''ಶೆಟ್ಟರ್, ಗೋವಿಂದ ಕಾರಜೋಳ ಟಿಪ್ಪುವನ್ನು ಹೊಗಳಿದಾಗ ತಾವೆಲ್ಲಿ ಅಡಗಿ ಕೂತಿದ್ದಿರಿ?''

Update: 2022-06-23 16:49 GMT

ಬೆಂಗಳೂರು: 'ಟಿಪ್ಪು ಸುಲ್ತಾನ್ ಎಂದಾಗ ಮೊದಲು ಮೈಮೇಲೆ ಬಂದದ್ದು ಬಿಜೆಪಿ ನಾಯಕರಿಗೆ. ಹತ್ತು ವರ್ಷಗಳ ಹಿಂದೆ ಈ ರೀತಿ ಮೈಮೇಲೆ ಬಂದಾಗಲೇ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಡಾ.ಶೇಖ್ ಅಲಿ ಅವರಿಂದ 425 ಪುಟಗಳ ಪುಸ್ತಕ ಬರೆಸಿ ಸರ್ಕಾರದಿಂದಲೇ ಪ್ರಕಟಿಸಿದ್ದು' ಎಂದು ಕಂದಾಯ ಸಚಿವ ಆರ್.ಅಶೋಕ್ ಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ,  ಟಿಪ್ಪು ಸುಲ್ತಾನ್ ಎಂದ ಕೂಡಲೇ ಉರಿದುಬೀಳುವ ಬಿಜೆಪಿ ನಾಯಕರೆಲ್ಲರೂ ಮೊದಲು ಅವರ ಸರ್ಕಾರವೇ ಟಿಪ್ಪು ಬಗ್ಗೆ ಬರೆಸಿ, ಪ್ರಕಟಿಸಿದ್ದ ಪುಸ್ತಕ ಮತ್ತು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಸಚಿವ ಗೋವಿಂದ ಕಾರಜೋಳ ಅವರು ಟಿಪ್ಪುವನ್ನು ಹಾಡಿ ಹೊಗಳಿದ ಮುನ್ನುಡಿಯನ್ನು ಓದಬೇಕು ಎಂದು ಹೇಳಿದ್ದಾರೆ. 

"ಟಿಪ್ಪುವಿನ ರಾಷ್ಟ್ರೀಯ ರಾಜ್ಯದ ಕಲ್ಪನೆ, ಸಮರ ಕಲೆ, ಸುಧಾರಣೆಯ ಹುರುಪು, ಟಿಪ್ಪುವನ್ನು ಎಣೆಯಿಲ್ಲದ ನಾಯಕನನ್ನಾಗಿ ಮಾಡಿದೆ’’ ಎಂದು ತಾವೇ ಪ್ರಕಟಿಸಿದ್ದ ಪುಸ್ತಕದಲ್ಲಿ ಹಾಡಿ ಹೊಗಳಿದವರು ಆಗಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಸಚಿವ ಗೋವಿಂದ ಕಾರಜೋಳ ಅವರು. ಆಗ ತಾವೆಲ್ಲಿ ಅಡಗಿ ಕೂತಿದ್ದಿರಿ' ಎಂದು ಪ್ರಶ್ನೆ ಮಾಡಿದ್ದಾರೆ. 

ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಅಶೋಕ್, ಸಿದ್ದರಾಮಯ್ಯಗೆ ಟಿಪ್ಪು ಎಂದರೆ ಮೈಮೇಲೆ ಬಂದುಬಿಡುತ್ತೆ ಎಂದು ಹೇಳಿದ್ದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News