''ಮನುಷ್ಯದ್ವೇಷ ಪಸರಿಸುವ ಮನುವಾದಿಗಳು ನೀವು'': ಸಚಿವ ಕೋಟ ಪೂಜಾರಿ ಟ್ವೀಟ್‍ಗೆ ವ್ಯಾಪಕ ಆಕ್ರೋಶ

Update: 2022-06-23 13:41 GMT

ಬೆಂಗಳೂರು, ಜೂ. 23: ‘ಮುಸ್ಲಿಂ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದು ನಾವೇ, ದಲಿತ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದೂ ನಾವೇ, ಇಂದು ಮಹಿಳೆ ಅದೂ ಆದಿವಾಸಿ ಬುಡಕಟ್ಟು ಜನಾಂಗದ ಮಹಿಳೆಯನ್ನು ರಾಷ್ಟ್ರಪತಿ ಮಾಡುವುದು ನಾವೇ... ಏಕೆಂದರೆ ನಾವು ಜಾತಿವಾದಿಗಳಲ್ಲಾ-ರಾಷ್ಟ್ರವಾದಿಗಳು (ವಾಟ್ಸಪ್‍ನಲ್ಲಿ ಬಂದಿದ್ದು)' ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟ್ವೀಟ್‍ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಗುರುವಾರ ಟ್ವೀಟ್ ಮಾಡಿರುವ ಸಚಿವ ಪೂಜಾರಿ ವಿರುದ್ಧ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವರು ಟೀಕಿಸಿದ್ದು, ‘ಬಿಜೆಪಿಯವರೆಲ್ಲರೂ ವಾಟ್ಸ್ ಅಪ್ ಯೂನಿವರ್ಸಿಟಿಯ ವಿಧೇಯ ವಿದ್ಯಾರ್ಥಿಗಳು, ಅದೇ ಅವರ ಜ್ಞಾನದ ಮೂಲ!. ಪೂಜಾರಿಯವರೇ, ವಾಟ್ಸ್‍ಅಪ್ ಬಿಟ್ಟು ಪುಸ್ತಕಗಳನ್ನು ಓದಿ ಜ್ಞಾನಾರ್ಜನೆ ಮಾಡಿಕೊಳ್ಳಿ, ನೀವು ಮೊದಲಲ್ಲ, ಇವರೆಲ್ಲ ಮೊದಲೇ ರಾಷ್ಟ್ರಪತಿಗಳಾಗಿದ್ದಾರೆ. ಜಾಕಿರ್ ಹುಸೇನ್ (ಮುಸ್ಲಿಂ), ಆರ್.ಕೆ. ನಾರಾಯಣ್(ದಲಿತ), ಪ್ರತಿಭಾ ಪಾಟೀಲ್ (ಮಹಿಳೆ)' ಎಂದು ಕಾಂಗ್ರೆಸ್ ತಿಳಿಸಿದೆ. 

ಮನುಷ್ಯದ್ವೇಷ ಪಸರಿಸುವ ಮನುವಾದಿಗಳು ನೀವು: ‘ವಾಟ್ಸ್ ಅಪ್ ಯೂನಿವರ್ಸಿಟಿಯ ವಿಧೇಯ ವಿದ್ಯಾರ್ಥಿಗಳಾದ ಬಿಜೆಪಿಯವರ ಜ್ಞಾನದ ಮಟ್ಟವಿದು. ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿದ್ದುಕೊಂಡು ವಾಟ್ಸ್‍ಅಪ್‍ನಲ್ಲಿ ಬಂದಿದನ್ನು ಯಥಾವತ್ತಾಗಿ ಪೋಸ್ಟ್ ಮಾಡುತ್ತಾರೆಂದರೆ ಅವರ ಬುದ್ಧಿಗೆ ಎಷ್ಟು ಮಂಕು ಕವಿದಿರಬಹುದು? ಪೂಜಾರಿಯವರೆ ವಾಟ್ಸ್‍ಅಪ್‍ನಲ್ಲಿ ಬಂದಿರುವುದನ್ನು ಪೋಸ್ಟ್ ಮಾಡುವ ಮುನ್ನ ಇತಿಹಾಸ ಓದಿಕೊಳ್ಳಿ' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಶಾಸಕ ದಿನೇಶ್ ಗುಂಡೂರಾವ್ ಸಲಹೆ ನೀಡಿದ್ದಾರೆ.

