ಟೀಸ್ಟಾ ಸೆಟಲ್ವಾಡ್, ನಿವೃತ್ತ ಡಿಜಿಪಿ ಶ್ರೀಕುಮಾರ್ ಬಂಧನ ಖಂಡಿಸಿ ಕಲಬುರಗಿಯಲ್ಲಿ ಪ್ರತಿಭಟನೆ

Update: 2022-06-26 08:04 GMT

ಕಲಬುರಗಿ, ಜೂ.26: ನಾಗರಿಕ ಹಕ್ಕುಗಳ ಹೋರಾಟಗಾರ್ತಿ, ಸಾಮಾಜಿಕ ಕಾರ್ಯಕರ್ತೆ ಟೀಸ್ಟಾ ಸೆಟಲ್ವಾಡ್ ಹಾಗೂ  ನಿವೃತ್ತ ಡಿಜಿಪಿ ಶ್ರೀಕುಮಾರ್ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಸಮಾನ ಮನಸ್ಕ ಸಂಘಟನೆಗಳು ರವಿವಾರ ನಗರದ ಜಗತ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಬಂಧಿತರನ್ನು ಕೂಡಲೇ ಕೂಡಲೇ ಬಿಡುಗಡೆ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

2002ರಲ್ಲಿ ಗುಜರಾತ್ ನಲ್ಲಿ ನಡೆದ ನರಮೇಧದಲ್ಲಿ ಆಗಿನ ಸರಕಾರದ ಪಾತ್ರ - ಇದ್ದುದನ್ನು ಸತತವಾಗಿ ಬಹಿರಂಗಪಡಿಸುತ್ತಲೇ ಇರುವ, ನ್ಯಾಯಾಲಯದ ಮೂಲಕ ಪ್ರಶ್ನಿಸುತ್ತಲೇ ಇರುವ ಟೀಸ್ಟಾ ವಿರುದ್ಧ ಫ್ಯಾಶಿಸ್ಟ್ ಸರಕಾರ ನಡೆಸಿರುವ ದಾಳಿ ಅತ್ಯಂತ ಹೇಯವಾದ ಕೃತ್ಯ ಎಂದು ಹೋರಾಟಗಾರ್ತಿ ಕೆ.ನೀಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವದ ಶಕ್ತಿ ಮತ್ತು ಸೌಂದರ್ಯವೆಂದರೆ ಪ್ರಶ್ನೆ ಮಾಡುವುದು. ಭಿನ್ನಾಭಿಪ್ರಾಯ ಹೊಂದುವುದು. ಆದರೆ ಈಗಿನ ಬಿಜೆಪಿ ಸರಕಾರ ದ್ವೇಷದ, ಸೇಡಿನ ರಾಜಕೀಯವನ್ನು ದೇಶದ ತುಂಬೆಲ್ಲ ಹರಡಿಸುತ್ತಿದೆ. ಅದನ್ನು ಜನಮಾನಸದಲ್ಲಿ ಕಸಿ ಮಾಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಹೇಳಿದರು.

ಅಖಿಲ ಭಾರತೀಯ ಜನವಾದಿ ಮಹಿಳಾ ಸಂಘಟನೆ ರಾಜ್ಯ ಸದಸ್ಯರಾದ ಕೆ.ಎಸ್ ವಿಮ್ಲಾ ಮಾತನಾಡಿ, ಜನಪರವಾಗಿ ಕೆಲಸ ಮಾಡುತ್ತಿರುವ, ಪ್ರಜಾಪ್ರಭುತ್ವವನ್ನು ಬಲಗೊಳಿಸಲು ಶ್ರಮಿಸುತ್ತಿರುವ ಅನೇಕ ಹೋರಾಟಗಾರರನ್ನು ಸುಳ್ಳು ಪ್ರಕರಣಗಳ ಹೆಸರಿನಲ್ಲಿ ಬಂಧಿಸುತ್ತಿರುವ ಬೆಜೆಪಿ ಸರಕಾರ ಭಾರತದಲ್ಲಿ ಪ್ರಜಾಪ್ರಭುತ್ನವನ್ನು ನಾಶಗೊಳಿಸುತ್ತಿದೆ. ಭಾರತ ಸರಕಾರದ ಕಾರ್ಯವೈಖರಿಯಿಂದಾಗಿ ಅಂತಾರಾಷ್ಟೀಯ ವೇದಿಕೆಗಳಲ್ಲಿ ಭಾರತದ ಹೆಸರಿಗೆ ಮಸಿ ಬಳಿಯಲಾಗುತ್ತಿದೆ ಎಂದರು.

 ಭಾರತದ ಎಲ್ಲೇ ಆದರೂ ಪ್ರಜಾಪ್ರಭುತ್ವಕ್ಕೆ ಧಕ್ಕೆ ಆದಾಗ ಅದರ ಪರವಾಗಿ ದಣಿವರಿಯದೆ ಹೋರಾಟ ಮಾಡುವವರು ಟೀಸ್ಟಾ. ತಮ್ಮ ಜನಪರ ಕೆಲಸಗಳಿಗಾಗಿ ಪದ್ಮಶ್ರೀ ಪ್ರಶಸ್ತಿ, ಪಿಯುಸಿಲ್ ಜರ್ನಲಿಸಂ ಪ್ರಶಸ್ತಿ, ಚಮೇಲಿದೇವಿ ಪತ್ರಿಕೋದ್ಯಮ ಪ್ರಶಸ್ತಿ, ರಾಜೀವ್ಗಾಂಧಿ ಸದ್ಭಾವನಾ ಪ್ರಶಸ್ತಿ, ನಾನಿ ಪಾಳ್ಟೀವಾಲ ಪ್ರಶಸ್ತಿ ಅಂತಾರಾಷ್ಟ್ರೀಯ ಪ್ಯಾಕ್ಸ್ ಕ್ರಿಸ್ಪಿ ಶಾಂತಿ ಪ್ರಶಸ್ತಿ, ಪ್ರಜಾಪ್ರಭುತ್ವದ ಸಮರ್ಥಕಿ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಅವರಿಗೆ ಸಂದಿವೆ ಎಂದು ಪತ್ರಕರ್ತೆ ಎಸ್. ಸತ್ಯಾ ಈ ಸಂದರ್ಭದಲ್ಲಿ ಅವರ ಕಾರ್ಯಗಳನ್ನು ನೆನಪಿಸಿದರು.

ಇಂತಹ ಹೋರಾಟರರ ಮೇಲೆ ಬಿಜೆಪಿಸ ಸೇಡಿನ ರಾಜಕಾರಣ ನಡೆಸುತ್ತಿರುವುದಕ್ಕೆ ಅವರ ಬಂಧನವೆ ಸಾಕ್ಷಿ. ಕೂಡಲೇ ಅವರನ್ನು ಬಿಡುಗಡೆ ಮಾಡುವ ಮೂಲಕ ಸರಕಾರ ಬದ್ಧತೆ ಪ್ರದರ್ಶಿಸಬೇಕೆಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಪ್ರಭುಖಾನಾಪುರೆ, ಅರ್ಜುನ್ ಭದ್ರೆ, ಪಾಂಡುರಂಗ ಮಾವಿನಕರ್, ರೇವಣಸಿದ್ದ, ಸಿದ್ದು ಹರವಾರ್ ಸೇರಿದಂಥೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News