ಬಳಸಿದ ಪತ್ರಿಕೆಯಿಂದ ಪರಿಸರ ಸ್ನೇಹಿ ಪೆನ್ಸಿಲ್ ತಯಾರಿಸುವ ಪ್ರಾಧ್ಯಾಪಕಿ!

Update: 2022-06-25 04:33 GMT
(ಫೋಟೊ: times of india)

ಧಾರವಾಡ: ಬಳಸಿದ ವೃತ್ತಪತ್ರಿಕೆಯಿಂದ ಪೆನ್ಸಿಲ್ ತಯಾರಿಸುವ ಮೂಲಕ ಇಲ್ಲಿನ ಎಸ್‍ಡಿಎಂ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನ ಪ್ರಾಧ್ಯಾಪಕಿ ಅಪರ್ಣಾ ಪೂಜಾರಿ ಪರಿಸರ ಸ್ನೇಹಿ ಉದ್ಯಮ ಆರಂಭಿಸಿದ್ದಾರೆ.

ಸುತ್ತಮುತ್ತಲಿನ ನಾಲ್ಕು ಮಂದಿಯನ್ನು ನೇಮಕ ಮಾಡಿಕೊಂಡು ಈ ವಿನೂತನ ಪರಿಸರ ಸ್ನೇಹಿ ಕ್ರಮಕ್ಕೆ ಮುಂದಾಗಿದ್ದಾರೆ. ಈ ಪರಿಸರ ಸ್ನೇಹಿ ಪೆನ್ಸಿಲ್, ಮಾರುಕಟ್ಟೆಯಲ್ಲಿ ಸಿಗುವ ಇತರ ಪೆನ್ಸಿಲ್‍ನಷ್ಟೇ ಬೆಲೆ ಹೊಂದಿದ್ದು, ಸಾಂಪ್ರದಾಯಿಕ ಪೆನ್ಸಿಲ್‍ಗೆ ಹೋಲಿಸಿದರೆ ತೂಕ ಕಡಿಮೆ. ಈ ಕಾಗದದ ಪೆನ್ಸಿಲ್‍ನ ಕೊನೆಯಲ್ಲಿ ತುಳಸಿ, ಟೊಮ್ಯಾಟೊ ಮುಂತಾದ ಬೀಜವನ್ನು ಅಳವಡಿಸಲಾಗಿದೆ. ಪೆನ್ಸಿಲ್ ಬಳಸಿದ ಬಳಿಕ ಹೂವಿನ ಚಟ್ಟಿಯಲ್ಲಿ ಇದನ್ನು ನೆಡುವ ಮೂಲಕ ಮತ್ತಷ್ಟು ಪರಿಸರ ಪ್ರೀತಿಗೆ ಇದು ನೆರವಾಗುತ್ತದೆ.

ಧಾರವಾಡದ ಕೆಲಗೇರಿಯಲ್ಲಿ ವಾಸಿಸುವ ಅಪರ್ಣಾ, ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಲ್ಲದೇ, ಸ್ಥಳೀಯವಾಗಿ ನಾಲ್ಕು ಮಂದಿಗೆ ಉದ್ಯೋಗ ನೀಡಿದ್ದಾರೆ. ಹಲವು ವರ್ಷಗಳ ಚಿಂತನೆಯ ಫಲ ಇದು ಎಂದು ಅವರು ಹೇಳುತ್ತಾರೆ. ತಂದೆ ರವೀಂದ್ರನಾಥ್, ಬಾಲ್ಯದಿಂದಲೂ ಪರಿಸರದ ಬಗ್ಗೆ ಯೋಚಿಸುವುದಕ್ಕೆ ಸ್ಫೂರ್ತಿ ಎಂದು ಅವರು ಸ್ಪಷ್ಟಪಡಿಸುತ್ತಾರೆ.

