ಚಕ್ರತೀರ್ಥ ಬಂಧನಕ್ಕೆ ಆಗ್ರಹ; ಜು.8ಕ್ಕೆ ಎಸ್.ಕೊಪ್ಪಲಿನಿಂದ ನಿಡಘಟ್ಟದ ಗಾಂಧಿಗುಡಿವರೆಗೆ ಕಾಲ್ನಡಿಗೆ ಜಾಥಾ

Update: 2022-06-25 12:31 GMT

ಚಿಕ್ಕಮಗಳೂರು, ಜೂ.25: ರಾಜ್ಯ ಸರಕಾರ ಪಠ್ಯ ಪುಸ್ತಕ ಪರಿಷ್ಕರಣೆಗಾಗಿ ನೇಮಿಸಿದ್ದ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರು ಶಾಲಾ ಮಕ್ಕಳ ಪಠ್ಯದ ವಿಷಯಗಳನ್ನು ತಿರುಚಿರುವುದಲ್ಲದೇ ಅಂಬೇಡ್ಕರ್, ಕುವೆಂಪು, ಬಸವಣ್ಣ ಸೇರಿದಂತೆ ನಾಡಿನ ಹೆಸರಾಂತ ಸಮಾಜ ಸುಧಾರಕರನ್ನು ಅವಮಾನಿಸಿರುವ ಹಿನ್ನೆಲೆಯಲ್ಲಿ ರೋಹಿತ್ ಚಕ್ರತೀರ್ಥ ಅವರನ್ನು ಬಂಧಿಸಿ ಅವರು ಪರಿಷ್ಕರಿಸಿರುವ ಪಠ್ಯವನ್ನು ಹಿಂಪಡೆಯಬೇಕು ಹಾಗೂ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಪರಿಷ್ಕರಿಸಿರುವ ಪಠ್ಯವನ್ನೇ ಮುಂದುವರಿಸಬೇಕೆಂದು ಆಗ್ರಹಿಸಿ ಜು.8ರಂದು ಜಿಲ್ಲೆಯಲ್ಲಿ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಸಮಾನ ಮನಸ್ಕ ಪ್ರಗತಿಪರ ಸಂಘಟನೆ ಮುಖಂಡರು ಚರ್ಚಿಸಿ ತೀರ್ಮಾನಿಸಿದ್ದಾರೆ ಎಂದು ಕ್ಯಾತನಬೀಡು ಪ್ರತಿಷ್ಠಾನದ ಸಂಚಾಲಕ ರವೀಶ್ ಕ್ಯಾತನಬೀಡು ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರಿಗೆ ಈ ಸಂಬಂಧ ಮಾಹಿತಿ ನೀಡಿದ ಅವರು, ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಜು.8ರಂದು ಚಿಕ್ಕಮಗಳೂರು ತಾಲೂಕಿನ ಎಸ್.ಕೊಪ್ಪಲು ಗ್ರಾಮದಲ್ಲಿರುವ ಬಸವೇಶ್ವರ ಪುತ್ಥಳಿ ಮುಂಭಾಗ ಚಾಲನೆ ನೀಡಲಾಗುವುದು. ಎಸ್.ಕೊಪ್ಪಲು ಗ್ರಾಮದಲ್ಲಿ ಆರಂಭವಾಗುವ ಜಾಥಾ ತಾಲೂಕಿನ ಕಬಳಿ, ನವಗ್ರಾಮ, ಚನ್ನಕೊಪ್ಪಲು ಮಾರ್ಗವಾಗಿ ಸಖರಾಯಪಟ್ಟಣ ಸಮೀಪದ ನಿಡಘಟ್ಟದಲ್ಲಿರುವ ಗಾಂಧಿಗುಂಡಿ ಮುಂಭಾಗದಲ್ಲಿ ಸಮಾವೇಶಗೊಳ್ಳಲಿದೆ. ನಂತರ ಗಾಂಧಿಗುಡಿ ಎದುರು ಸಮಾವೇಶ ನಡೆಯಲಿದ್ದು, ಈ ಸಮಾವೇಶದಲ್ಲಿ ಪಂಡಿತರಾಧ್ಯಾ ಶ್ರೀಗಳು, ಹೊಸದುರ್ಗದ ಈಶ್ವರಾನಂದ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಶಿಕ್ಷಣ ತಜ್ಞರಾದ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಶ್ರೀಪಾದ ಭಟ್, ಆರ್.ಜೆ.ನಾಗರಾಜ್, ಬಿ. ಚಂದ್ರೇಗೌಡ, ಮುಕುಂದ ರಾಜು, ಹೆಸರಾಂತ ಸಾಹಿತಿಗಳಾದ ಹಂಸಲೇಖ, ಕುಂ.ವೀರಭದ್ರಪ್ಪ, ತರೀಕೆರೆ ರೆಹಮತ್, ಚಿಂತಕರಾದ ಸಿದ್ದನನಗೌಡ ಪಾಟೀಲ್, ವೈಎಸ್‍ವಿ ದತ್ತ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ ಸಮಾನ ಮನಸ್ಕ ಪ್ರಗತಿಪರ ಸಂಘಟನೆಗಳ ಮುಖಂಡರು ಮತ್ತು ಜಿಲ್ಲೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ಸಮಾವೇಶದಲ್ಲಿ ತೆಗೆದುಕೊಳ್ಳುವ ನಿರ್ಣಯದ ಬಗ್ಗೆ ರಾಜ್ಯ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಚಿಕ್ಕಮಗಳೂರಿನಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದ ಅವರು, ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರು ಪುಸ್ತಕ ಪರಿಷ್ಕರಣೆ ನೆಪದಲ್ಲಿ ಪಠ್ಯದಲ್ಲಿದ್ದ ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ನಾಡಗೀತೆಯನ್ನು ತಿರುಚಿ ಅವಮಾನಿಸಿದ್ದಾರೆ. ಅಂಬೇಡ್ಕರ್ ಸಂವಿಧಾನ ಶಿಲ್ಪಿ ಅಲ್ಲ ಎಂಬಂತೆ ಪಠ್ಯ ತಿರುಚಿದ್ದಾರೆ. ಬಸವಣ್ಣನಂತಹ ಕ್ರಾಂತಿಕಾರಿ ಸಮಾಜ ಸುಧಾರಕರ ಬಗ್ಗೆಯೂ ಅವಹೇಳನಕಾರಿಯಾಗಿ ಪಠ್ಯ ತಿರುಚುವ ಮೂಲಕ ಅಪರಾಧ ಕೃತ್ಯ ಎಸಗಿದ್ದಾರೆ. ಆದ್ದರಿಂದ ರಾಜ್ಯ ಸರಕಾರ ಕೂಡಲೇ ರೋಹಿತ್ ಚಕ್ರತೀರ್ಥ ಅವರನ್ನು ಬಂಧಿಸಬೇಕು. ಅಲ್ಲದೇ ಅವರು ಪರಿಷ್ಕರಿಸಿರುವ ಪಠ್ಯವನ್ನು ರದ್ದು ಮಾಡಿ ಈ ಹಿಂದೆ ಬರಗೂರು ರಾಮಚಂದ್ರಪ್ಪ ಅವರು ಪರಿಷ್ಕರಿಸಿರುವ ಪಠ್ಯವನ್ನೇ ಮುಂದುವರಿಸಬೇಕು. ಈ ಉದ್ದೇಶದಿಂದ ಜಿಲ್ಲೆಯಲ್ಲಿ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.

