ಇಬ್ಬರು ದಲಿತರಿಗೆ ಸೆಗಣಿ ತಿನ್ನಿಸಲು ಯತ್ನಿಸಿ ಹಲ್ಲೆ: ಐವರ ವಿರುದ್ಧ ಪ್ರಕರಣ ದಾಖಲು

Update: 2022-06-25 17:24 GMT

ಗದಗ, ಜೂ. 25: ಇಬ್ಬರು ದಲಿತರಿಗೆ ಮೇಲ್ಜಾತಿಗೆ ಸೇರಿದ ಗುಂಪೊಂದು ಸೆಗಣಿ ತಿನ್ನಿಸಲು ಯತ್ನಿಸಿರುವ ಘಟನೆ ಗದಗ ಜಿಲ್ಲೆಯ ಮೆಣಸಗಿ ಸಮೀಪದ ಬಸ್ ನಿಲ್ದಾಣದ ಬಳಿ ನಡೆದಿರುವುದಾಗಿ ವರದಿಯಾಗಿದೆ. ಈ ಅಮಾನವೀಯ ಘಟನೆಯು ಕೆಲ ದಿನಗಳ ಹಿಂದೆ ನಡೆದಿರುವುದಾಗಿ ತಿಳಿದುಬಂದಿದೆ.

ಪರಿಶಿಷ್ಟ ಜಾತಿಗೆ ಸೇರಿದ ಪುಂಡಲೀಕಪ್ಪ ಬಸಪ್ಪ ಮಾದರ ಎಂಬಾತ ತನ್ನ ಸ್ನೇಹಿತರೊಂದಿಗೆ ಮೆಣಸಗಿ ಬಸ್ ನಿಲ್ದಾಣದ ಬಳಿ ನಿಂತಿದ್ದಾಗ ಅಲ್ಲಿಗೆ ಬಂದ ಮೇಲ್ಜಾತಿಗೆ ಸೇರಿದ ಗುಂಪೊಂದು ಅವಾಚ್ಯ ಶಬ್ದಗಳಿಂದ ನಿಂದಿಸಿದೆ. ಬಳಿಕ ಇದು ಜಗಳಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಈ ವೇಳೆ ರಾಜು ಬಾದಾಮಿ ಎಂಬಾತ ಸೆಗಣಿ ಹಿಡಿದುಕೊಂಡು ಬಂದು ಪುಂಡಲೀಕಪ್ಪ ಅವರ ಬಾಯಿಗೆ ತುರುಕಿಸಲು ಪ್ರಯತ್ನಿಸಿದ್ದಾನೆ. ಅದಲ್ಲದೇ, ಗುಂಪಿನಲ್ಲಿದ್ದ ಇತರರು ಮೂವರ ಅಂಗಿ ಬಿಚ್ಚಿಸಿ ಅವಮಾನ ಮಾಡಿದ್ದಾರೆ. ಜತೆಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಮೆಣಸಗಿನಲ್ಲಿ ಘಟನೆಗೆ ಸಂಬಂಧಿಸಿದಂತೆ ರೋಣ ಪೊಲೀಸ್ ಠಾಣೆಯಲ್ಲಿ 5 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿದೂರು: ಆರೋಪಿಗಳು ದೂರುದಾರರ ವಿರುದ್ಧ ದೂರು ನೀಡಿದ್ದು, ಈ ಸಂಬಂಧ ರೋಣ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News