ಗುರುವಾರ ಟ್ವೀಟ್ ಮಾಡಿರುವ ಅವರು, ‘ರಾಷ್ಟ್ರದ ಮೊದಲ ಮುಸ್ಲಿಂ ರಾಷ್ಟ್ರಪತಿ ಕಾಂಗ್ರೆಸ್‍ನ ಕೊಡುಗೆ! ರಾಷ್ಟ್ರದ ಮೊದಲ ಸಿಖ್ ರಾಷ್ಟ್ರಪತಿ ಕಾಂಗ್ರೆಸ್‍ನ ಕೊಡುಗೆ! ರಾಷ್ಟ್ರದ ಮೊದಲ ದಲಿತ ರಾಷ್ಟ್ರಪತಿ ಕಾಂಗ್ರೆಸ್‍ನ ಕೊಡುಗೆ! ಅಷ್ಟೇ ಏಕೆ, ಮೊದಲ ಮಹಿಳಾ ರಾಷ್ಟ್ರಪತಿಯ ಕೊಡುಗೆಯೂ ಕಾಂಗ್ರೆಸ್‍ನದ್ದೆ! ಆದರೆ ಕಾಂಗ್ರೆಸ್ ಯಾವತ್ತೂ ಇದನ್ನು ಪ್ರಚಾರಕ್ಕೆ ಬಳಸಲಿಲ್ಲ. ಇದೇ ಕಾಂಗ್ರೆಸ್‍ಗೂ ಬಿಜೆಪಿಗೂ ಇರುವ ವ್ಯತ್ಯಾಸ' ಎಂದು ವಾಗ್ದಾಳಿ ನಡೆಸಿದ್ದಾರೆ.

‘ಕೋಟ ಶ್ರೀನಿವಾಸ ಪೂಜಾರಿಯವರೆ, ಬಿಜೆಪಿಯವರು ಜಾತಿವಾದಿಗಳಲ್ಲ ರಾಷ್ಟ್ರವಾದಿಗಳೆಂದು ವ್ಯಾಖ್ಯಾನಿಸಿದ್ದೀರಿ. ಆ ನಿಮ್ಮ ವ್ಯಾಖ್ಯಾನ ಖಂಡಿತ ತಪ್ಪು. ನೀವು ರಾಷ್ಟ್ರೀಯವಾದಿಗಳಲ್ಲ, ರಾಷ್ಟ್ರವ್ಯಾಧಿಗಳು. ಜಾತ್ಯತೀತತೆಯ ಮುಖವಾಡ ಹಾಕಿಕೊಂಡಿರುವ ಕಟ್ಟರ್ ಜಾತಿವಾದಿಗಳು. ದೇಶ ಒಡೆಯುವ ಕೋಮುವಾದಿಗಳು ಮತ್ತು ಅಂತರಂಗದಲ್ಲಿ ಮನುಷ್ಯದ್ವೇಷ ಪಸರಿಸುವ ಮನುವಾದಿಗಳು' ಎಂದು ದಿನೇಶ್ ಗುಂಡೂರಾವ್ ಆಕ್ರೋಶ ಹೊರಹಾಕಿದ್ದಾರೆ.

ಬಿಜೆಪಿಯ ಪ್ರಾತಿನಿಧ್ಯವು ಆಟಕ್ಕುಂಟು-ಲೆಕ್ಕಕ್ಕಿಲ್ಲ: ‘ಸಂವಿಧಾನದ ಆಶಯವನ್ನು ಬಲಪಡಿಸಬೇಕಾದ ಪರಿಶಿಷ್ಟ ಸಮುದಾಯಗಳನ್ನು ಸಂವಿಧಾನದ ಆಶಯಗಳನ್ನು ನಾಶ ಮಾಡುವ ದಿಸೆಯಲ್ಲಿ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ. ನನ್ನ ಪ್ರಕಾರ ಬಾಬಾ ಸಾಹೇಬರು ಬಯಸಿದ್ದ ತಳ ವರ್ಗದ ರಾಜಕೀಯ ಪ್ರಾತಿನಿಧ್ಯದ ಉದ್ದೇಶ ಖಂಡಿತಾ ಇದಲ್ಲ!' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

