ಅಂಗನವಾಡಿ ನೌಕರರ ಗೌರವಧನವನ್ನು ಕೂಡಲೇ ಪಾವತಿಸಿ

Update: 2022-06-24 17:35 GMT

ಬೆಂಗಳೂರು, ಜೂ.24: ರಾಜ್ಯದ ಅಂಗನವಾಡಿ ನೌಕರರಿಗೆ ನಾಲ್ಕು ತಿಂಗಳಿನಿಂದ ಗೌರವಧನವನ್ನು ಪಾವತಿ ಮಾಡಲಿಲ್ಲ. ಹಾಗಾಗಿ ಕೂಡಲೇ ಬಾಕಿಯಿರುವ ಗೌರವಧನವನ್ನು ಪಾವತಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘವು ಆಗ್ರಹಿಸಿದೆ. 

ಈ ಕುರಿತು ಸಂಘವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದು, ಜೀವನಾವಶ್ಯಕ ವಸ್ತುಗಳು, ಆಹಾರ ಪದಾರ್ಥಗಳು, ತರಕಾರಿ, ಮನೆ ಬಾಡಿಗೆ, ಮಕ್ಕಳ ಶಿಕ್ಷಣ, ಔಷಧಿ, ಸಾರಿಗೆ ಇತ್ಯಾದಿಗಳ ಬೆಲೆಗಳು ತೀವ್ರವಾಗಿ ಏರಿಕೆಯಾಗುತ್ತಿದ್ದು, ಸರಕಾರವು ನೀಡುತ್ತಿರುವ ಗೌರವಧನದಲ್ಲಿ ಜೀವನ ನಡೆಸುವುದು ಅತ್ಯಂತ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯದಾದ್ಯಂತ ಎಲ್ಲಾ ಅಂಗನವಾಡಿ ನೌಕರರಿಗೆ ನಾಲ್ಕು ತಿಂಗಳಿನಿಂದ ಗೌರವಧನ ಪಾವತಿಸದೇ ಇರುವುದು, ಅವರ ಬಡ ಕುಟುಂಬಗಳ ಸಂಕಷ್ಟಗಳನ್ನು ಇನ್ನಷ್ಟು ಹೆಚ್ಚಿಸಿದಂತಾಗಿದೆ ಎಂದು ತಿಳಿಸಿದೆ.

ಗೌರವ ಧನ ಪಾವತಿಸಲು ಆಗುತ್ತಿರುವ ವಿಳಂಬಕ್ಕೆ ತಾಂತ್ರಿಕ ಸಮಸ್ಯೆ, ಬಜೆಟ್ ಕೊರತೆ, ರಾಜ್ಯದಿಂದ ಬಂದಿಲ್ಲ ಇತ್ಯಾದಿ ಒಂದೊಂದು ಕಡೆ ಒಂದೊಂದು ಕಾರಣಗಳನ್ನು ಹೇಳಲಾಗುತ್ತಿದೆ. ಕಾರಣಗಳು ಏನೇ ಇದ್ದರೂ ಅವುಗಳನ್ನು ನಿವಾರಿಸಲು ಇಲಾಖೆಯಿಂದ ಈ ಕೂಡಲೇ ತುರ್ತು ಕ್ರಮ ಜರುಗಿಸಿ ಬಾಕಿ ಇರುವ ಎಲ್ಲಾ ತಿಂಗಳುಗಳ ಗೌರವಧನವನ್ನು ಒಂದೇ ಬಾರಿಗೆ ಪಾವತಿಸಲು ಸಂಘವು ಇಲಾಖೆಯನ್ನು ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News