ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ: ಸಿದ್ದರಾಮಯ್ಯ ಆಕ್ರೋಶ

Update: 2022-06-23 14:32 GMT

ಮೈಸೂರು,ಜೂ.23: 'ಕರ್ನಾಟಕದ ಚಾಳಿಯನ್ನು ಬಿಜೆಪಿಯವರು ದೇಶಕ್ಕೆ ಹಬ್ಬಿಸಿದ್ದಾರೆ. ಅದರ ಪರಿಣಾಮ ಮಹರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟನ್ನು ಸೃಷ್ಟಿಸಿದ್ದಾರೆ. ಬಿಜೆಪಿ ಭ್ರಷ್ಟಾಚಾರದ ಹಣದಲ್ಲಿ ಆಪರೇಷನ್ ಕಮಲಕ್ಕೆ ಮುಂದಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಗರದಲ್ಲಿ  ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಇದನ್ನು ತಡೆಗಟ್ಟಲು ಪಕ್ಷಾಂತರ ಕಾಯ್ದೆ ತಿದ್ದುಪಡಿ ಆಗಬೇಕು. ಒಂದು ಪಕ್ಷದಿಂದ. ಆಯ್ಕೆಯಾದವನು ಬೇರೆ ಸ್ಥಾನಕ್ಕೆ ಹೋಗದಂತೆ ತಡೆಯಬೇಕು. ಹೋದರೆ 10 ವರ್ಷ ಆತ ಚುನಾವಣೆಗೆ ನಿಲ್ಲದಂತೆ ಆದೇಶ ಮಾಡಬೇಕು. ಪ್ರಜಾಪ್ರಭುತ್ವದ ಉಳಿವಿಗೆ ಇದರ ಅವಶ್ಯಕತೆ ಇದೆ. ಆಪರೇಷನ್ ಕಮಲ ಹುಟ್ಟು ಹಾಕಿದ್ದೇ ಬಿಜೆಪಿಯವರು. 2008ರಲ್ಲಿ ಯಡಿಯೂರಪ್ಪ ಮೊದಲ ಆಪರೇಷನ್ ಕಮಲ ಮಾಡಿದರು. ಎಲ್ಲೂ ಅವರಿಗೆ ಬಹುಮತ ಬಂದಿಲ್ಲ. ಎಲ್ಲಾ ಕಡೆ ಹಣ ಕೊಟ್ಟು ಶಾಸಕರನ್ನು ಖರೀದಿಸಿ ಸರ್ಕಾರ ಮಾಡಿದ್ದಾರೆ ಎಂದು ಹರಿಹಾಯ್ದರು.

ರಾಷ್ಟ್ರಪತಿ ಹುದ್ದೆಗೆ ಬುಡಕಟ್ಟು ಮಹಿಳೆ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇದು ಸಾಮಾಜಿಕ ನ್ಯಾಯ ಅಲ್ಲ ವಿಶೇಷವೂ ಅಲ್ಲ. ಆ ರೀತಿ ಇದ್ದರೆ ಆರ್ ಎಸ್ ಎಸ್ ಮುಖ್ಯ ಸರಸಂಚಾಲಕರಾಗಿ ಆಯ್ಕೆ  ಮಾಡಲಿ. ಮೋಹನ್ ಭಾಗವತ್ ಸ್ಥಾನಕ್ಕೆ ಇಂತಹ ಮಹಿಳೆಯನ್ನು ತರಲಿ. ದ್ರೌಪದಿ ಮುರ್ಮಾ ಬಿಜೆಪಿಯವರೇ ಆಗಿದ್ದಾರೆ. ರಾಜ್ಯಪಾಲರು ಸೇರಿ ಹಲವು ಹುದ್ದೆ ಅಲಂಕರಿಸಿದ್ದಾರೆ.

ರಾಷ್ಟ್ರಪತಿಯಾಗಿ ಅಂತಹ ಕೆಲಸ ಮಾಡಲು ಇವರು ಬಿಡಲ್ಲ. ಹಿಂದೆ ರಾಜೇಂದ್ರ ಪ್ರಸಾದ್ ಅವರು ಮಾಡಿದಂತೆ ಕೆಲಸ ಮಾಡಲು ಆಗುತ್ತ? ರಾಮನಾಥ್ ಕೋವಿಂದ್ ಕೂಡ ರಾಷ್ಟ್ರಪತಿ ಆಗಿದ್ದಾರೆ. ಅವರು ಏನು ಮಾಡಿದರು.? ಇದು ಅವರಂತೆ ನಾಮಕವಾಸ್ತೆಗೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ರಾಜ್ಯ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಡಬಲ್ ಇಂಜಿನ್ ಸರ್ಕಾರದ ಹೇಳಿಕೆಗೆ ತಿರುಗೇಟು ನೀಡಿದ ಸಿದ್ಧರಾಮಯ್ಯ, ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ.? ಅದು ಮಾಡಿರುವ ಅಭಿವೃದ್ಧಿ ಕಾರ್ಯದ ಪಟ್ಟಿ ಕೊಡಿ. ಸುಮ್ಮನೇ ಸುಳ್ಳು ಹೇಳಿ ಮೋದಿ ಹೋಗಿದ್ದಾರೆ ಎಂದು ಲೇವಡಿ ಮಾಡಿದರು.

ರಾಜ್ಯ ಸರ್ಕಾರ ಮೋದಿಗೆ ರಾಜ್ಯದ ಬೇಡಿಕೆ ಬಗ್ಗೆ ಮನವಿ ನೀಡದ ವಿಚಾರ. ಮೋದಿ ಏನು ಮಾಡುವುದಿಲ್ಲ ಅನ್ನೋದು ರಾಜ್ಯ ನಾಯಕರಿಗೆ ಗೊತ್ತಿದೆ. ಅದಕ್ಕೆ ಅವರು ಯಾವುದೇ ಮನವಿ ನೀಡಿಲ್ಲ. ಮೋದಿ ಕಾರ್ಯಕ್ರಮಕ್ಕೆ 25 ಕೋಟಿಗಿಂತ ಹೆಚ್ಚು ಖರ್ಚು ಮಾಡಲಾಗಿದೆ. ರಸ್ತೆ ಆಗಿದಷ್ಟೇ ಜನರಿಗೆ ಆದ ಲಾಭ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News