'ಅಗ್ನಿಫಥ್' ಯೋಜನೆಗೆ ವಿರೋಧ ಸಲ್ಲದು: ಎಸ್.ಎಂ.ಕೃಷ್ಣ

Update: 2022-06-22 17:41 GMT

ಮಂಡ್ಯ, ಜೂ.22: ಸೇನೆಗೆ ಅಲ್ಪಾವಧಿಗೆ ಯುವಕರ ನೇಮಕಾತಿ ‘ಅಗ್ನಿಪಥ್’ ಯೋಜನೆಯನ್ನು ಶ್ಲಾಘಿಸಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಯೋಜನೆಗೆ ವಿರೋಧ ಮಾಡಬಾರದು ಎಂದು ಮನವಿ ಮಾಡಿದ್ದಾರೆ.

ಬುಧವಾರ ಸ್ವಗ್ರಾಮ ಮದ್ದೂರಿನ ಸೋಮನಹಳ್ಳಿಯಲ್ಲಿ ಸಹೋದರ ದಿವಂಗತ ಎಸ್.ಎಂ.ಶಂಕರ್ ಮೆಮೋರಿಯಲ್ ಟ್ರಸ್ಟ್ ಗೆ ಚಾಲನೆ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿ ಅಗ್ನಿಪಥ್ ಯೋಜನೆಯನ್ನು ಸಮರ್ಥಿಸಿಕೊಂಡರು.

ಅಮೆರಿಕಾ, ಬ್ರಿಟನ್ ಸೇರಿದಂತೆ ಹಲವು ದೇಶಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ. 20 ವರ್ಷ ತುಂಬಿದ ಯುವಕರು ಎರಡು ವರ್ಷ ಸೈನಿಕ ಶಿಕ್ಷಣ ಕಲಿಯುವುದು ಕಡ್ಡಾಯವಾಗಿದೆ. ಇದು ಆದರ್ಶಪ್ರಾಯ ಯೋಜನೆಯಾಗಿದೆ ಎಂದು ಅವರು ಶ್ಲಾಘಿಸಿದರು.

ಅಗ್ನಿವೀರರು ನಾಲ್ಕು ವರ್ಷ ಸೈನ್ಯದಲ್ಲಿ ಕೆಲಸ ನಿರ್ವಹಿಸಿದ ಬಳಿಕ ಬೇರೆ ಕಡೆಗಳಲ್ಲಿ ಉದ್ಯೋಗಗಳನ್ನು ಅವಲಂಬಿಸುವುದಕ್ಕೆ ಅವಕಾಶವಿದೆ. ಮಿಲಿಟರಿಯ ವಿವಿಧ ವಿಭಾಗಗಳು, ಖಾಸಗಿ ಕಂಪನಿಗಳು, ಸರಕಾರಿ ಹುದ್ದೆಗಳಲ್ಲೂ ಮೀಸಲಾತಿ ನೀಡುತ್ತಿರುವುದರಿಂದ ಉದ್ಯೋಗಕ್ಕೆ ಅವಕಾಶಗಳಿವೆ ಎಂದು ಅವರು ಹೇಳಿದರು.

ಈ ಯೋಜನೆಯನ್ನು ರಾಜಕೀಯ ಹಿನ್ನೆಲೆಯಿಂದ ನೋಡದೆ ದೇಶದ ಅಭಿವೃದ್ಧಿ ದೃಷ್ಟಿಯಿಂದ ನೋಡಬೇಕು. ಅಭಿವೃದ್ಧಿಶೀಲ ದೇಶಗಳು ಇಂತಹ ಯೋಜನೆಗಳಿಂದ ಪ್ರಗತಿಯತ್ತ ದಾಪುಗಾಲಿಟ್ಟಿವೆ. ಭಾರತವೂ ಆ ದಿಸೆಯಲ್ಲಿ ಹೊಸ ಹೆಜ್ಜೆಯನ್ನಿಟ್ಟಿದೆ ಎಂದರು.

ತನ್ನ ಸಹೋದರ ವಿಧಾನಪರಿಷತ್ ಮಾಜಿ ಸದಸ್ಯ ದಿವಂಗತ ಎಸ್.ಎಂ.ಶಂಕರ್ ಬಗ್ಗೆ ಪ್ರತಿಕ್ರಿಯಿಸಿದ ಎಸ್.ಎಂ.ಕೃಷ್ಣ, ನನ್ನ ಸಹೋದರ ಉತ್ತಮ ರಾಜಕಾರಣಿ, ಸಮಾಜ ಸೇವಕರಾಗಿ ಈ ಭಾಗದ ಜನರಿಗೆ ಸಲ್ಲಿಸಿರುವ ಸೇವೆ ಅನನ್ಯವಾದದ್ದು ಎಂದು ಸ್ಮರಿಸಿದರು.

ಇದೇ ವೇಳೆ ಟ್ರಸ್ಟ್ ಕಚೇರಿ, ಸುಸಜ್ಜಿತ ಗ್ರಂಥಾಲಯ ಉದ್ಘಾಟಿಸಲಾಯಿತು. ಎಸ್.ಎಂ.ಶಂಕರ್ ಮೆಮೋರಿಯಲ್ ಟ್ರಸ್ಟ್ ಸೋಮನಹಳ್ಳಿ ಗ್ರಾಮ ಪಂಚಾಯತ್‍ಗೆ  ಕೊಡಮಾಡಿದ ಶವ ಸಾಗಿಸುವ ವಾಹನದ ಕೀಯನ್ನು  ಎಸ್.ಎಂ.ಕೃಷ್ಣ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ಕೈಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶಾಸಕ ಡಿ.ಸಿ.ತಮ್ಮಣ್ಣ, ಕೆಪಿಸಿಸಿ ಸದಸ್ಯ ಎಸ್.ಗುರುಚರಣ್, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಜೋಗಿಗೌಡ, ಸಂದರ್ಶ, ರಾಘವ್, ಪ್ರಕಾಶ್,ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News