ಸುಳ್ಳು ಮಾಹಿತಿ ನೀಡಿದ ಸಚಿವರನ್ನು ವಜಾ ಮಾಡಿ: ವಿಪಕ್ಷ ನಾಯಕ ಸಿದ್ದರಾಮಯ್ಯ

Update: 2022-06-24 13:35 GMT

ಬೆಂಗಳೂರು, ಜೂ. 24: ‘ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಉದ್ಭವಿಸಿರುವ ಎಲ್ಲ ಅಂಶಗಳ ಕುರಿತು ಸರಕಾರ  ನಿಖರ ಮಾಹಿತಿ ಜನರ ಮುಂದೆ ಮಂಡಿಸಬೇಕು. ‘ಸುಳ್ಳು ಹೇಳುವುದಿಲ್ಲ, ಪಕ್ಷಪಾತ ಮಾಡುವುದಿಲ್ಲ' ಎಂದು ಅಧಿಕಾರ ಸ್ವೀಕರಿಸಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ನಾಡಿನ ಜನರಿಗೆ ಸುಳ್ಳು ಹೇಳಿರುವ ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕು. ಮಾಧ್ಯಮಗಳಿಗೆ ಸುಳ್ಳು ಮಾಹಿತಿ ಬಿಡುಗಡೆ ಮಾಡಿರುವ ಸಚಿವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸರಕಾರ ಬೇಷರತ್ತಾಗಿ ನಾಡಿನ ಜನರ ಕ್ಷಮೆ ಕೇಳಬೇಕು' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಶುಕ್ರವಾರ ಈ ಸಂಬಂಧ ಸುದೀರ್ಘ ಪ್ರಕಟಣೆ ಹೊರಡಿಸಿರುವ ಅವರು, ‘ಬರಗೂರು ಸಮಿತಿ ನೇತೃತ್ವದಲ್ಲಿ ತಜ್ಞರು ಬರೆದಿದ್ದ ಪಾಠಗಳಿಗೆ ವೈಜ್ಞಾನಿಕ ತಳಹದಿ ಇರುವುದರಿಂದ ಅವುಗಳನ್ನೆ ಮುಂದುವರಿಸಬೇಕು. ಜೊತೆಗೆ ಕನ್ನಡಿಗರಿಂದ ಬಂದಿರುವ ಪ್ರತಿರೋಧಗಳಿಂದಾಗಿ ಈಗಾಗಲೆ ಮುದ್ರಿಸಲಾಗಿದ್ದ ಪುಸ್ತಕಗಳನ್ನು ಹಿಂಪಡೆದು ಕೆಲವು ಸಂಗತಿಗಳನ್ನು ಮರುಮುದ್ರಿಸಲಾಗಿದೆ ಎಂಬ ಮಾಹಿತಿ ಇದೆ. ಹಾಗಾಗಿ ಇಷ್ಟೂ ಹಣವನ್ನು ಸಂಬಂಧಿಸಿದವರಿಂದ ವಸೂಲು ಮಾಡಬೇಕು' ಎಂದು ಸಲಹೆ ನೀಡಿದ್ದಾರೆ.

‘ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಲ್ಲಿ ಎಳೆಯ ಮಕ್ಕಳ ಮನಸ್ಸುಗಳಿಗೆ ಸರಕಾರ ಮತ್ತು ಸರಕಾರದ ಹಿಂದೆ ಗುಪ್ತವಾಗಿ ಕೆಲಸ ಮಾಡುತ್ತಿರುವ ಸಂಘ ಪರಿವಾರ ವಿಷ ಹಾಕಲು ಹೊರಟಿವೆ. ವಿವಾದ ಪ್ರಾರಂಭವಾಗಿ ತಿಂಗಳುಗಳು ಕಳೆಯುತ್ತಿದ್ದರೂ ತಜ್ಞರ ಸಮಿತಿ ಮಾಡಿ ಸಮಸ್ಯೆಗಳೇನು ಎಂದು ಪರಿಶೀಲಿಸುವ ಬದಲಿಗೆ ಚಕ್ರತೀರ್ಥ ಮಾಡಿರುವ ಪ್ರಮಾದಗಳನ್ನು ಸಮರ್ಥಿಸಿಕೊಳ್ಳುವ ಬೇಜವಾಬ್ದಾರಿತನವನ್ನು ಸರಕಾರ ತೋರಿಸುತ್ತಿದೆ' ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

