ಆರ್ಥಿಕ ಹೊರೆ ತಪ್ಪಿಸಲು ನಿಗಮಗಳ ವಿಲೀನ ತೀರ್ಮಾನ: ಕಂದಾಯ ಸಚಿವ ಆರ್. ಅಶೋಕ್

Update: 2022-06-22 15:52 GMT
ಕಂದಾಯ ಸಚಿವ ಆರ್. ಅಶೋಕ್

ಬೆಂಗಳೂರು: 'ಆರ್ಥಿಕ ಹೊರೆಯಾಗಿರುವ ಅರಣ್ಯ, ಬೆಂಗಳೂರು ನಗರಾಭಿವೃದ್ಧಿ ಸೇರಿದಂತೆ ಸರಕಾರದ ಬಹುತೇಕ ಇಲಾಖೆಗಳಲ್ಲಿರುವ ನಿಗಮಗಳನ್ನು ವಿಲೀನಗೊಳಿಸಲು ತೀರ್ಮಾನಿಸಿದೆ' ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಒಂದೊಂದು ಇಲಾಖೆಯಲ್ಲಿ ನಾಲ್ಕೈದು ನಿಗಮ ಮಂಡಳಿಗಳಿದ್ದು, ಬಹುತೇಕ ನಿಗಮಗಳಿಗೆ ಕೆಲಸವೇ ಇಲ್ಲ. ಅಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿ ಕಾರುಗಳನ್ನು ಬಳಕೆ ಮಾಡುತ್ತಿದ್ದು, ಅರಣ್ಯ ಇಲಾಖೆಯಲ್ಲಿ ಹಣ್ಣಿನ ರಸ ತೆಗೆಯಲು ನಿಗಮ ಸ್ಥಾಪಿಸಲಾಗಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ ಹೊರೆಯಾಗಿದ್ದು, ಅದನ್ನು ಕಡಿತಗೊಳಿಸಬೇಕಿದೆ' ಎಂದು ಹೇಳಿದರು.

‘ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಲವು ನಿಗಮಗಳಿದ್ದರೂ, ಅಲ್ಲಿ ಕೆಲಸಗಳಿವೆ. ಹೀಗಾಗಿ ಕಲ್ಯಾಣ ಇಲಾಖೆಯಂತಹ ಪ್ರಮುಖ ಇಲಾಖೆಗಳಲ್ಲಿರುವ ನಿಗಮಗಳನ್ನು ವಿಲೀನಗೊಳಿಸುವುದಿಲ್ಲ. ಅನಗತ್ಯ ಎನಿಸುವ ನಿಗಮಗಳನ್ನು ವಿಲೀನಗೊಳಿಸಿ ಆಯಾ ಇಲಾಖೆಯಲ್ಲಿ ಒಂದೇ ನಿಗಮವಿರುವಂತೆ ನೋಡಿಕೊಳ್ಳಲಾಗುವುದು' ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

‘ಯೋಜನಾ ಪ್ರಾಧಿಕಾರಗಳ ಸಂಖ್ಯೆಯೂ ಮಿತಿಮೀರಿದ್ದು, ಒಂದು ಪ್ರಾಧಿಕಾರ ಮಾಡುವ ಕೆಲಸವನ್ನು ನಾಲ್ಕೈದು ಪ್ರಾಧಿಕಾರಗಳು ಮಾಡುತ್ತಿವೆ. ಹೀಗಾಗಿ ಜಿಲ್ಲೆಗೊಂದೆ ಯೋಜನಾ ಪ್ರಾಧಿಕಾರ ಕೆಲಸ ಮಾಡುವಂತೆ ನೋಡಿಕೊಳ್ಳುವುದು' ಎಂದ ಅವರು, ‘ರಾಜಕೀಯ ಒತ್ತಡಗಳ ಕಾರಣಕ್ಕಾಗಿ ಹೆಚ್ಚುವರಿ ನಿಗಮಗಳನ್ನು ಸ್ಥಾಪಿಸಿದ್ದು, ಅಂತಹ ನಿಗಮಗಳನ್ನು ಇಲಾಖೆಯೊಂದಿಗೆ ವಿಲೀನಗೊಳಿಸಲಾಗುವುದು' ಎಂದು ಸ್ಪಷ್ಟಪಡಿಸಿದರು.

