ಬಿಜೆಪಿ ಸರಕಾರದ ಆದ್ಯತೆ ಜನರಲ್ಲ: ಡಿ.ಕೆ.ಶಿವಕುಮಾರ್

Update: 2022-06-24 16:52 GMT

ಬೆಂಗಳೂರು, ಜೂ.24: ರಸ್ತೆಗುಂಡಿಗಳ ವಿಚಾರವಾಗಿ ಮಾಧ್ಯಮಗಳು ಅಭಿಯಾನ ಮಾಡಿದರೂ ಈ ಸರಕಾರ ಅರಿಯಲಿಲ್ಲ. ಜನ ತೊಂದರೆ ಅನುಭವಿಸುವಾಗ ರಸ್ತೆ ಗುಂಡಿ ಮುಚ್ಚಲಿಲ್ಲ. ತಮ್ಮ ನಾಯಕರು ಬರುತ್ತಿದ್ದಾರೆ ಎಂದ ತಕ್ಷಣ ರಸ್ತೆಗೆ ಡಾಂಬರು ಹಾಕಿದರು. ಅವರ ಆದ್ಯತೆ ಜನರಲ್ಲ, ಅವರ ನಾಯಕರು. ಅವರಿಗೆ ಜನರ ಜೀವನ, ಸಮಸ್ಯೆ ಮುಖ್ಯವಲ್ಲ, ಅವರ ನಾಯಕರ ಅನುಕೂಲ ಮುಖ್ಯ ಎಂಬುದು ಸಾಬೀತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.

ಶುಕ್ರವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಊರು ತುಂಬಾ ಫ್ಲೆಕ್ಸ್, ಬಾವುಟ ಹಾಕಿದ್ದರು. ಆದರೆ ಕಾಂಗ್ರೆಸ್ ನಾಯಕರು ಹಾಕಿದರೆ ಅವರ ವಿರುದ್ಧ ಪ್ರಕರಣ ದಾಖಲಿಸುತ್ತಾರೆ. ಪದ್ಮನಾಭನಗರದ ಕಾಂಗ್ರೆಸ್ ಕಚೇರಿ ಒಳಗೆ ಕಟೌಟ್ ಹಾಕಿದ್ದಕ್ಕೆ ನೋಟಿಸ್ ನೀಡಿದ್ದಾರೆ. ಈಗ ಬೆಂಗಳೂರು ತುಂಬಾ ಬಿಜೆಪಿಯವರು ಫ್ಲೆಕ್ಸ್ ಹಾಕಿದ್ದರೂ ಪಾಲಿಕೆ ಆಯುಕ್ತರು, ಪೊಲೀಸ್ ಕಮಿಷನರ್ ಯಾವುದೇ ಕೇಸ್ ಹಾಕಿಲ್ಲ ಯಾಕೆ?’ ಎಂದು ಕಿಡಿಕಾರಿದರು.

ಈ ಸಂಬಂಧ ಕಾನೂನು ಹೋರಾಟ ಮಾಡುತ್ತಿಲ್ಲ ಏಕೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಮೇಲೆ ಕಾನೂನು ಬಳಸಿ ಪ್ರಕರಣ ದಾಖಲಿಸಿ, ಅವರಿಗೆ ಪ್ರಕರಣ ದಾಖಲಿಸದಿದ್ದಾಗ ಅವರ ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ನಾವು ಆ ಬಗ್ಗೆ ಕೆಲಸ ಮಾಡುತ್ತಿದ್ದೇವೆ. ಶಿವಮೊಗ್ಗದಲ್ಲಿ ಈಶ್ವರಪ್ಪ ಕೇವಲ 144 ಸೆಕ್ಷನ್ ಉಲ್ಲಂಘನೆ ಅಷ್ಟೇ ಅಲ್ಲ, ಸಾರ್ವಜನಿಕ ಆಸ್ತಿ ನಾಶ ಮಾಡಿದರು. ಆದರೂ ಅಲ್ಲಿನ ಎಸ್ಪಿ ಯಾರ ವಿರುದ್ಧವೂ ಪ್ರಕರಣ ದಾಖಲಿಸಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ನಾಯಕರ ಮೇಲಿನ ಈಡಿ ತನಿಖೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ರಾಷ್ಟ್ರೀಯ ನಾಯಕರಿಗೆ ಈಡಿ ಅವರು ವಿಚಾರಣೆ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ ಅವರ ವಿಚಾರಣೆ ದ್ವೇಷ ರಾಜಕಾರಣಕ್ಕೆ ಸಾಕ್ಷಿ. ಇಲ್ಲದಿರುವ ಪ್ರಕರಣವನ್ನು ಅವರ ಮೇಲೆ ಹಾಕಲು ಪ್ರಯತ್ನಿಸುತ್ತಿದ್ದು, ಎಲ್ಲರಿಗೂ ಇದೊಂದು ಕುತಂತ್ರ ಎಂದು ಅರ್ಥವಾಗಿದೆ. ಅಧಿಕಾರಿಗಳು ವಿಚಾರಣೆ ಮಾಡಲಿ, ಆದರೆ ಐದು ದಿನಗಳ ಕಾಲ ವಿಚಾರಣೆ ಮಾಡುವ ಅಗತ್ಯವಿಲ್ಲ. ಅವರಿಗೆ ನ್ಯಾಯ ಸಿಗಲಿದೆ ಎಂಬ ನಂಬಿಕೆ ಇದೆ ಎಂದರು.

