ಭಾರತ, ಚೀನಾಕ್ಕೆ ತೈಲ ರಫ್ತು ಹೆಚ್ಚಳ: ಬ್ರಿಕ್ಸ್ ವೇದಿಕೆಯಲ್ಲಿ ಪುಟಿನ್ ಉಲ್ಲೇಖ

Update: 2022-06-23 16:58 GMT

ಹೊಸದಿಲ್ಲಿ, ಜೂ.24: ಉಕ್ರೇನ್ ಮೇಲಿನ ರಶ್ಯದ ಆಕ್ರಮಣದ ಬಳಿಕ ಭಾರತ ಮತ್ತು ಚೀನಾಕ್ಕೆ ಹಾಗೂ ಬ್ರಿಕ್ಸ್ ಸಂಘಟನೆಯ ಇತರ ಉದಯೋನ್ಮುಖ ಆರ್ಥಿಕತೆಯ ದೇಶಗಳಿಗೆ ರಶ್ಯದ ತೈಲ ರಫ್ತು ಹೆಚ್ಚಳವಾಗಿರುವುದು ಶ್ಲಾಘನೀಯ ಎಂದು ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ. ಬ್ರಿಕ್ಸ್ ಶೃಂಗಸಭೆಗೂ ಮುನ್ನ ನಡೆದ ಬ್ರಿಕ್ಸ್ ವ್ಯಾಪಾರ ವೇದಿಕೆಯ ಸಭೆಯನ್ನುದ್ದೇಶಿಸಿ ಮಾತನಾಡಿದ ಪುಟಿನ್, ರಶ್ಯ ವ್ಯವಹಾರ ಸಮುದಾಯ ಹಾಗೂ ಬ್ರಿಕ್ಸ್ನ ಇತರ ದೇಶಗಳ ನಡುವಿನ ಸಂಪರ್ಕಗಳು ತೀವ್ರಗೊಂಡಿವೆ ಎಂದರು. ‌

ಹಲವು ಸಮಸ್ಯೆ ಹಾಗೂ ಸಂಕಷ್ಟಗಳಿದ್ದರೂ, ಬ್ರಿಕ್ಸ್ ವ್ಯಾಪಾರ ವಲಯವು ವ್ಯಾಪಾರ, ಹಣಕಾಸು ಮತ್ತು ಹೂಡಿಕೆಯ ಕ್ಷೇತ್ರಗಳಲ್ಲಿ ಪರಸ್ಪರ ಲಾಭದಾಯಕ ಸಂಬಂಧಗಳನ್ನು ಸ್ಥಿರವಾಗಿ ಹೆಚ್ಚಿಸುತ್ತಿವೆ. ಉದಾಹರಣೆಗೆ, ಈ ವರ್ಷದ ಪ್ರಥಮ 3 ತಿಂಗಳಲ್ಲಿ ರಶ್ಯ ಒಕ್ಕೂಟ ಮತ್ತು ಬ್ರಿಕ್ಸ್ ದೇಶಗಳ ನಡುವಿನ ವ್ಯಾಪಾರ 38% ಹೆಚ್ಚಳವಾಗಿದ್ದು 45 ಬಿಲಿಯನ್ ಡಾಲರ್ಗೆ ತಲುಪಿದೆ ಎಂದವರು ಹೇಳಿದ್ದಾರೆ. ರಶ್ಯದಲ್ಲಿ ಭಾರತದ ಸರಣಿ ಅಂಗಡಿಗಳನ್ನು ಆರಂಭಿಸುವ ಹಾಗೂ ಚೀನಾದ ಕಾರುಗಳನ್ನು ಆಮದು ಮಾಡಿಕೊಳ್ಳುವ ಬಗ್ಗೆ ಮಾತುಕತೆ ಪ್ರಗತಿಯಲ್ಲಿದೆ. 

ಬ್ರಿಕ್ಸ್ ಸಹಯೋಗಿಗಳೊಂದಿಗೆ ಜಂಟಿಯಾಗಿ ಅಂತರಾಷ್ಟ್ರೀಯ ಪಾವತಿ ವ್ಯವಸ್ಥೆಯನ್ನು ರೂಪಿಸಲು ನಿರ್ಧರಿಸಲಾಗಿದೆ. ರಶ್ಯದ ಹಣಕಾಸು ಸಂದೇಶ ವ್ಯವಸ್ಥೆಯು ಬ್ರಿಕ್ಸ್ ದೇಶಗಳ ಬ್ಯಾಂಕ್ಗಳೊಂದಿಗೆ ಸಂಪರ್ಕಕ್ಕೆ ಮುಕ್ತವಾಗಿದೆ. ರಶ್ಯದ ಎಂಐಆರ್ ಪಾವತಿ ವ್ಯವಸ್ಥೆ ತನ್ನ ಉಪಸ್ಥಿತಿಯನ್ನು ವಿಸ್ತರಿಸುತ್ತಿದೆ. ಬ್ರಿಕ್ಸ್ ಕರೆನ್ಸಿಗಳ ಆಧಾರದಲ್ಲಿ ಅಂತರಾಷ್ಟ್ರೀಯ ಕರೆನ್ಸಿ ವಿನಿಮಯ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ ಎಂದು ಪುಟಿನ್ ಹೇಳಿದ್ದಾರೆ. ನಿರ್ಬಂಧದಿಂದಾಗಿ ಪಾಶ್ಚಿಮಾತ್ಯ ಮಾರುಕಟ್ಟೆಗೆ ತೈಲ ಪೂರೈಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆ ನಷ್ಟವನ್ನು ಭಾರತ ಮತ್ತು ಚೀನಾಕ್ಕೆ ಹೆಚ್ಚುವರಿ ತೈಲ ರಫ್ತು ಮಾಡುವ ಮೂಲಕ ಸರಿದೂಗಿಸಲು ರಶ್ಯ ಬಯಸಿದೆ. ಬ್ರೆಝಿಲ್, ರಶ್ಯ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ‘ಬ್ರಿಕ್ಸ್’ನ ಸದಸ್ಯರಾಗಿವೆ. ಬ್ರಿಕ್ಸ್ನ ವಾರ್ಷಿಕ ಶೃಂಗಸಭೆಗೂ ಮುನ್ನ ಈ 5 ದೇಶಗಳ ಮುಖಂಡರು ಬ್ರಿಕ್ಸ್ ವ್ಯಾಪಾರ ವೇದಿಕೆಯ ಸಭೆಯಲ್ಲಿ ಮಾತನಾಡಿದರು.
 