‘ಇತ್ತೀಚೆಗಷ್ಟೇ ಛಲವಾದಿ ನಾರಾಯಣಸ್ವಾಮಿ ಅವರ ತಲೆ ಮೇಲೆ ಚಡ್ಡಿ ಹೊರಿಸಿದ್ದ ಕೋಮುವಾದಿಗಳು ಈ ದಿನ ಸುಳ್ಳು ಸುದ್ದಿಯನ್ನು ಹರಡಲು ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಆರಿಸಿದ್ದಾರೆ. ಬಿಜೆಪಿಗರ ದೃಷ್ಟಿಯಲ್ಲಿ ಕೆಳವರ್ಗಗಳ ರಾಜಕೀಯ ಪ್ರಾತಿನಿಧ್ಯವು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿರುವುದು ಸ್ಪಷ್ಟವಾಗಿದೆ' ಎಂದು ಮಹದೇವಪ್ಪ ಟೀಕಿಸಿದ್ದಾರೆ.

‘ಪ್ರಸ್ತುತ ಸ್ವತಂತ್ರ ಭಾರತದ ಇತಿಹಾಸವು ಅಧ್ಯಯನ ಶಿಸ್ತಿನಿಂದ ದೂರ ಸರಿಯುತ್ತಿದ್ದು ಸುಳ್ಳು ಮತ್ತು ಅಜ್ಞಾನವನ್ನು ಪ್ರಚುರ ಪಡಿಸುವಲ್ಲಿ ತೀವ್ರವಾಗಿ ನಿರತವಾಗಿದ್ದು ಈ ಕೆಲಸವನ್ನು ಸರಕಾರದ ಜವಾಬ್ದಾರಿ ಸಚಿವ ಸ್ಥಾನದಲ್ಲಿರುವ ವ್ಯಕ್ತಿಗಳೇ ಮಾಡುತ್ತಿರುವುದು ಆತಂಕದ ವಿಷಯವಾಗಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಭಾರತದಲ್ಲಿ ರಾಷ್ಟ್ರಪತಿಯಂತ ಸಂವಿಧಾನಿಕ ಹುದ್ದೆಯನ್ನು ಜಾತಿ ಧರ್ಮಕ್ಕೆ ಸಮೀಕರಿಸಿ ನೋಡುವ ಅಸಂವಿಧಾನಿಕ ವಿದ್ಯಮಾನ ಜರುಗುತ್ತಿರುವುದು ನನ್ನಲ್ಲಿ ತೀವ್ರ ಬೇಸರ ಮೂಡಿಸಿದೆ. ಇಂತಹ ಕೆಲಸಗಳಿಗೆ ಎಂದಿನಂತೆ ಕೆಳವರ್ಗಗಳನ್ನೇ ಮುಂದೆ ಬಿಡುತ್ತಾರೆಂಬ ಸಂಗತಿಯು ಮತ್ತೊಮ್ಮೆ ಸಾಬೀತಾಗಿದೆ!' ಎಂದು ಮಹದೇವಪ್ಪ ಟ್ವಿಟ್ಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕೋಟ ಶ್ರೀನಿವಾಸ ಪೂಜಾರಿ ಅವರೇ ಓದು, ಚಿಂತನೆಗಳಿಲ್ಲದ ಬಿಜೆಪಿಯವರಿಗೆ ವಾಟ್ಸ್ ಅಪ್ ಯೂನಿವರ್ಸಿಟಿಯ ಸುಳ್ಳುಗಳೇ ಜ್ಞಾನಾರ್ಜನೆಯ ಮೂಲ! ಅಂದಹಾಗೆ, ಎಸ್ಸಿ-ಎಸ್ಟಿ ಜನಾಂಗದ 7 ಸಾವಿರ ಕೋಟಿ ರೂ., ದಲಿತರ ಪಾಲಿನ ಕೊಳವೆಬಾವಿ ಹೆಸರಲ್ಲಿ 431 ಕೋಟಿ ರೂ., ಭೋವಿ ನಿಗಮದಲ್ಲಿ 150 ಕೋಟಿ ರೂ.ಲೂಟಿ ಮಾಡುವುದು ನಿಮ್ಮ ರಾಷ್ಟ್ರವಾದವೇ?'

-ಪ್ರಿಯಾಂಕ್ ಖರ್ಗೆ ಚಿತ್ತಾಪುರ ಕ್ಷೇತ್ರದ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News