‘ನಿನ್ನೆ ಸುದ್ದಿಗೋಷ್ಠಿ ನಡೆಸಿದ ನಾಲ್ಕೂ ಜನ ಸಚಿವರು ಶಿಕ್ಷಣ ಇಲಾಖೆಯ ಬಗ್ಗೆ ಮಾಹಿತಿಯೆ ಇಲ್ಲದವರು ಮತ್ತು ಅದರಲ್ಲಿ 3 ಜನ ಶೂದ್ರ ಸಮುದಾಯಗಳಿಗೆ ಸೇರಿದ ಸಚಿವರು. ಹಾಗೊಂದು ವೇಳೆ ಸಮರ್ಪಕ ಮಾಹಿತಿ ಇದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೋಷ್ಠಿ ನಡೆಸಬೇಕಾಗಿತ್ತು. ವಾಸ್ತವವಾಗಿ ಸತ್ಯ ಸಂಗತಿಗಳನ್ನು ವಿವರಿಸಬೇಕಾಗಿದ್ದುದು ಸಂಬಂಧಿತ ಶಿಕ್ಷಣ ಸಚಿವರು. ಕಂದಾಯ ಸಚಿವ ಆರ್.ಅಶೋಕ್ ಕುಳಿತುಕೊಂಡು ಸಂಪೂರ್ಣವಾಗಿ ಈ ವಿಚಾರವನ್ನು ರಾಜಕೀಕರಣಗೊಳಿಸಲು ಪ್ರಯತ್ನ ಮಾಡಿದ್ದಾರೆ' ಎಂದು ಸಿದ್ದರಾಮಯ್ಯ ದೂರಿದ್ದಾರೆ.

‘ಪಠ್ಯ ಪುಸ್ತಕಗಳು ಪಕ್ಷ ಪುಸ್ತಕಗಳಾಗಬಾರದೆಂದು ಹಲವು ಚಿಂತಕರು ಹಾಗೂ ಸಂಸ್ಥೆಗಳು ಹೇಳುತ್ತಾ ಬಂದಿವೆ. ಭಾರತದಲ್ಲಿ ಇದುವರೆಗೆ ರಚನೆಯಾಗಿರುವ ಶಿಕ್ಷಣ ಆಯೋಗಗಳು ಮಕ್ಕಳಿಗೆ ಏನನ್ನು ಕಲಿಸಬೇಕು? ಏನನ್ನು ಕಲಿಸಬಾರದು ಎಂದು ಸ್ಪಷ್ಟವಾಗಿ ಹೇಳಿವೆ. ಕಲಿಸಬೇಕಾದ ಸಂಗತಿಗಳಲ್ಲಿ ಮುಖ್ಯವಾಗಿ ಸಂವಿಧಾನದ ಆಶಯಗಳು ಇರಬೇಕು ಮತ್ತು ಕಲಿಸಬಾರದ ಸಂಗತಿಗಳಲ್ಲಿ ಮುಖ್ಯವಾಗಿ ಹಿಂಸೆ, ದ್ವೇಷ, ಅಸಹನೆ, ಅವೈಜ್ಞಾನಿಕತೆ, ಮತಾಂಧತೆ, ಮೌಢ್ಯ, ತಾರತಮ್ಯ ಗುಣಗಳನ್ನು ಯಾವ ಕಾರಣಕ್ಕೂ ಕಲಿಸಬಾರದು ಎಂದು ಒತ್ತಿ ಹೇಳಲಾಗಿದೆ' ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