ಸಭೆಯಲ್ಲಿ ಮಾತನಾಡಿದ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್, ಪಾಶ್ಚಿಮಾತ್ಯ ದೇಶಗಳು ಜಾಗತಿಕ ಪರಿಣಾಮ ಬೀರುವ ಏಕಪಕ್ಷೀಯ ನಿರ್ಬಂಧ ಜಾರಿಗೊಳಿಸುತ್ತಿವೆ ಎಂದು ಟೀಕಿಸಿದರು. ಅಭಿವೃದ್ಧಿ ಹೊಂದಿದ ಪ್ರಮುಖ ದೇಶಗಳು ಜವಾಬ್ದಾರಿಯುತ ಆರ್ಥಿಕ ನೀತಿಗಳನ್ನು ಅನುಸರಿಸಬೇಕು ಮತ್ತು ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೊರೆಯಾಗುವ ನಕಾರಾತ್ಮಕ ನೀತಿಯನ್ನು ದೂರಗೊಳಿಸಬೇಕು. ನಿರ್ಬಂಧಗಳು ತಿರುಗುಬಾಣವಾಗಬಹುದು ಮತ್ತು ಎರಡು ಅಲಗಿನ ಕತ್ತಿಯಂತೆ ಎಂಬುದು ಹಲವು ಬಾರಿ ದೃಢಪಟ್ಟಿದೆ. 

ಜಾಗತಿಕ ಅರ್ಥವ್ಯವಸ್ಥೆಯನ್ನು ರಾಜಕೀಯಗೊಳಿಸಿ ಇದನ್ನು ಆಯುಧದಂತೆ ಬಳಸುವುದು ಹಾಗೂ ಅಂತರಾಷ್ಟ್ರೀಯ ಹಣಕಾಸು ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ತಮಗಿರುವ ಪ್ರಾಥಮಿಕ ಸ್ಥಾನವನ್ನು ಬಳಸಿಕೊಂಡು ಇಚ್ಛಾನುಸಾರ ನಿರ್ಬಂಧ ಜಾರಿಗೊಳಿಸುವುದರಿಂದ ಇತರರ ಹಿತಾಸಕ್ತಿಯ ಜತೆಗೆ ಅವರ ಹಿತಾಸಕ್ತಿಗೂ ಹಾನಿಯಾಗಲಿದೆ ಮತ್ತು ಇದರಿಂದ ಎಲ್ಲರೂ ತೊಂದರೆ ಪಡುವಂತಾಗುತ್ತದೆ ಎಂದು ಜಿಂಪಿಂಗ್ ಹೇಳಿದರು. 

ಸಭೆಯಲ್ಲಿ ಮಾತನಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಉಕ್ರೇನ್ ಯುದ್ಧ ಮತ್ತು ಅದರ ಪರಿಣಾಮಗಳ ಬಗ್ಗೆ ಪ್ರಸ್ತಾವಿಸಲಿಲ್ಲ. ಕೊರೋನ ಸಾಂಕ್ರಾಮಿಕದಿಂದ ಬಿಗಡಾಯಿಸಿದ್ದ ಆರ್ಥಿಕ ಬಿಕ್ಕಟ್ಟನ್ನು ಹಳಿಗೆ ತರುವಲ್ಲಿ ತಮ್ಮ ಸರಕಾರದ ಕಾರ್ಯನೀತಿ ಯಶಸ್ವಿಯಾಗಿದೆ. ಈ ವಿಧಾನದ ಫಲಿತಾಂಶ ಭಾರತದ ಅರ್ಥವ್ಯವಸ್ಥೆಯ ಕಾರ್ಯಕ್ಷಮತೆಯಿಂದ ಸ್ಪಷ್ಟವಾಗಿದೆ. ಈ ವರ್ಷ ಭಾರತದ ಜಿಡಿಪಿ 7.5%ಕ್ಕೆ ತಲುಪುವ ನಿರೀಕ್ಷೆಯಿದ್ದು ಇದರೊಂದಿಗೆ ಅತ್ಯಧಿಕ ವೇಗದಿಂದ ಬೆಳೆಯುತ್ತಿರುವ ಪ್ರಮುಖ ಅರ್ಥವ್ಯವಸ್ಥೆ ನಮ್ಮದಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News