ಅನ್ಯಪಕ್ಷ ಅಧಿಕಾರದಲ್ಲಿರುವುದು ಬಿಜೆಪಿಗೆ ಅಪಥ್ಯ: ಕುಮಾರಸ್ವಾಮಿ

Update: 2022-06-25 04:33 GMT

ಬೆಂಗಳೂರು: ಪಾಲಿಕೆಯಾಗಿದ್ದನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನಾಗಿ ನಾನು ಮಾಡಿದ್ದು ನಗರದ ಜನರಿಗೆ ಸ್ಥಳೀಯವಾಗಿ ಅತ್ಯುತ್ತಮ ಅಡಳಿತ, ಸೇವೆಗಳು ಲಭ್ಯವಾಗಲಿ ಎಂದು. ಆದರೆ, ಬಿಜೆಪಿ ಸರಕಾರವು ಬಿಬಿಎಂಪಿ ರಚನೆಯ ಮೂಲ ಆಶಯವನ್ನೇ ಬುಡಮೇಲು ಮಾಡಿ ರಾಜಕೀಯ ಸ್ವಾರ್ಥ ಸಾಧನೆಯ ಷಡ್ಯಂತ್ರ ನಡೆಸಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದಾರೆ. 

ಈ ಕುರಿತು ಶನಿವಾರ ಟ್ವೀಟ್ ಮಾಡಿರುವ ಅವರು,  ಬಿಜೆಪಿ ಅಧಿಕಾರ ಪಿಪಾಸು. ಅನ್ಯಪಕ್ಷ ಅಧಿಕಾರದಲ್ಲಿರುವುದು ಆ ಪಕ್ಷಕ್ಕೆ ಅಪಥ್ಯ. ತನ್ನ ಕೆಟ್ಟ ಆಡಳಿತಕ್ಕೆ ಬೇಸತ್ತು ಬೆಂಗಳೂರಿಗರು ಬೇರೆ ಪಕ್ಷಕ್ಕೆ ಎಲ್ಲಿ ಮತ ಹಾಕಿಬಿಟ್ಟಾರೋ ಎನ್ನುವ ಭೀತಿಯಿಂದ ಚುನಾವಣೆಯನ್ನೇ ನಡೆಸಲಿಲ್ಲ. ಕೋರ್ಟ್‌ ಚಾಟಿ ಬೀಸಿದ ಮೇಲೆ ಚುನಾವಣೆ ಎನ್ನುತ್ತಿರುವ ಸರಕಾರ, ಈಗ ವಾರ್ಡ್‌ ವಿಂಗಡಣೆಯ ನಾಟಕ ಅಡಿದೆ ಎಂದು ಕಿಡಿಗಾರಿದ್ದಾರೆ.

ʼಕೋರ್ಟ್‌ ಹೇಳಿದರಷ್ಟೇ ಕೆಲಸʼ ಎನ್ನುವ ಚಾಳಿ ಬಿಜೆಪಿ ಸರಕಾರದ್ದು. ನ್ಯಾಯಾಲಯದ ಅದೇಶವನ್ನೇ ಧಿಕ್ಕರಿಸಿ ನಡೆದ ಈ ನಿರ್ಲಜ್ಜ ಸರಕಾರಕ್ಕೆ ಜನಹಿತಕ್ಕಿಂತ ಪಕ್ಷಹಿತವೇ ಸರ್ವಸ್ವ. ವಾರ್ಡ್‌ ವಿಂಗಡಣೆ ಸ್ವರೂಪ ನೋಡಿದರೆ ಬಿಜೆಪಿಯ 'ಅಧಿಕಾರದ ವಿಕೃತಿ' ಯಾವ ಮಟ್ಟದಲ್ಲಿದೆ ಎನ್ನುವುದು ಅರ್ಥವಾಗುತ್ತದೆ ಎಂದು ಹೇಳಿದ್ದಾರೆ. 

ವಾರ್ಡ್ ವಿಂಗಡಣೆಯಲ್ಲಿ ಬೆಂಗಳೂರು ನಗರದ ಸಮಗ್ರತೆ, ಅನನ್ಯತೆಯನ್ನು ಕಡೆಗಣಿಸಲಾಗಿದೆ. ಬೆಂಗಳೂರು ಎಂದರೆ ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳು ಮಾತ್ರವಲ್ಲ. ಇದು ಕೇವಲ ಬಿಜೆಪಿಯಿಂದ, ಬಿಜೆಪಿ ಶಾಸಕರಿಗಾಗಿ, ಬಿಜೆಪಿಯೇ ಮಾಡಿಕೊಂಡ ಮರು ವಿಂಗಡಣೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News