ರಾಜ್ಯ ವಿಭಜನೆಯ ಹೇಳಿಕೆ ವಿಚಾರ; ಸಚಿವ ಉಮೇಶ್ ಕತ್ತಿ ವಿರುದ್ಧ ಕ್ರಮಕ್ಕೆ ಡಾ. ಎಚ್.ಸಿ ಮಹದೇವಪ್ಪ ಆಗ್ರಹ

Update: 2022-06-23 13:44 GMT

ಬೆಂಗಳೂರು, ಜೂ. 23: ‘ಸಂವಿಧಾನಾತ್ಮಕ ಗಣರಾಜ್ಯವಾಗಿದ್ದ ಭಾರತದಲ್ಲಿ ಕರ್ನಾಟಕವೂ ಭಾಷಾವಾರು ಪ್ರಾಂತ್ಯವಾಗಬೇಕೆಂದು ಹೋರಾಟ ಮಾಡಿದ್ದರ ಪರಿಣಾಮ 1956ರ ನ.1ರಂದು ನಮ್ಮ ರಾಜ್ಯವು ಆಡಳಿತ ವ್ಯಾಪ್ತಿಗೆ ಬಂದಿತು. 1973ರ ನ.1ರಂದು ಕರ್ನಾಟಕ ಎಂದು ಪುನರ್ ನಾಮಕರಣಗೊಂಡಿತು. ಇಂತಹ ಹೋರಾಟದ ಇತಿಹಾಸವಿರುವ ಕರ್ನಾಟಕವನ್ನು ಲೋಕಸಭೆ ಚುನಾವಣೆ ನಂತರದಲ್ಲಿ ವಿಭಜಿಸುವ ಕುರಿತು ಮಾತನಾಡುತ್ತಿರುವ ಸಚಿವ ಉಮೇಶ್ ಕತ್ತಿ ಮಾತುಗಳನ್ನು ನಾನು ಖಂಡಿಸುತ್ತೇನೆ' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

ಗುರುವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಡಬಲ್ ಇಂಜಿನ್ ಸರಕಾರದ ಹೆಸರಲ್ಲಿ ಅಧಿಕಾರದಲ್ಲಿದ್ದರೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಎಳ್ಳು ನೀರು ಬಿಟ್ಟು, ಉತ್ತರ ಕರ್ನಾಟಕಕ್ಕೆ ಬಂದ ಯೋಜನೆಗಳನ್ನೆಲ್ಲಾ ವಾಪಸ್ ಕಳಿಸಿರುವ ಇವರಿಗೆ ಪ್ರತ್ಯೇಕ ರಾಜ್ಯದ ಕುರಿತಂತೆ ಮಾತನಾಡುವ ನೈತಿಕತೆ ಇಲ್ಲ. 371‘ಜೆ' ಜಾರಿಗೊಳಿಸಿದ ಕಾಂಗ್ರೆಸ್ ಪಕ್ಷವು ಉತ್ತರ ಕರ್ನಾಟಕಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಈ ಪೈಕಿ ಮೂಲ ಸೌಕರ್ಯ ಹಾಗೂ ನೀರಾವರಿ ಅಭಿವೃದ್ಧಿಗೂ ಒತ್ತು ನೀಡಲಾಗಿದೆ.

ಆದರೆ, ವಾಮ ಮಾರ್ಗದ ಮೂಲಕ ಅಧಿಕಾರಕ್ಕೆ ಬಂದು ಡಬಲ್ ಇಂಜಿನ್ ಸರಕಾರ ಎಂದು ಹೇಳಿಕೊಂಡು ಶೇ.40ರಷ್ಟು ಕಮಿಷನ್ ಲೂಟಿಯಲ್ಲಿ ಮುಳುಗಿರುವ ಬಿಜೆಪಿ ಸರಕಾರವು ಅಭಿವೃದ್ಧಿಯನ್ನೇ ಮಾಡದೇ ಕೇವಲ ಅಧಿಕಾರದ ದುರಾಸೆಗಾಗಿ ರಾಜ್ಯದ ವಿಭಜನೆಯ ಬಗ್ಗೆ ಮಾತನಾಡುತ್ತಿರುವುದನ್ನು ಕರ್ನಾಟಕದ ಪ್ರತಿಯೊಬ್ಬ ಕನ್ನಡಿಗರೂ ಖಂಡಿಸಬೇಕು' ಎಂದು ಅವರು ತಿಳಿಸಿದ್ದಾರೆ.

‘ಸಚಿವ ಉಮೇಶ್ ಕತ್ತಿಯವರು ಬಹಿರಂಗವಾಗಿ ರಾಜ್ಯದ ಜನರ ಕ್ಷಮೆಯಾಚಿಸಬೇಕು! ಜೊತೆಗೆ ಹಿಂದೆ ಕನ್ನಡ ಹೋರಾಟಗಾರರ ಬಂಧನವಾದಾಗ ಅವರ ಪರವಾಗಿ ಮಾಜಿ ಮುಖ್ಯಮಂತ್ರಿಗಳಾದ ಎಸ್.ಆರ್. ಬೊಮ್ಮಾಯಿ ನ್ಯಾಯಾಲಯದಲ್ಲಿ ವಾದ ಮಾಡಿದ್ದರು. ಇದೀಗ ಅವರ ಪುತ್ರರಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕನ್ನಡ ಮತ್ತು ಕರ್ನಾಟಕ ವಿರೋಧಿ ಹೇಳಿಕೆ ನೀಡಿದ ಉಮೇಶ್ ಕತ್ತಿಯವರ ಮೇಲೆ ಕ್ರಮ ವಹಿಸುತ್ತಾರೆಂಬ ನಂಬಿಕೆ ನನ್ನದು' ಎಂದು ಮಹದೇವಪ್ಪ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News