ಜನಧನಿ ಸಂಘಟನೆಯ ಮುಖಂಡ ಬಿ.ಅಮ್ಜದ್ ಮಾತನಾಡಿ, ರೋಹಿತ್ ಚಕ್ರತೀರ್ಥ ಸಮಿತಿ ನೀಡಿರುವ ಪಠ್ಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ರೋಹಿತ್ ನೇತೃತ್ವದ ಸಮಿತಿ ಪರಿಷ್ಕರಿಸಿರುವ ಪಠ್ಯ ಕನ್ನಡ ನೆಲೆದ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡಿದ್ದು, ನಾಡಿನಲ್ಲಿ ಸಾಮರಸ್ಯವನ್ನು ಉಳಿಸುವ ನಿಟ್ಟಿನಲ್ಲಿ ಸರಕಾರ ಗಮನ ಸೆಳೆಯಬೇಕಿದೆ. ಈ ನಿಟ್ಟಿನಲ್ಲಿ ಸಮಾನ ಮನಸ್ಕರ ಪ್ರಗತಿಪರ ಸಂಘಟನೆಗಳು ಸೇರಿ ಜಿಲ್ಲೆಯಲ್ಲಿ ಕಾಲ್ನಡಿಗೆ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಣಯಿಸಲಾಗಿದೆ ಎಂದ ಅವರು, ಶಿಕ್ಷಣ ವ್ಯವಸ್ಥೆಯಲ್ಲಿ ಎಡ, ಬಲ ಎಂಬ ಸಿದ್ಧಾಂತಗಳಿಲ್ಲ. ಸತ್ಯ ಇತಿಹಾಸ, ಸತ್ಯ ಬೋಧನೆ ಸರಕಾರ ಸೇರಿದಂತೆ ಎಲ್ಲರ ಜವಬ್ದಾರಿಯಾಗಿದೆ ಎಂದರು.

ರೋಹಿತ್ ಚಕ್ರತೀರ್ಥ ಸಮಿತಿ ಇತಿಹಾಸವನ್ನು ತಿರುಚಿದೆ. ಸುಳ್ಳು ಇತಿಹಾಸವನ್ನು ಸೇರಿಸಿ ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಿದೆ. ಬಿಜೆಪಿ ಸರಕಾರ ಆರೆಸೆಸ್ ಸಿದ್ಧಾಂತವನ್ನು ಪಠ್ಯದ ಮೂಲಕ ಮಕ್ಕಳ ಮೇಲೆ ಹೇರುವ ಹುನ್ನಾರ ಮಾಡಿದೆ. ಇಂತಹ ಪಠ್ಯದಿಂದ ಮಕ್ಕಳ ಭವಿಷ್ಯ ಅತಂತ್ರವಾಗಲಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಣೆಯ ಪಠ್ಯವನ್ನು ರಾಜ್ಯ ಸರಕಾರ ಕೂಡಲೇ ಹಿಂಪಡೆಯಬೇಕು. ಬರಗೂರು ರಾಮಚಂದ್ರಪ್ಪ ಸಮತಿಯ ಪಠ್ಯವನ್ನು ಮುಂದುವರಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್, ರೈತ ಸಂಘದ ಮುಖಂಡ ಗುರುಶಾಂತಪ್ಪ, ಜೆಡಿಎಸ್ ಮುಖಂಡ ಹುಣಸೆಮಕ್ಕಿ ಲಕ್ಷ್ಮಣ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರಾದ ಕೂದುವಳ್ಳಿ ಮಂಜುನಾಥ, ಮರ್ಲೆ ಅಣ್ಣಯ್ಯ ಮತ್ತಿತರರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News