ಮೇಕೂರು ಹೊಸ್ಕೇರಿ ಮನೆ ದರೋಡೆ ಪ್ರಕರಣ: ಅಸ್ಸಾಂ ಮೂಲದ ಇಬ್ಬರ ಬಂಧನ

Update: 2022-06-24 18:18 GMT

ಮಡಿಕೇರಿ ಜೂ.24 : ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮೇಕೂರು ಹೊಸ್ಕೇರಿ ಗ್ರಾಮದ ಒಂಟಿ ಮನೆಯೊಂದರಲ್ಲಿ ನಡೆದಿದ್ದ ದರೋಡೆ ಪ್ರಕರಣವನ್ನು ಬೇಧಿಸಿರುವ ಕೊಡಗು ಜಿಲ್ಲಾ ಪೊಲೀಸರು ಅಸ್ಸಾಂ ರಾಜ್ಯ ಮೂಲದ ಇಬ್ಬರು ಆರೋಪಿಗಳನ್ನು ಮಾಲು ಸಹಿತ ಬಂಧಿಸಿದ್ದಾರೆ. 

ಅಸ್ಸಾಂ ಮೂಲದ ಕುರ್ಬನ್ ಅಲಿ(20) ಹಾಗೂ ಮಹಿರುದ್ದೀನ್ ಆಲಿ(28) ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 247.7 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿಯ ಪೀಚೆ ಕತ್ತಿ ಸಹಿತ ಒಟ್ಟು 11 ಲಕ್ಷದ 70 ಸಾವಿರ ರೂ. ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. 

ಪ್ರಕರಣದಲ್ಲಿ ಶಾಮೀಲಾಗಿರುವ ಅಸ್ಸಾಂ ಮೂಲದ ಇಬ್ಬರು ಆರೋಪಿಗಳಾದ ಸಫಿವುಲ್ ಇಸ್ಲಾಂ ಹಾಗೂ ಮೊಹಿಬುಲ್ ಇಸ್ಲಾಂ ಎಂಬವರು ತಲೆ ಮರೆಸಿಕೊಂಡಿದ್ದು, ಅವರ ಬಂಧನ್ಕಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಚೀರ ಎ.ಅಯ್ಯಪ್ಪ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಪ್ರಕರಣ ಹಿನ್ನೆಲೆ 

ಮೇಕೂರು ಹೊಸ್ಕೇರಿ ಗ್ರಾಮ ನಿವಾಸಿ ಕೂತಂಡ ಸುಬ್ಬಯ್ಯ ಅವರು ಜೂ.12ರಂದು 11 ಗಂಟೆ ವೇಳೆಗೆ ತಮ್ಮ ಪತ್ನಿ ಸಹಿತ ದಿನ ಬಳಕೆ ವಸ್ತುಗಳನ್ನು ತರಲು ಪಾಲಿಬೆಟ್ಟ ಪಟ್ಟಣಕ್ಕೆ ತೆರಳಿದ್ದರು. ಮಧ್ಯಾಹ್ನ 1 ಗಂಟೆಯ ವೇಳೆಗೆ ಮನೆಗೆ ಬಂದಾಗ ಮುಂಬಾಗಿಲು ತೆರೆದು ಕೊಂಡಿದ್ದು, ಮನೆಯ ಒಳ ಭಾಗದ ಲೆದರ್ ಬ್ಯಾಗ್‍ನಲ್ಲಿಟ್ಟಿದ್ದ 9ರಿಂದ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಕಳುವಾಗಿದ್ದವು. ಈ ಕುರಿತು ಕೂತಂಡ ಸುಬ್ಬಯ್ಯ ಅವರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣದ ಗಂಭೀರತೆಯನ್ನು ಅರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಮಲ್ಚೀರ ಅಯ್ಯಪ್ಪ ಅವರು ಮಡಿಕೇರಿ ಡಿವೈಎಸ್‍ಪಿ, ಮಡಿಕೇರಿ ವೃತ್ತ ನಿರೀಕ್ಷಕರು, ಸಿದ್ದಾಪುರ ಠಾಣಾಧಿಕಾರಿ ಹಾಗೂ ಡಿಸಿಐಬಿ ವೃತ್ತ ನಿರೀಕ್ಷಕರ ಒಂದು ತಂಡ ರಚಿಸಿ ತನಿಖೆ ನಡೆಸಲು ಸೂಚಿಸಿದ್ದರು. 

ಆರೋಪಿಗಳ ಮಾಹಿತಿ ಪತ್ತೆ ಹಚ್ಚಲು ಕೆಲವು ಸಿ.ಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸ್ ತನಿಖಾ ತಂಡ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

::: ತೋಟದ ಮಾಲಕರೇ ಎಚ್ಚರ :::

ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚಾಗಿ ಅಪರಾಧ ಪ್ರಕರಣಗಳು ನಡೆಯುತ್ತಿದ್ದು, ಹೊರ ರಾಜ್ಯದ ಕೂಲಿ ಕಾರ್ಮಿಕರೇ ಹೆಚ್ಚಾಗಿ ಭಾಗಿಯಾಗುತ್ತಿರುವುದು ಕಂಡು ಬರುತ್ತಿದೆ. ಹೊರ ರಾಜ್ಯದ ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಸಂದರ್ಭ ತೋಟದ ಮಾಲೀಕರು ಕಡ್ಡಾಯವಾಗಿ ಕಾರ್ಮಿಕರ ಅಪರಾಧ ಹಿನ್ನೆಲೆಯನ್ನು ಪರಿಶೀಲಿಸಿಕೊಂಡು ಅವರಿಂದ ನೈಜ ದಾಖಲೆಗಳನ್ನು ಪರಿಶೀಲಿಸಿ ಕೆಲಸಕ್ಕೆ ನೇಮಿಸಿಕೊಳ್ಳಬೇಕು. ಮಾತ್ರವಲ್ಲದೇ ಕಾರ್ಮಿಕರ ಇತ್ತೀಚಿನ ಭಾವಚಿತ್ರವನ್ನು ಹೊಂದಿಕೊಳ್ಳಬೇಕು ಹಾಗೂ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಕೆಲಸಕ್ಕೆ ನೇಮಿಸಿಕೊಂಡ ಕಾರ್ಮಿಕರ ಮಾಹಿತಿಯನ್ನು ನೀಡುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ. ಫೋಟೋ :: ಕ್ರೈಂ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News