‘ಆಪರೇಷನ್ ಕಮಲ' ಹಣದ ಮೂಲದ ಬಗ್ಗೆ ಈ.ಡಿ ತನಿಖೆಗೆ ಆದೇಶಿಸಲು ಸಾಧ್ಯವೆ?: ದಿನೇಶ್ ಗುಂಡೂರಾವ್

Update: 2022-06-23 13:36 GMT

ಬೆಂಗಳೂರು, ಜೂ. 23: ‘ಮಹಾರಾಷ್ಟ್ರದಲ್ಲಿ ಮತ್ತೆ ಕೊಳಕು ರಾಜಕೀಯ ಶುರು ಮಾಡಿರುವ ಬಿಜೆಪಿ ಆಪರೇಶನ್ ಕಮಲದ ಮೂಲಕ ಅಧಿಕಾರಕ್ಕೆ ಬರುವ ಯತ್ನ ಮಾಡುತ್ತಿದೆ. ಆಪರೇಷನ್ ಕಮಲ ಬಿಜೆಪಿಯವರ ಅನಿಷ್ಟ ಕೂಸು. ಮಧ್ಯಪ್ರದೇಶ, ಕರ್ನಾಟಕದಲ್ಲಿ ಈಗಾಗಲೇ ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದಿರುವ ಬಿಜೆಪಿ ಈಗ ಮಹಾರಾಷ್ಟ್ರದಲ್ಲೂ ಹೀನ ರಾಜಕಾರಣ ಮಾಡುತ್ತಿದೆ. ಬಿಜೆಪಿಯ ವರ್ತನೆ ಸಂವಿಧಾನ ಬಾಹಿರ' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ನಾ ಖಾವೂಂಗಾ, ನಾ ಖಾನೇ ದೂಂಗಾ' ಎಂದು ಬೊಗಳೆ ಭಾಷಣ ಬಿಗಿಯುವ ಮೋದಿಯವರು, ಆಪರೇಷನ್ ಕಮಲಕ್ಕೆ ಸುರಿಯುವ ಸಾವಿರಾರು ಕೋಟಿ ರೂ. ಹಣ ಯಾರು ತಿಂದು ವಿಸರ್ಜಿಸಿದ್ದು ಎಂದು ಹೇಳುತ್ತಾರೆಯೆ? ಮೋದಿಯವರು ಪ್ರಾಮಾಣಿಕರಾಗಿದ್ದರೆ ಮಹಾರಾಷ್ಟ್ರದಲ್ಲಿ ಈಗ ನಡೆಯುತ್ತಿರುವ ಆಪರೇಷನ್ ಕಮಲದಲ್ಲಿ ಕೈ ಬದಲಾಗುವ ಹಣದ ಮೂಲದ ಬಗ್ಗೆ ಈಡಿ ತನಿಖೆಗೆ ಆದೇಶಿಸಲು ಸಾಧ್ಯವೆ?' ಎಂದು ವಾಗ್ದಾಳಿ ನಡೆಸಿದ್ದಾರೆ.

‘ಅಧಿಕಾರಕ್ಕಾಗಿ ಬಿಜೆಪಿ ಎಷ್ಟು ಕೀಳು ಮಟ್ಟಕ್ಕಾದರೂ ಇಳಿಯುತ್ತದೆ ಎಂಬುದಕ್ಕೆ ಮಹಾರಾಷ್ಟ್ರದ ಇಂದಿನ ರಾಜಕೀಯ ಸನ್ನಿವೇಶ ಮಗದೊಂದು ಉದಾಹರಣೆ. ಸಂವಿಧಾನಕ್ಕೆ ಸದಾ ಅಪಚಾರ ಎಸಗುತ್ತಾ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಕತ್ತು ಹಿಸುಕುತ್ತಾ ಬಂದಿರುವ ಬಿಜೆಪಿ ಈಗ ಮಹಾರಾಷ್ಟ್ರದಲ್ಲೂ ಅನೈತಿಕ ರಾಜಕಾರಣದ ಮೂಲಕ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ' ಎಂದು ದಿನೇಶ್ ಗುಂಡೂರಾವ್ ದೂರಿದ್ದಾರೆ.

‘ಸಂವಿಧಾನಬದ್ಧವಾಗಿ ಅಸ್ತಿತ್ವದಲ್ಲಿರುವ ಸರಕಾರವನ್ನು ಅಸಂವಿಧಾನಿಕವಾಗಿ ಉರುಳಿಸುವ ಕೆಟ್ಟ ಸಂಪ್ರದಾಯ ಶುರುವಾಗಿದ್ದೇ ಕರ್ನಾಟಕದಲ್ಲಿ. ಆಪರೇಷನ್ ಕಮಲದ ಜನಕ ಯಡಿಯೂರಪ್ಪನವರು. ಬಿಎಸ್‍ವೈ ಸೃಷ್ಟಿಸಿದ ಪಿಡುಗನ್ನು ಇಂದು ದೇಶಾದ್ಯಂತ ಬಿಜೆಪಿಯವರು ಹಬ್ಬಿಸಿ ರಾಜಕೀಯ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದ್ದಾರೆ. ಇಂತಹ ಪಿಡುಗಿಗೆ ಜನರೇ ಕಡಿವಾಣ ಹಾಕಬೇಕು' ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News