‘ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ರೂಪಿಸಬೇಕಾದರೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ಪ್ರತಿಪಾದನೆ ಮಾಡುವಂಥ ನಿಲುವುಗಳನ್ನು ಮಕ್ಕಳಿಗೆ ಕಲಿಸಬೇಕು. ಹಿಂದಿನ ಪಠ್ಯದಿಂದ ಸಾಮಾಜಿಕ ನ್ಯಾಯ, ಲಿಂಗ ಸಮಾನತೆ, ಪ್ರಾದೇಶಿಕ ಒಳಗೊಳ್ಳುವಿಕೆಯ ತತ್ವಗಳನ್ನು ಪ್ರತಿಪಾದಿಸುವ ಪಠ್ಯಗಳನ್ನು ಕಿತ್ತು ಹಾಕಿರುವುದು ಅಕ್ಷಮ್ಯ. ಹೊಸದಾಗಿ ಸೇರಿಸಲಾದ ಪಾಠಗಳು ಬಿಜೆಪಿ-ಸಂಘಪರಿವಾರದ ಸಿದ್ಧಾಂತಕ್ಕೆ ಪೂರಕವಾದ ರೀತಿಯಲ್ಲಿ ಇರುವುದು ಸ್ಪಷ್ಟವಾಗಿದೆ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಡದ, ಯಾವ ಅರ್ಹತೆಯೂ ಇಲ್ಲದ ವ್ಯಕ್ತಿ ರೋಹಿತ್ ಚಕ್ರತೀರ್ಥ ಎಂಬುವವರಿಗೆ ಪಠ್ಯ ಪರಿಶೀಲನೆ ಮಾಡುವುದಕ್ಕೆ ಬದಲಾಗಿ ಸರಕಾರದ ಅಧಿಕೃತ ಆದೇಶವೇ ಇಲ್ಲದೆ ಪರಿಷ್ಕರಣೆ ಮಾಡಿದ್ದಾರೆ. ಈ ಪರಿಷ್ಕರಣೆ ಸÀಂವಿಧಾನದ ಆಶಯಗಳನ್ನು ಉಲ್ಲಂಘಿಸಿರುವುದರಿಂದ ಅಸಾಂವಿಧಾನಿಕವಾಗಿದೆ, ಅಪ್ರಜಾತಾಂತ್ರಿಕ ನಿಲುವಿನಿಂದ ಕೂಡಿದೆ ಎಂದು ಇದರಿಂದ ಸಾಬೀತಾಗಿದೆಯೆಂದು ಹಲವು ತಜ್ಞರುಗಳು ಪ್ರತಿ ಪಾದಿಸುತ್ತಿದ್ದಾರೆ. 

‘ನಮ್ಮ ಸರಕಾರದ ಅವಧಿಯಲ್ಲಿ ಪರಿಷ್ಕರಣೆ ಮಾಡಿದ್ದ ಪಠ್ಯ ಪುಸ್ತಕಗಳನ್ನು ವಿಪಕ್ಷದಲ್ಲಿದ್ದ ಬಿಜೆಪಿಯಾಗಲಿ, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಣ ತಜ್ಞರಾಗಲಿ, ಶಿಕ್ಷಕರಾಗಲಿ, ಸಮುದಾಯಗಳಾಗಲಿ, ಮಕ್ಕಳಾಗಲಿ, ಪೆÇೀಷಕರಾಗಲಿ ವಿರೋಧ ವ್ಯಕ್ತಪಡಿಸಿರಲಿಲ್ಲ. ಏಕೆಂದರೆ ಬರಗೂರು ಅಧ್ಯಕ್ಷತೆಯ ಸಮಿತಿಯು ಇಡೀ ನಾಡು, ನುಡಿ, ಪ್ರಾದೇಶಿಕ ವೈವಿಧ್ಯ, ಭಿನ್ನ ಸಂವೇದನೆಗಳನ್ನು ಒಳಗೊಂಡು ಬಹುತ್ವದ ನೆಲೆಯಲ್ಲಿ ಪಠ್ಯ ಪುಸ್ತಕಗಳನ್ನು ರಚಿಸಿತ್ತು ಮತ್ತು ಮುಖ್ಯವಾಗಿ ಸಂವಿಧಾನದ ಆಶಯಗಳನ್ನು ಪ್ರತಿಪಾದಿಸುವ ನಿಲುವುಗಳನ್ನು ಎತ್ತಿ ಹಿಡಿಯಲಾಗಿತ್ತು, ಆದಕಾರಣ ಬರಗೂರು ಸಮಿತಿಯ ಪರಿಷ್ಕರಣೆಗೆ ವಿರೋಧ ಬಂದಿರಲಿಲ್ಲ. ಆದರೆ ಈಗ ಕರ್ನಾಟಕದ ಜನರಷ್ಟೇ ಅಲ್ಲ, ತಜ್ಞರುಗಳೂ ವಿರೋಧಿಸಿದ್ದಾರೆ. ಜೊತೆಗೆ ಆಡಳಿತಾರೂಢ ಬಿಜೆಪಿಯ ಎಂಎಲ್‍ಎ, ಎಂಪಿಗಳೆ ವಿರೋಧಿಸಿದ್ದಾರೆ. ಆದರೆ ಬಿಜೆಪಿ ಸರಕಾರ ಮಾಡಿರುವ ಪಠ್ಯ ಪರಿಷ್ಕರಣೆಯಲ್ಲಿ ಕನ್ನಡ ಭಾಷೆಯ ಪಠ್ಯ ಪುಸ್ತಕದಲ್ಲಿ 21 ಜನ ಶೂದ್ರ ಕವಿ, ಲೇಖಕರ ಬರಹಗಳನ್ನು ಕೈ ಬಿಡಲಾಗಿದೆ (ಅದರಲ್ಲಿ 6ಕ್ಕೂ ಹೆಚ್ಚು ಜನ ದಲಿತ ಸಮುದಾಯಗಳ ಬರಹಗಾರರ ಬರಹಗಳು, 8ಕ್ಕೂ ಹೆಚ್ಚು ಜನ ಲಿಂಗಾಯತ ಸಮುದಾಯಗಳ ಬರಹಗಳನ್ನು ಕೈ ಬಿಡಲಾಗಿದೆ).

