ಪ್ರತ್ಯೇಕ ರಾಜ್ಯದ ಬೇಡಿಕೆ ಮೂರ್ಖತನದ್ದು: ಬಸವರಾಜ ಹೊರಟ್ಟಿ

Update: 2022-06-26 13:30 GMT

ಹುಬ್ಬಳ್ಳಿ, ಜೂ. 26: ‘ಅಖಂಡ ಕರ್ನಾಟಕದಲ್ಲಿ ಪ್ರತ್ಯೇಕ ರಾಜ್ಯವನ್ನು ಕೇಳುವುದು ಮೂರ್ಖತನ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಸೇರಿದಂತೆ ನಮ್ಮ ನಾಡು ಅಖಂಡವಾಗಿಯೇ ಉಳಿಯಬೇಕು' ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಇಂದಿಲ್ಲಿ ಪ್ರತಿಪಾದಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪ್ರತ್ಯೇಕ ರಾಜ್ಯ ಕೇಳುವುದು ಮೂರ್ಖತನದ ಮಾತು. ಕರ್ನಾಟಕ ಏಕೀಕರಣದಲ್ಲಿ ನಡೆದ ಹೋರಾಟವನ್ನು ನೆನಪಿಸಿಕೊಳ್ಳಲಿ. ಇಂತಹ ಒಡಕಿನ ಹೇಳಿಕೆಗಳನ್ನು ಯಾರು ಖಂಡಿಸುತ್ತಾರೋ, ಇಲ್ವೋ ಗೊತ್ತಿಲ್ಲ. ನಾನು ಬಿಜೆಪಿ ಪಕ್ಷದವನಾಗಿ ಹೇಳುತ್ತಿದ್ದೇನೆ, ಸಚಿವ ಉಮೇಶ್ ಕತ್ತಿ ಹೇಳಿಕೆ ಸರಿಯಲ್ಲ' ಎಂದು ಆಕ್ಷೇಪಿಸಿದರು.

‘ಕರ್ನಾಟಕ ಏಕೀಕರಣ ಹೋರಾಟದ ಉದ್ದೇಶ ಸಹಬಾಳ್ವೆ. ಆ ಉದ್ದೇಶವನ್ನೇ ಮರೆತು ಮಾತನಾಡುವುದು ಅಕ್ಷಮ್ಯ. ಸಚಿವ ಉಮೇಶ್ ಕತ್ತಿ 2009ರಲ್ಲಿ ಹೀಗೆಯೇ ಹೇಳಿದ್ದರು. ನನ್ನ ಮಗ ಮುಖ್ಯಮಂತ್ರಿ ಆಗುತ್ತಾನೆ ಎಂದು ಹೇಳಿದ್ದರು. ಅದನ್ನು ಬಿಟ್ಟು ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ. ಪ್ರಾದೇಶಿಕ ಅಸಮಾನತೆ ಸರಿಪಡಿಸಲು ಸರಕಾರಕ್ಕೆ ಒತ್ತಾಯ ಮಾಡಬೇಕು. ಅದು ಬಿಟ್ಟು ರಾಜ್ಯವನ್ನೇ ಪ್ರತ್ಯೇಕ ಮಾಡುವುದು ಸಲ್ಲ' ಎಂದು ಅವರು ಟೀಕಿಸಿದರು.

ಗೊಂದಲ ಸರಿಯಲ್ಲ: ‘ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಗೊಂದಲ ಉಂಟಾಗಿ ವಿಳಂಬವಾಗಿದೆ. ಈ ಕುರಿತು ಶಿಕ್ಷಣ ಸಚಿವರ ಜೊತೆ ಮಾತನಾಡುತ್ತೇನೆ. ಪಠ್ಯ ವಿಚಾರದಲ್ಲಿ ಸರಕಾರ ದೃಢ ನಿರ್ಧಾರ ತೆಗೆದುಕೊಳ್ಳಬೇಕು. ಪರಿಷ್ಕರಣೆ ವಿಚಾರ ಸಮಿತಿಗೆ ಬಿಡಬೇಕು. ಅದರಲ್ಲಿ ಸರಕಾರ ಹಾಗೂ ರಾಜಕಾರಣಿಗಳು ಭಾಗವಹಿಸುವುದು ಸರಿಯಿಲ್ಲ. ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಾನಿ ಒಳ್ಳೆಯದಲ್ಲ' ಎಂದು ಬಸವರಾಜ ಹೊರಟ್ಟಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News