ರಾಜ್ಯ ವಿಭಜನೆಯ ಹೇಳಿಕೆ ವಿಚಾರ; ಪ್ರಧಾನಿ-ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು: ಸಿದ್ದರಾಮಯ್ಯ ಒತ್ತಾಯ

Update: 2022-06-23 16:12 GMT

ಬೆಂಗಳೂರು, ಜೂ.23: ರಾಜ್ಯವನ್ನು ಇಬ್ಭಾಗ ಮಾಡುವ ಚರ್ಚೆ ಪ್ರಧಾನಿ ನರೇಂದ್ರ ಮೋದಿ ಅವರ ಮಟ್ಟದಲ್ಲಿಯೇ ನಡೆಯುತ್ತಿದೆ ಎಂಬ ಆಘಾತಕಾರಿ ಸಂಗತಿಯನ್ನು ಸಚಿವ ಉಮೇಶ್ ಕತ್ತಿ ಬಹಿರಂಗ ಪಡಿಸಿದ್ದಾರೆ. ಇದರ ಸತ್ಯಾಸತ್ಯತೆಗಳನ್ನು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಅವರು, ಸಚಿವರಾದ ಉಮೇಶ್ ಕತ್ತಿಯವರು ಜವಾಬ್ದಾರಿ ಸ್ಥಾನದಲ್ಲಿರುವವರು. ಪಕ್ಷ ಇಲ್ಲವೆ ಸರಕಾರದ ಮಟ್ಟದಲ್ಲಿ ಅಂತಹ ಚರ್ಚೆ ನಡೆಯದೆ ರಾಜ್ಯ ಒಡೆಯುವ ಯೋಜನೆಯ ಬಗ್ಗೆ ಮಾತನಾಡಿರಲಾರರು. ಅವರು ಹೇಳಿರುವುದು ಸುಳ್ಳಾಗಿದ್ದರೆ ಇಂತಹ ಬೇಜವಾಬ್ದಾರಿ ಹೇಳಿಕೆಗಾಗಿ ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕು ಒತ್ತಾಯಿಸಿದ್ದಾರೆ.

ಸಾವಿರಾರು ಹಿರಿಯ ಕನ್ನಡಿಗರ ಅವಿರತ ಹೋರಾಟದ ಫಲವಾಗಿ ಸ್ಥಾಪನೆಗೊಂಡ ಕರ್ನಾಟಕವನ್ನು ಒಡೆಯುವ ಯೋಚನೆ ಮಾಡುವುದೇ ನಾಡು-ನುಡಿಗೆ ಬಗೆವ ದ್ರೋಹವಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಚಿವ ಉಮೇಶ್ ಕತ್ತಿ ಅವರು ಪ್ರತ್ಯೇಕ ರಾಜ್ಯ ಸ್ಥಾಪನೆಯ ಕೂಗು ಹಾಕುತ್ತಿರುವುದು ಇದೇ ಮೊದಲ ಸಲವೇನಲ್ಲ. ಭಾಷೆ ಸೂಕ್ಷ್ಮ ಪ್ರದೇಶವಾದ ಬೆಳಗಾವಿಯಲ್ಲಿಯೆ ಇಂತಹ ಪ್ರಚೋದನಕಾರಿ ಹೇಳಿಕೆಗಳ ಪರಿಣಾಮದ ಹೊಣೆಯನ್ನು ರಾಜ್ಯ ಬಿಜೆಪಿ ಸರಕಾರವೆ ಹೊರಬೇಕಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News