ಜು.1ರಂದು ವಿಚಾರಣೆಗೆ ಹಾಜರಾಗುವಂತೆ ಈಡಿ ಸಮನ್ಸ್: ಡಿ.ಕೆ.ಶಿವಕುಮಾರ್

Update: 2022-06-24 13:31 GMT

ಬೆಂಗಳೂರು, ಜೂ.24: ಜಾರಿ ನಿರ್ದೇಶನಾಲಯ(ಈ.ಡಿ)ವು ನನ್ನ ಪ್ರಕರಣದಲ್ಲಿ 3 ವರ್ಷಗಳ ಹಿಂದೆ ಆರೋಪಪಟ್ಟಿ ಸಲ್ಲಿಸಬೇಕಿತ್ತು. ಈಗ ಹಾಕಿದ್ದಾರೆ. ಈ ಮಧ್ಯೆ, ದೇಶದಲ್ಲಿ ಎಲ್ಲೂ ಇಲ್ಲದ, ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಸಿಬಿಐ ವಿಚಾರಣೆಗೆ ಅನುಮತಿ ನೀಡಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಶುಕ್ರವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದೇನೆ. ಈಗ ಮತ್ತೆ 5 ಜನಕ್ಕೆ ನೋಟಿಸ್ ನೀಡಿದ್ದಾರೆ. ಅದಕ್ಕೆ ನಾವು ಏನು ಉತ್ತರ ನೀಡಬೇಕೋ ಅದನ್ನು ನೀಡುತ್ತೇವೆ ಎಂದರು.

ಈ ವಿಚಾರವಾಗಿ ಬಹಳ ಮಾತನಾಡುವುದಿದೆ. ಬಿಜೆಪಿಯವರು ಏನೆಲ್ಲಾ ಮಾತನಾಡುತ್ತಾರೋ ಮಾತನಾಡಲಿ. ನಂತರ ನಾನು ಮಾತನಾಡುತ್ತೇನೆ. ನನಗೆ ಬಂದಿರುವ ಸಮನ್ಸ್ ಪ್ರಕಾರ ಜುಲೈ 1ನೇ ತಾರೀಕು ಈ.ಡಿ ಕೋರ್ಟ್‍ಗೆ ಹಾಜರಾಗಬೇಕಾಗಿದೆ. ಸಾಮಾನ್ಯವಾಗಿ ಆರೋಪಪಟ್ಟಿ ಸಲ್ಲಿಸಿದ ನಂತರ ಸಮನ್ಸ್ ನೀಡುತ್ತಾರೆ. ನನಗೆ ಸುಪ್ರೀಂಕೋರ್ಟ್‍ನಲ್ಲಿ ಜಾಮೀನು ದೊರೆತಿದ್ದು, ಕಾನೂನಿಗೆ ಗೌರವ ಕೊಟ್ಟು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News