ಶೂದ್ರ, ದಲಿತ ಬರಹಗಾರರ ಪದ್ಯ, ಗದ್ಯಗಳನ್ನು ಕೈ ಬಿಟ್ಟು 28 ಜನರ ಬರಹಗಳನ್ನು ಸೇರಿಸಿದ್ದಾರೆ. ಸೇರ್ಪಡೆಗೊಂಡ ಶೇ.95ರಷ್ಟು ಜನ ಲೇಖಕರು ಒಂದೇ ಸಮುದಾಯದವರೆ ಆಗಿದ್ದಾರೆ. ಅವರೆಲ್ಲರೂ ಬ್ರಾಹ್ಮಣರಾಗಿದ್ದಾರೆ. ಆದರಲ್ಲೂ ಸಂವಿಧಾನ ವಿರೋಧಿ ಆರೆಸ್ಸೆಸ್ ಸಿದ್ಧಾಂತ ಬೆಂಬಲಿಸುವ ಬ್ರಾಹ್ಮಣ ಲೇಖಕರ ಗದ್ಯ-ಪದ್ಯಗಳನ್ನು ಕಲಿಸಬಾರದೆನ್ನುವ ವಿಕೃತಿ ನಮ್ಮದಲ್ಲ. ಈ ಹಿಂದೆಯೂ ಹಲವಾರು ಬ್ರಾಹ್ಮಣ ಲೇಖಕರ ಪಠ್ಯಗಳು ಇದ್ದವು. ಆದರೆ, ಅವರ ಜೊತೆಯಲ್ಲಿ ಸಮಾಜದ ಎಲ್ಲ ಸ್ತರಗಳ ಲೇಖಕ ಲೇಖಕಿಯರಿಗೆ ಅವಕಾಶ ಕಲ್ಪಿಸುವುದು ಸಂವಿಧಾನದ ತತ್ವಗಳಿಗೆ ಅನುಗುಣವಾಗಿದೆ. ಆದರೆ ಈಗ ಸಂಪೂರ್ಣ ಕಡೆಗಣಿಸಲಾಗಿದೆ. ಈಗ ಪಠ್ಯ ಪುಸ್ತಕಗಳಲ್ಲಿ ಶೂದ್ರ, ದಲಿತ, ಅಲ್ಪಸಂಖ್ಯಾತರ ಕುರಿತು ದ್ವೇಷ ಸಾಧಿಸುವ, ಬಹುಪಾಲು ಜನ ಆರೆಸೆಸ್ಸ್‍ಗೆ ಸೇರಿದವರ ಪಾಠಗಳನ್ನು ಸೇರಿಸಲಾಗಿದೆ. ಇವರಲ್ಲಿ ಬಹುಪಾಲು ಜನ ಲೇಖಕರೇ ಅಲ್ಲ. ಮನುವಾದಿ ಅಜೆಂಡಾವನ್ನು ಪ್ರಚಾರ ಮಾಡುವ ವಕ್ತಾರರುಗಳಷ್ಟೇ. 

