ಕೂಲಿಕಾರರಿಗಾದ ಬಲುದೊಡ್ಡ ಅನ್ಯಾಯ

Update: 2022-06-26 03:30 GMT

ಮಾನ್ಯರೇ,

ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ನಿರ್ವಹಿಸಲು ಅಕುಶಲ ಕೂಲಿಕಾರರಿಗೆ ದಿನಗೂಲಿಯ ಜೊತೆಗೆ ಸಲಕರಣೆ ಹರಿತಗೊಳಿಸಲು ಪಾವತಿಸಲಾಗುತ್ತಿದ್ದ ರೂ. ೧೦ನ್ನು ರದ್ದುಗೊಳಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿಯ ಆಯುಕ್ತಾಲಯದಿಂದ ೧೫.೬.೨೨ರಂದು ಹೊರಟಿರುವ ಆದೇಶ ಕೂಲಿಕಾರರನ್ನು ಅಘಾತಕ್ಕೀಡುಮಾಡಿದೆ. ಕೊರೋನ ಕಾಲ ಬಂದಾಗಿನಿಂದ ಕೂಲಿಕಾರರ ಆರ್ಥಿಕ ಪರಿಸ್ಥಿತಿಯು ಏನಾಗಿದೆ ಎಂದು ಮತ್ತು ಆಗಿನಿಂದಲೂ ನರೇಗಾ ಉದ್ಯೋಗ ಖಾತರಿಯೇ ಕೂಲಿಕಾರ ಕುಟುಂಬಗಳನ್ನು ಎದ್ದು ನಿಲ್ಲಿಸಿರುವುದೆಂದು ಯಾರಿಗೂ ತಿಳಿಯದಿರುವ ವಿಷಯವಲ್ಲ. ಯಾವಾಗ ಕೂಲಿ ಕೆಲಸ ಸಿಗುವುದೋ ಎಂದು ಎಲ್ಲೆಡೆ ಕೂಲಿಕಾರರು ದಾರಿ ಕಾಯುವಂತಾಗಿದೆ.

