೆರೆದು, ಮಕ್ಕಳನ್ನು ಬೈದು ಮತ್ತೆ ಮೇಲೆ ಹೋಗಿ ಕೋಲು ಹಿಡಿಯುತ್ತದೆ ಎಂದು ಬರೆದಿದ್ದಾರೆ. ಆಮೆ ಕೆಳಗೆ ಬಿದ್ದು ಮತ್ತೆ ಮೇಲೆ ಹೇಗೆ ಹೋಗಿತ್ತು? ಕೋಲು ಹಿಡಿಯಲು ಸಾಧ್ಯವೇ ಇಲ್ಲ. ಮೇಲಿನಿಂದ ಕೆಳಗೆ ಬಿದ್ದು ಸತ್ತು ಹೋದ ಆಮೆ ಮೇಲೆ ಕೋಲು ಹೇಗೆ ಹಿಡಿಯಿತು? ಎಂದು ಮಕ್ಕಳು ಪ್ರಶ್ನೆ ಮಾಡಿದರೆ ಶಿಕ್ಷಕರು ಏನು ಉತ್ತರ ನೀಡುತ್ತಾರೆ ಇದು ಸಾಧ್ಯವೇ ಇಲ್ಲ. ಪಠ್ಯಪುಸ್ತಕದ ಸಾಮಥ್ರ್ಯವನ್ನು ಕಡಿಮೆ ಮಾಡುವ ಇಂಥ ಕವಿತೆಗಳನ್ನು ಕಿತ್ತುಹಾಕಬೇಕು ಎಂದು ಶಿಕ್ಷಣ ತಜ್ಞರು ಆಗ್ರಹಿಸಿದ್ದಾರೆ.

ಮೂರ್ಖ ಆಮೆ ಹೋಗಿ ಜಾಣ ಆಮೆ ಎಂದು ಭಾಸ್ಕರ ನೆಲ್ಯಾಡಿ ಹೆಸರಿನಲ್ಲಿ ಕವಿತೆಯನ್ನು ಪ್ರಕಟಿಸಲಾಗಿದೆ. ಅವರದು ಅಪ್ರಕಟಿತ ಕವನ ಸಂಕಲನ. ಅವರದ್ದು ಯಾವುದೇ ಕವನ ಸಂಕಲನ ಪ್ರಕಟಗೊಂಡಿಲ್ಲ. ಈ ಪಠ್ಯ ಪರಿಷ್ಕರಣೆ ಸಮಿತಿ ಕವನ ಆಯ್ಕೆ ಮಾಡಿದ್ದು ತಪ್ಪು ಎಂಬ ಅಭಿಪ್ರಾಯ ಸಾಹಿತ್ಯ ವಲಯದಿಂದ ಕೇಳಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News