ಈ ಮನುವಾದಿ ಸಿದ್ಧಾಂತದ ಎಲ್ಲ ಶೂದ್ರ-ದಲಿತ, ದುಡಿಯುವ ವರ್ಗಗಳ ವಿರೋಧಿಯಾದ ಬಿಜೆಪಿ ಸರಕಾರ ನಾಲ್ಕು ಜನ ಶೂದ್ರ ಸಮುದಾಯಗಳಿಗೆ ಸೇರಿದ ಸಚಿವರುಗಳ ಬಾಯಲ್ಲಿ ಸುಳ್ಳು ಹೇಳಿಸಿದೆ. ಧೈರ್ಯವಿಲ್ಲದ, ಗೊತ್ತಿಲ್ಲದೆ ಬೆನ್ನಿಗೆ ಇರಿಯುವ ಸ್ವಭಾವದ ಮನುವಾದಿ ದುಷ್ಟರು ನಾಡಪ್ರಭು ಕೆಂಪೇಗೌಡರ ಪಾಠಗಳನ್ನು ಕೈಬಿಟ್ಟಿದೆ ಎಂದು ಹೇಳಿದ್ದಾರೆ. ಸರಕಾರವೊಂದು ಇಷ್ಟು ಹಸಿಯಾದ ಸುಳ್ಳು ಹೇಳಿದರೆ ಅದಕ್ಕೆ ಕ್ಷಮೆ ಇದೆಯೆ? ಬರಗೂರು ಸಮಿತಿಯು ನಾಡಪ್ರಭು ಕೆಂಪೇಗೌಡರ ಕುರಿತಾದ ಪಾಠವನ್ನು 3 ಪುಟಗಳಷ್ಟನ್ನು ಸೇರಿಸಿತ್ತು. ಇದನ್ನು ಬಿಜೆಪಿ ಸರಕಾರವು 1 ಪುಟಕ್ಕೆ ಇಳಿಸಿರುವ ಮಾಹಿತಿ ಸರಕಾರದ ವೆಬ್‍ಸೈಟಿನಲ್ಲಿದೆ.

ಬಿಜೆಪಿ ಸರಕಾರವು ಈ ವಿಚಾರದಲ್ಲಿ ದುಷ್ಟ ರಾಜಕಾರಣಕ್ಕೆ ಇಳಿದಿದೆ. ಸಂಘಿ ಫಿಲಾಸಫಿಯನ್ನು ಹೇರಲು ಹುನ್ನಾರ ಹುಡುಕುತ್ತಿದೆ. ನಾನು ಮುಖ್ಯಮಂತ್ರಿ ಇದ್ದಾಗ ಆಧುನಿಕ ಮೈಸೂರಿನ ಶಿಲ್ಪಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಲ್ಲಿ ಮೈಸೂರಿನಲ್ಲಿ ಅಧ್ಯಯನ ಪೀಠ ಮಾಡಿ 5 ಕೋಟಿ ರೂ.ಹಣ ನೀಡಿದ್ದೆ. ಹಾಗೆಯೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇರಿಸಿದ್ದೆವು. ಜೊತೆಗೆ ಕೆಂಪೇಗೌಡರ ಅಭಿವೃದ್ಧಿ ಪ್ರಾಧಿಕಾರವನ್ನು 2016-17ರ ಬಜೆಟ್‍ನಲ್ಲಿ ಘೋಷಿಸಿ ವರ್ಷಕ್ಕೆ 5ಕೋಟಿ ರೂ.ಗಳನ್ನು ನೀಡಿದ್ದೆವು. 2018ರಲ್ಲಿ ಅದಕ್ಕೊಂದು ಕಾಯ್ದೆಯ ಸ್ವರೂಪವನ್ನೂ ನೀಡಿದ್ದೆವು. ನಾವು ನಾಡು ಕಟ್ಟಿದ ಯಾವ ಮಹನೀಯರಿಗೂ ಅಗೌರವ ತೋರಿಲ್ಲ. ತೋರುವುದೂ ಇಲ್ಲ. ಇವ ನಮ್ಮವನೆಂದು ತಿಳಿದು ರಾಜಕಾರಣ ಮಾಡುವವರು ನಾವು. ಶ್ರೇಷ್ಠತೆಯ ಕೊಳಕನ್ನು ಎದೆಯಲ್ಲಿಟ್ಟುಕೊಂಡು ಬಿಜೆಪಿಯ ಹಿಂದಿನ ಶಕ್ತಿಗಳು ರಾಜಕಾರಣಕ್ಕೆ ಇಳಿದಿವೆ. ಇದನ್ನು ನಾವು ವಿರೋಧಿಸಲೇಬೇಕಾಗಿದೆ' ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

