ಜವಳಿ ಪಾರ್ಕ್ ನಿರ್ಮಾಣಕ್ಕೆ 1500 ಎಕರೆ ಜಮೀನು ಜವಳಿ ಇಲಾಖೆಗೆ ವರ್ಗಾವಣೆ: ಮುರುಗೇಶ್ ನಿರಾಣಿ

Update: 2022-06-25 15:59 GMT

ಕಲಬುರಗಿ, ಜೂ.25: ಜಿಲ್ಲೆಯ ಹೊನ್ನಕಿರಣಗಿ ಬಳಿ ಸೋಲಾರ್ ಪಾರ್ಕ್‍ಗೆ ಮಂಜೂರಾಗಿದ್ದ 1500 ಎಕರೆ ಜಮೀನು ಉದ್ದೇಶಿತ ಮೆಗಾ ಜವಳಿ ಪಾರ್ಕ್ ನಿರ್ಮಾಣಕ್ಕಾಗಿ ಕರ್ನಾಟಕ ಪವರ್ ಕಾರ್ಪೋರೇಷನ್ ಸಂಸ್ಥೆಯಿಂದ ಜವಳಿ ಇಲಾಖೆಯ ಹೆಸರಿಗೆ ವರ್ಗಾಯಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

ಶನಿವಾರ ನಗರದ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಯಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ಈಗಾಗಲೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ರಾಯಚೂರು, ಕಲಬುರಗಿ, ಬಳ್ಳಾರಿ, ಯಾದಗಿರಿಯಲ್ಲಿ ಹೆಚ್ಚಿನ ಹತ್ತಿ ಬೆಳೆಯಲಾಗುತ್ತಿರುವುದರಿಂದ ಜವಳಿ ಪಾರ್ಕ್ ನಿರ್ಮಾಣಕ್ಕೆ ನಮ್ಮ ಮೊದಲ ಆದ್ಯತೆ ಕಲಬುರಗಿ ಆಗಲಿದೆ ಎಂದರು.

ಜವಳಿ ಉದ್ಯಮಕ್ಕೆ ಹೆಚ್ಚಿನ ಕಾರ್ಮಿಕರ ಅವಶ್ಯಕತೆವಿರುತ್ತದೆ. ಪ್ರತಿನಿತ್ಯ ಕಾರ್ಮಿಕರ ಓಡಾಟ ಇರುವ ಕಾರಣ ಮತ್ತು ಯೋಜನೆಗೆ ಪೂರಕವಾದ ಜಮೀನು ಪ್ರಸ್ತುತ ಬೇರೆಡೆ ಲಭ್ಯವಿಲ್ಲದ ಕಾರಣ ಉತ್ತಮ ರಸ್ತೆ ಸಂಪರ್ಕ ಹೊಂದಿರುವ ಸೋಲಾರ್ ಪಾರ್ಕ್‍ಗೆ ಮೀಸಲಾದ ಹೊನ್ನಕಿರಣಗಿ ಜಮೀನನ್ನು ಪಡೆಯಲಾಗಿದೆ. ಸೋಲಾರ್ ಪಾರ್ಕ್‍ಗೆ ಪ್ರತ್ಯೇಕ ಜಮೀನು ನೀಡಲಾಗುವುದು ಎಂದು ಅವರು ಹೇಳಿದರು.

ಕೇಂದ್ರ ಸರಕಾರದಿಂದ ಜವಳಿ ಪಾರ್ಕ್ ಕಲಬುರಗಿಗೆ ಮಂಜೂರಾದಲ್ಲಿ 1000 ಕೋಟಿ ರೂ.ಅನುದಾನ ಹರಿದು ಬರಲಿದೆ. ಜೊತೆಗೆ 25 ಸಾವಿರ ಉದ್ಯೋಗ ಸೃಷ್ಠಿಯಾಗಲಿದೆ. ಡಾ.ಸರೋಜಿನಿ ಮಹಿಷಿ ವರದಿಯಂತೆ ಶೇ.75ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡಲಾಗುತ್ತದೆ. 1000 ಕೋಟಿ ರೂ.ಅನುದಾನದಿಂದ 500 ಎಕರೆಯಲ್ಲಿ ರಸ್ತೆ, ಚರಂಡಿ ನಿರ್ಮಿಸಿ ಉಳಿದ 1000 ಎಕರೆ ಪ್ರದೇಶವನ್ನು ಸಂಪೂರ್ಣವಾಗಿ ಟೆಕ್ಸ್‍ಟೈಲ್ ಪಾರ್ಕ್ ನಿರ್ಮಾಣಕ್ಕೆ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ಅವರು ವಿವರಿಸಿದರು.