ಜುಲೈ 16ರಿಂದ ಪೌತಿ ಖಾತೆ ಅಭಿಯಾನ: ‘ಮೃತರ ಹೆಸರಿನಲ್ಲಿರುವ ಭೂದಾಖಲೆಗಳನ್ನು ಹಾಲಿ ವಾರಸುದಾರರಿಗೆ ವರ್ಗಾಯಿಸುವ ‘ಪೌತಿ ಖಾತೆ' ಅಭಿಯಾನವನ್ನು ಜುಲೈ 16ರಿಂದ ಆರಂಭಿಸಲು ತೀರ್ಮಾನಿಸಿದ್ದು, ಇದರಿಂದ ಜನ ಸಾಮಾನ್ಯರಿಗೆ ಅನುಕೂಲವಾಗಲಿದೆ' ಎಂದು ಆರ್.ಅಶೋಕ್ ಮಾಹಿತಿ ನೀಡಿದರು.

‘ಹಲವು ಆಸ್ತಿಗಳು ಹಾಲಿ ವಾರಸುದಾರರಿಗೆ ವರ್ಗಾವಣೆ ಮಾಡುವ ಕೆಲಸ ಆಗದಿರುವುದರಿಂದ ಕೇಂದ್ರ-ರಾಜ್ಯ ಸರಕಾರಗಳಿಂದ ಲಭ್ಯವಾಗುವ ಹಣಕಾಸು ನೆರವನ್ನು ರೈತರು ಪಡೆಯಲಾಗುತ್ತಿಲ್ಲ. ಇದರಿಂದ ಸಾಲ ಪಡೆಯುವುದಕ್ಕೂ ಅಡ್ಡಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ವಾಸ್ತವ್ಯದ ಕಾಲದಲ್ಲೇ ‘ಪೌತಿ ಖಾತೆ' ಇತ್ಯರ್ಥಪಡಿಸಲು ನಿರ್ಧರಿಸಲಾಗಿದೆ' ಎಂದು ಅಶೋಕ್ ವಿವರಿಸಿದರು.

‘ಚಿಕ್ಕಬಳ್ಳಾಪುರದ ಮಂಚೇನಹಳ್ಳಿಯಲ್ಲಿ ತಾವು ನಡೆಸಲಿರುವ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಈ ಯೋಜನೆಗೆ ಚಾಲನೆ ದೊರೆಯಲಿದೆ. ತಾಲೂಕಿನ ಸುಮಾರು 10 ಸಾವಿರ ಪೌತಿ ಖಾತೆಗಳನ್ನು ಹಾಲಿ ವಾರಸುದಾರರಿಗೆ ವರ್ಗಾಯಿಸುವ ಕೆಲಸವಾಗಲಿದೆ. ಇದರಿಂದಾಗಿ ದಶಕಗಳ ಕಾಲದಿಂದ ರೈತರು ಎದುರಿಸುತ್ತಿರುವ ಸಮಸ್ಯೆ ದೂರವಾಗಲಿದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಬದಲಿಗೆ ಎಸಿಗಳಿಗೆ ‘ಪೌತಿ ಖಾತೆ' ಒದಗಿಸುವ ಸ್ವಾತಂತ್ರ್ಯ ನೀಡಲಾಗುವುದು. ಗ್ರಾಮ ವಾಸ್ತವ್ಯದ ವೇಳೆ ಅಲ್ಲಿನ ನೂರಾರು ಮಂದಿ ಹಾಜರಿರುವುದರಿಂದ ಅವರ ಸಮ್ಮುಖದಲ್ಲಿ ಪೌತಿ ಖಾತೆ ದಾಖಲೆಗಳನ್ನು ಸ್ಪಷ್ಟಪಡಿಸಿಕೊಳ್ಳಬಹುದು. ಮೃತರ ಹೆಸರಿನಲ್ಲಿರುವ ಪೌತಿ ಖಾತೆಗಳನ್ನು ವರ್ಗಾಯಿಸುವಾಗ ಅವರ ಮಕ್ಕಳು, ಮೊಮ್ಮಕ್ಕಳ ವಿವರವನ್ನು ಸ್ಥಳೀಯರಿಂದ ಖಚಿತಪಡಿಸಿಕೊಳ್ಳಲಾಗುವುದು' ಎಂದು ಅಶೋಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News