ನೌಕರಿ ಖಾತ್ರಿ ಆಗಿರುವ ಪಂಚಾಯತ್ ಅಧಿಕಾರಿಗಳು ಕೆಲಸ ಕೊಡಲು ಈ ಬಡ ಕೂಲಿಕಾರರಿಗೆ ಸತಾಯಿಸುತ್ತಾರೆ. ಆದರೂ ಕೇಳಿದಾಗ ಜನರಿಗೆ ಕೂಲಿ ಕೆಲಸ ಸಿಗುವುದಿಲ್ಲ, ಕೆಲಸ ಕೊಡದ್ದಕ್ಕೆ ನಿರುದ್ಯೋಗ ಭತ್ತೆಯೂ ಇಲ್ಲ. ಕೆಲಸ ಸಿಕ್ಕರೂ ಕೂಲಿ ಸಿಗುವುದರಲ್ಲಿ ವಿಳಂಬ, ವಿಳಂಬ ಕೂಲಿಗೆ ದಂಡವೂ ಇಲ್ಲ. ಇಷ್ಟಾದರೂ ಜನರು ಪಂಚಾಯತ್‌ನಲ್ಲಿ ಸಿಗುವ ಕೆಲಸವನ್ನೇ ನಂಬಿದ್ದಾರೆ. ಮತ್ತೆ ಮತ್ತೆ ಅರ್ಜಿಯನ್ನು ಕೊಡುತ್ತಿದ್ದಾರೆ. ಪಂಚಾಯತ್‌ನ ಸಲಕರಣೆಗಳನ್ನು ಕೊಡದೆ ಇದ್ದರೂ ತಮ್ಮದೇ ಗುದ್ದಲಿ, ಸಲಿಕೆ, ಬುಟ್ಟಿಗಳನ್ನು ಹಿಡಿದು ಕೆಲಸಕ್ಕೆ ಹೊರಡುತ್ತಿದ್ದಾರೆ.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿಯಲ್ಲಿ ಜನರು ಮಾಡುವ ಕೆಲಸದ ಕೂಲಿ ಮತ್ತು ಬಳಸುವ ಸಲಕರಣೆಯ ವೆಚ್ಚವು ೬೦:೪೦ ಇರಬೇಕೆಂದು ಕಾರ್ಯಾಚರಣೆ ಮಾರ್ಗ ಸೂಚಿಯು ಹೇಳುತ್ತದೆ. ಯಂತ್ರಗಳನ್ನು ಬಳಸಬಾರದು ಎಂದು ಮಾರ್ಗಸೂಚಿ ಹೇಳಿದ್ದರೂ ಜೆಸಿಬಿ ಮುಂತಾದ ಯಂತ್ರಗಳನ್ನು ಬಳಸಿ ಕೆಲಸ ಮಾಡಿಸುವ ಗುತ್ತಿಗೆದಾರರು ಸಲಕರಣಾ ವೆಚ್ಚವನ್ನೇ ಹೆಚ್ಚಿಸಲು ಕೆಲವು ವರ್ಷಗಳ ಹಿಂದೆ ತಂತ್ರ ಹೆಣೆದರು. ಆದರೆ ಬಲವಾದ ಪ್ರತಿರೋಧ ಬಂದಿದ್ದರಿಂದ ಅದು ಸಾಧ್ಯವಾಗಲಿಲ್ಲ. ಕಾನೂನು ಜಾರಿ ಆದಾಗಿನಿಂದಲೂ ಕೂಲಿಕಾರರು ತಮ್ಮದೇ ಸಲಕರಣೆಗಳನ್ನು ಹೊತ್ತೊಯ್ಯುತ್ತಾರೆ. ಆ ಕಾರಣಕ್ಕಾಗಿ ಸಲಕರಣೆಗಳನ್ನು ಹರಿತಗೊಳಿಸಲು ‘ನರೇಗಾ ಕಾರ್ಯಾಚರಣೆ ಮಾರ್ಗಸೂಚಿ ೨೦೧೩ ಪ್ಯಾರಾ ೭.೪೨ರಲ್ಲಿನ ಉಪಬಂಧದಲ್ಲಿ ಕೂಲಿಕಾರರಿಗೆ ದಿನದ ಕೂಲಿಯೊಂದಿಗೆ ರೂ. ೧೦ನ್ನು ಕೊಡಲಾಗುತ್ತಿತ್ತು. ೧೦೦ ದಿನ ಕೆಲಸ ಮಾಡಿದರೆ ಸಿಗುವ ರೂ. ೧,೦೦೦ ಸಲಕರಣೆಗಳನ್ನು ಹರಿತಗೊಳಿಸಲು ಸರಿಯಾಗುತ್ತಿತ್ತು. ಬಡಜನಕ್ಕೆ ಸಿಗುತ್ತಿದ್ದ ರೂ. ೧,೦೦೦ದ ಮೇಲೂ ಮೇಲಧಿಕಾರಿಗಳ ವಕ್ರ ದೃಷ್ಟಿ ಬಿತ್ತೇ? ಯಾವುದೇ ಕಾರಣವನ್ನೂ ಕೊಡದೆ, ಸಲಕರಣೆ ವೆಚ್ಚದಿಂದ ಕೊಡುವ ಈ ಹಣವನ್ನು ರದ್ದುಗೊಳಿಸಿ ಸರಕಾರವು ಕೂಲಿಕಾರರಿಗೆ ಬಲುದೊಡ್ಡ ಅನ್ಯಾಯವೆಸಗಿದೆ. ಈ ಆದೇಶವನ್ನು ಮಾನವೀಯ ದೃಷ್ಟಿಯಿಂದ ಕೂಡಲೇ ಹಿಂಪಡೆಯಬೇಕು.

-ಶಾರದಾ ಗೋಪಾಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News