ನಿಮ್ಮ ಅಜ್ಞಾನ ಮತ್ತು ಅಸೂಯೆಗೆ ಎಲ್ಲಿಂದ ಮದ್ದನ್ನು ಹುಡುಕಿ ತರಲಿ?: ಪ್ರತಾಪ್‍ಸಿಂಹಗೆ ಎಚ್.ಸಿ.ಮಹದೇವಪ್ಪ ತಿರುಗೇಟು

Update: 2022-06-27 05:02 GMT

ಬೆಂಗಳೂರು, ಜೂ. 26: ‘ಅಭಿವೃದ್ಧಿಗಾಗಿ ಬಿಜೆಪಿ ಪಕ್ಷದಿಂದಲೇ ಸನ್ಮಾನ ಸ್ವೀಕರಿಸಿದ್ದನ್ನು ನೋಡಿಯಾದರೂ ಸಂಸದ ಪ್ರತಾಪ್ ಸಿಂಹ ಸುಳ್ಳು ಹೇಳುವುದನ್ನು ನಿಲ್ಲಿಸಲಿ. ಚುನಾವಣಾ ರಾಜಕಾರಣದ ಆಚೆಗೂ ಜನಪ್ರತಿನಿಧಿ ಆದವರಿಗೆ ಒಂದು ಆರೋಗ್ಯಕರ ಸಂವಾದ ನಡೆಸಬೇಕಾದ ಸೌಜನ್ಯ ಇರುತ್ತದೆ ಎಂಬುದನ್ನು ನಾನು ನಂಬುತ್ತೇನೆ' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿರುಗೇಟು ನೀಡಿದ್ದಾರೆ.

ರವಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಬಾಯಿಗೆ ಲಂಗು ಲಗಾಮಿಲ್ಲದೇ ಮಾತನಾಡುವ ಸಂಸದ ಪ್ರತಾಪ್‍ಸಿಂಹ, ವಿಪಕ್ಷ ನಾಯಕ ಸಿದ್ದರಾಮಯ್ಯ, ನಾನು ಹಾಗೂ ