ಪಠ್ಯಪುಸ್ತಕ ಪರಿಷ್ಕರಣೆ: ಸಿಎಂಗೆ ವಿವರಣೆ ನೀಡಿದ್ದೇವೆ ಎಂದ ಸಚಿವ ಬಿ.ಸಿ. ನಾಗೇಶ್

Update: 2022-06-22 16:04 GMT
ಸಚಿವ ಬಿ.ಸಿ. ನಾಗೇಶ್

ಬೆಂಗಳೂರು, ಜೂ.22: ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬರೆದಿರುವ ಪ್ರತದಲ್ಲಿ ಉಲ್ಲೇಖಿಸಿರುವ ಅಂಶಗಳ ಬಗ್ಗೆ ವಿವರಣೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಬುಧವಾರ ಸಂಜೆ ಆರ್.ಟಿ.ನಗರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದಲ್ಲಿ ನಡೆದ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಬರೆದಿರುವ ಪತ್ರದಲ್ಲಿನ ಅಂಶಗಳ ಬಗ್ಗೆ ವಿವರಣೆ ಪಡೆಯಲು ನಮ್ಮನ್ನು ಕರೆದಿದ್ದರು. ಮುಖ್ಯಮಂತ್ರಿಗೆ ಎಲ್ಲ ವಿವರಣೆ ನೀಡಿದ್ದೇವೆ ಎಂದರು.

ಇನ್ನೂ ಕೆಲವೊಂದು ವಿಚಾರಗಳಿಗೆ ನಾಳೆ ವಿವರಣೆ ಕೊಡುತ್ತೇವೆ. ದೇವೇಗೌಡರು ಮುಖ್ಯಮಂತ್ರಿಗೆ ಪತ್ರ ಬರೆದಿರುವುದರಿಂದ ನಾಳೆ ಸ್ವತಃ ಮುಖ್ಯಮಂತ್ರಿ ಅವರೇ ಆ ಪತ್ರಕ್ಕೆ ಸಂಬಂಧಿಸಿದಂತೆ ಉತ್ತರ ನೀಡುತ್ತಾರೆ ಎಂದು ನಾಗೇಶ್ ಹೇಳಿದರು. 

ಜೂ.15ರಂದು ನಾವು ಒಂದು ಸುತ್ತೋಲೆ ಹೊರಡಿಸಿದ್ದೇವೆ. ನಮ್ಮ ಸುತ್ತೋಲೆಯಲ್ಲಿ ಎಲವನ್ನೂ ವಿವರವಾಗಿ ತಿಳಿಸಿದ್ದೇವೆ. ಪಠ್ಯದಲ್ಲಿ ಬಿಟ್ಟು ಹೋಗಿರುವ ಎಲ್ಲ ಅಂಶಗಳನ್ನು ಸೇರಿಸಲಾಗಿದೆ. ಪಠ್ಯದಲ್ಲಿ ‘ಸಂವಿಧಾನ ಶಿಲ್ಪಿ’ ಡಾ.ಅಂಬೇಡ್ಕರ್ ಎಂದು ಉಲ್ಲೇಖಿಸಲಾಗಿದೆ. ಅಂಬೇಡ್ಕರ್ ಚಿಂತನೆ ಸೇರಿಸಿರುವ ಅಂಶ ಮುಂದುವರೆಸುತ್ತೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News