"ಎಂಬಿಎ ಪೂರ್ಣಗೊಳಿಸಿದ ಬಳಿಕ ನಾನು ಹೊಸ ಪರಿಕಲ್ಪನೆಯ ಶೋಧದಲ್ಲಿದ್ದೆ. 2020ರಲ್ಲಿ ಈ ಕಲ್ಪನೆ ಮನಸ್ಸಿಗೆ ಬಂದು ಎರಡು ಯಂತ್ರಗಳನ್ನು ಖರೀದಿಸಿದೆ. ಪತಿ ಸಂತೋಷ್ ಜತೆ ಇದನ್ನು ಹಂಚಿಕೊಂಡಾಗ ನೆರವು ನೀಡಿದರು. ನಾವು ಮೊದಲು ಸುಮಾರು 7000 ಪೆನ್ಸಿಲ್ ಉತ್ಪಾದಿಸಿ, ಈ ಪೈಕಿ 70% ಪೆನ್ಸಿಲ್‍ಗಳನ್ನು ಬಡಮಕ್ಕಳಿಗೆ ಉಚಿತವಾಗಿ ಹಂಚಿದೆವು. ಕೋವಿಡ್ ಲಾಕ್‍ಡೌನ್‍ನಿಂದಾಗಿ ಉತ್ಪಾದನೆ ನಿಂತಿತ್ತು. ಇದೀಗ 2022ರ ಫೆಬ್ರುವರಿ ಬಳಿಕ ಮತ್ತೆ ಉತ್ಪಾದನೆ ಆರಂಭಿಸಿದ್ದೇವೆ" ಎಂದು ವಿವರಿಸಿದರು.

ಸ್ನೇಹಿತರು ಮತ್ತು ಸಂಬಂಧಿಕರಿಂದ ಹಳೆಯ ಪತ್ರಿಕೆಗಳನ್ನು ಸಂಗ್ರಹಿಸಿ ಇದಕ್ಕೆ ಬಳಸುತ್ತಾರೆ. ನಮ್ಮ ಪರಿಸರ ಸ್ನೇಹಿ ಉಪಕ್ರಮವನ್ನು ಕಂಡು ಹಲವು ಮಂದಿ ಸಂಬಂಧಿಕರು, ಸ್ನೇಹಿತರು ಹಾಗೂ ನೆರೆಹೊರೆಯವರು ಸ್ವಯಂಪ್ರೇರಿತರಾಗಿ ಪತ್ರಿಕೆಗಳನ್ನು ನೀಡುತ್ತಿದ್ದಾರೆ. ಮುಂದೆ ದೊಡ್ಡ ಪ್ರಮಾಣದಲ್ಲಿ ಇದನ್ನು ಮಾಡಬೇಕಾದರೆ, ರದ್ದಿ ಪೇಪರ್ ಖರೀದಿಸಬೇಕಾಗುತ್ತದೆ. ನಾಲ್ವರು ಮಹಿಳೆಯರಿಗೆ ಈ ವಿಷಯದಲ್ಲಿ ತರಬೇತಿ ನೀಡಿ ಉದ್ಯೋಗ ಕೊಟ್ಟಿದ್ದೇನೆ. ನಮ್ಮದೇ ಘಟಕದಲ್ಲಿ ಅವರು ಪೆನ್ಸಿಲ್ ತಯಾರಿಸುತ್ತಾರೆ" ಎಂದು ಹೇಳಿದರು.

ದೇಶದಲ್ಲಿ ಪೆನ್ಸಿಲ್‍ಗಳನ್ನು ತಯಾರಿಸಲು ಪ್ರತಿ ವರ್ಷ ಒಂದು ಲಕ್ಷ ಮರಗಳನ್ನು ಕಡಿಯಬೇಕಾಗುತ್ತದೆ. ಈ ಪೆನ್ಸಿಲ್ ಬಳಸುವ ಮೂಲಕ ಅಷ್ಟು ಮರಗಳನ್ನು ಉಳಿಸಬಹುದು ಎನ್ನುವುದು ಅವರ ಲೆಕ್ಕಾಚಾರ ಎಂದು timesofindia.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News