ಸ್ಮಶಾನಕ್ಕೆ ಜಾಗ ಒದಗಿಸದ ಹಿನ್ನೆಲೆ: ನ್ಯಾಯಾಂಗ ನಿಂದನೆ ಆರೋಪ ನಿಗದಿಗೆ ಹೈಕೋರ್ಟ್ ನಿರ್ಧಾರ

Update: 2022-06-24 14:55 GMT

ಬೆಂಗಳೂರು, ಜೂ.24: ಶವ ಸಂಸ್ಕಾರಕ್ಕೆ ಸ್ಮಶಾನ ಜಾಗ ಇಲ್ಲದ ಗ್ರಾಮಗಳು ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸುವಂತೆ ಸೂಚಿಸಿರುವ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ವಿರುದ್ಧ ನ್ಯಾಯಾಂಗ ನಿಂದನೆಯಡಿ ಆರೋಪ ನಿಗದಿಪಡಿಸಲು ಹೈಕೋರ್ಟ್ ನಿರ್ಧರಿಸಿದೆ.

ಈ ಕುರಿತು ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಎಂಬುವರು ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ನಿರ್ಧಾರ ಕೈಗೊಂಡಿದೆ. 

ರಾಜ್ಯದ 1,428 ಗ್ರಾಮಗಳಿಗೆ ಮತ್ತು ಶಿವಮೊಗ್ಗ ಜಿಲ್ಲೆಯ ಒಂದು ಪಟ್ಟಣದಲ್ಲಿ ಸ್ಮಶಾನಕ್ಕೆ ಜಾಗ ನೀಡಬೇಕಿದೆ. ಅದಕ್ಕಾಗಿ ಬೃಹತ್ ಪ್ರಮಾಣದಲ್ಲಿ ಜಮೀನು ಅಗತ್ಯವಿದ್ದು, ಎರಡು ವರ್ಷ ಕಾಲಾವಕಾಶ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು. 

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಏಕ ಸದಸ್ಯ ನ್ಯಾಯಪೀಠ ಆದೇಶ ಹೊರಡಿಸಿಯೇ ಮೂರು ವರ್ಷ ಕಳೆದಿವೆ. ಆದರೂ ಹೈಕೋರ್ಟ್ ಆದೇಶವನ್ನು ಈವರೆಗೂ ಪಾಲಿಸಿಲ್ಲ. ಹೈಕೋರ್ಟ್ ಮೌನವಾಗಿದ್ದರೆ ಸರಕಾರ 20 ವರ್ಷ ಸಮಯ ಕೇಳುತ್ತದೆ. ಹೀಗಾಗಿ, ಮುಂದಿನ ವಿಚಾರಣೆ ವೇಳೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದಡಿ ಆರೋಪ ನಿಗದಿಪಡಿಸಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ಜೂ.30ಕ್ಕೆ ಮುಂದೂಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News