ಸಹಿಸುವುದು ಸಾಧ್ಯವಿಲ್ಲ

‘ಬಿಜೆಪಿ ಸರಕಾರ ಚಕ್ರತೀರ್ಥರ ಮೂಲಕ ಮಾಡಿಸಿರುವ ಅಧ್ವಾನಗಳನ್ನು ಹಲವು ರೀತಿಯಲ್ಲಿ ಗಮನಿಸಬೇಕಾಗಿದೆ. ಈ ಪಠ್ಯ ಪುಸ್ತಕ ಪರಿಷ್ಕರಣೆಯು ಸಂವಿಧಾನ ವಿರೋಧಿ ಆಶಯಗಳುಳ್ಳದ್ದಾಗಿದೆ. ಅಪ್ರತಾಂತ್ರಿಕ ನಿಲುವಿನದ್ದಾಗಿದೆ. ಬ್ರಾಹ್ಮಣ ಶ್ರೇಷ್ಠತೆಯನ್ನು ಎತ್ತಿ ಹಿಡಿದು ಶೂದ್ರ, ದಲಿತರ ಅಸ್ಮಿತೆಯನ್ನು ನಿರಾಕರಿಸುವುದಾಗಿದೆ ಅಥವಾ ಕೀಳುಗಳೆಯುವುದಾಗಿದೆ. ವರ್ಣ-ಜಾತಿ ವ್ಯವಸ್ಥೆಯ ವಿರುದ್ಧ ಪ್ರತಿಭಟನೆ ಮಾಡಿ ದುಡಿಯುವ ವರ್ಗಗಳ ಪರವಾದ, ಮಾನವೀಯತೆಯ ಪರವಾದ ಹೋರಾಟ ಕಟ್ಟಿದ ಬುದ್ಧ, ಮಹಾವೀರ, ಬಸವಣ್ಣ, ಕನಕದಾಸರು, ನಾರಾಯಣ ಗುರುಗಳು, ಸಾವಿತ್ರಿಫುಲೆ, ಅಂಬೇಡ್ಕರ್, ಕುವೆಂಪು ಮುಂತಾದವರ ಚರಿತ್ರೆಯನ್ನು ನಿರಾಕರಿಸಿರುವುದು ಅಥವಾ ತಿರುಚಲು ಪ್ರಯತ್ನಿಸಿರುವುದು ಅಕ್ಷಮ್ಯ. ಹಾಗೆಯೆ ಸಾಮ್ರಾಜ್ಯಶಾಹಿಗಳ, ದೊಡ್ಡ ಸಾಮ್ರಾಜ್ಯಗಳ ವಿರುದ್ಧ ಯುದ್ಧ ಮಾಡಿದ ಅಬ್ಬಕ್ಕ ರಾಣಿ, ಕೆಂಪೇಗೌಡರು ಮುಂತಾದ ಮಹನೀಯರನ್ನು ನಿರ್ಲಕ್ಷಿಸಿರುವುದನ್ನು ಸಹಿಸುವುದು ಸಾಧ್ಯವಿಲ್ಲ'

-ಸಿದ್ದರಾಮಯ್ಯ ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News