ಮಾಜಿ ಸಚಿವ ಎಂ.ಆರ್.ಸೀತಾರಾಮ್ ಅಸಮಾಧಾನದಿಂದ ಸಭೆ ನಡೆಸುತ್ತಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನೀವು ಬಿಜೆಪಿಯಲ್ಲಿನ ಅಸಮಾಧಾನದ ಬಗ್ಗೆ ಮಾತನಾಡುವುದಿಲ್ಲ. ಎಚ್.ವಿಶ್ವನಾಥ್, ಯತ್ನಾಳ್, ರೇಣುಕಾಚಾರ್ಯ ಏನು ಹೇಳಿದ್ದಾರೆ ಎಂದು ನೋಡುವುದಿಲ್ಲ. ಸೀತಾರಾಮ್ ಚರ್ಚೆ ಮಾಡಲಿ. ನನಗೆ ಆ ಬಗ್ಗೆ ಯಾವುದೇ ವರದಿ ಬಂದಿಲ್ಲ. ಆ ಸಭೆಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.

ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಮಧ್ಯರಾತ್ರಿ ರಾಜ್ಯಪಾಲರನ್ನು ಕರೆಸಿ ಬೆಳಗಿನ ಜಾವ ಪ್ರಮಾಣವಚನ ಸ್ವೀಕರಿಸಿದ್ದರು. ಅದನ್ನು ನೋಡಿದ ಮೇಲೆ ಪ್ರಜಾಪ್ರಭುತ್ವ ಎಲ್ಲಿದೆ ಎಂದೆನಿಸಿತ್ತು. ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಲೆ ಇದೆ. ಯಾವ ರಾಜ್ಯದಲ್ಲೂ ವಿರೋಧ ಪಕ್ಷಗಳು ಇರಲೇಬಾರದು ಎಂದು ಬಿಜೆಪಿ ಪ್ರಯತ್ನಿಸುತ್ತಿದೆ. ಜನ ಇದ್ದಾರೆ. ಅವರ ಧ್ವನಿ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಪಠ್ಯ ಪರಿಷ್ಕರಣೆ ವಿಚಾರವಾಗಿ ಕಂದಾಯ ಸಚಿವ ಆರ್.ಅಶೋಕ್ ಅವರ ಪತ್ರಿಕಾಗೋಷ್ಠಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಸಿದ್ದರಾಮಯ್ಯ ಅವರ ಕಾಲದಲ್ಲಿ ತಪ್ಪಿದ್ದರೆ, ಆಗ ಅವರು ಬಾಯಿ ಮುಚ್ಚಿಕೊಂಡು ಕೂತಿದ್ದು ಯಾಕೆ? ಅವತ್ತು ಯಾಕೆ ಪ್ರಶ್ನೆ ಮಾಡಲಿಲ್ಲ? ಕಾಂಗ್ರೆಸ್ ಪಕ್ಷಕ್ಕಿಂತ ಜನರೇ ಇದನ್ನು ಹೆಚ್ಚಾಗಿ ವಿರೋಧಿಸುತ್ತಿದ್ದಾರೆ’ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News