ದೇಶದಲ್ಲಿ ಜವಳಿ ಉದ್ಯಮಕ್ಕೆ ಹೆಚ್ಚಿನ ರಿಯಾಯಿತಿ ನೀಡುತ್ತಿರುವ ರಾಜ್ಯ ನಮ್ಮದಾಗಿದೆ. ಸ್ಟ್ಯಾಂಪ್ ಡ್ಯೂಟಿ ವಿನಾಯಿತಿ ನೀಡಲಾಗಿದೆ. ವಿದ್ಯುತ್ ಬಿಲ್ಲಿನಲ್ಲಿ ಪ್ರತಿ ಯೂನಿಟ್‍ಗೆ 2 ರೂ.ಸಬ್ಸಿಡಿ ಜೊತೆಗೆ ಕಾರ್ಮಿಕರಿಗೆ ವೇತನದ ಹೊರತಾಗಿ ಪ್ರತಿ ತಿಂಗಳು 3000 ರೂ. ಹೆಚ್ಚುವರಿ ಸಬ್ಸಿಡಿ ಹಣ ನೀಡಲಾಗುತ್ತದೆ. ಇದಲ್ಲದೆ ಉದ್ಯಮ ಸ್ಥಾಪಿಸಲು ಉದ್ಯಮಿಗಳು ಟರ್ಮ್ ಲೋನ್ ಪಡೆದಲ್ಲಿ ಶೇ.6ರಷ್ಟು ಬಡ್ಡಿ ಸಬ್ಸಿಡಿ ಸಹ ನೀಡುವ ಯೋಜನೆ ಹೊಂದಿದ್ದೇವೆ ಎಂದು ಮುರುಗೇಶ್ ನಿರಾಣಿ ಹೇಳಿದರು.

ಕೆ.ಕೆ.ಆರ್.ಡಿ.ಬಿ. ಅನುದಾನದಲ್ಲಿ ಆರೋಗ್ಯ, ಕೃಷಿ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. 2021-22ನೇ ಸಾಲಿನ ಮ್ಯಾಕ್ರೋ ಅನುದಾನದಡಿ ಕೈಗೆತ್ತಿಕೊಂಡು ಇದೂವರೆಗೆ ಆರಂಭವಾಗದ ಕಾಮಗಾರಿಗಳನ್ನು ಪುನರ್ ಅವಲೋಕಿಸಿ ಎಲ್ಲ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗುವುದು. ಎಸೆಸೆಲ್ಸಿ, ಪಿ.ಯು.ಸಿ. ಫಲಿತಾಂಶ ಸುಧಾರಣೆಗೆ ಡಿ.ಸಿ., ಸಿ.ಇ.ಓ, ಡಿ.ಡಿ.ಪಿ.ಐ ನೇತೃತ್ವದಲ್ಲಿ ಸಮಿತಿ ರಚಿಸಿ ಅಗ್ರ ರ್ಯಾಂಕ್ ಪಡೆದಿರುವ ಜಿಲ್ಲೆಯಲ್ಲಿ ಅನುಸರಿಸಿದ ನೀತಿ ಅಧ್ಯಯನ ಮಾಡಿ ಜಿಲ್ಲೆಯಲ್ಲಿಯೂ ಅನುಷ್ಠಾನಕ್ಕೆ ತರಲು ಮತ್ತು ಇಸ್ರೇಲ್ ಮಾದರಿ ಕೃಷಿ ಪದ್ಧತಿ ಅಳವಡಿಸಿ ರೈತರ ಆದಾಯ ದ್ವಿಗುಣಗೊಳಿಸಲು ಅಧಿಕಾರಿಗಳಿಗೆ ಇಂದಿನ ಸಭೆಯಲ್ಲಿ ಸೂಚಿಸಿದ್ದೇನೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸದ ಡಾ.ಉಮೇಶ್ ಜಾಧವ್, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ, ಶಾಸಕರಾದ ಸುಭಾಷ್ ಗುತ್ತೇದಾರ, ಬಸವರಾಜ ಮತ್ತಿಮೂಡ, ಡಾ.ಅವಿನಾಶ್ ಜಾಧವ್, ವಿಧಾನಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಜಿಲ್ಲಾಧಿಕಾರಿ ಯಶವಂತ ವಿ.ಗುರುಕರ್, ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ ರದ್ದೆವಾಡಗಿ, ನಗರ ಅಧ್ಯಕ್ಷ ಸಿದ್ಧಾಜಿ ಪಾಟೀಲ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News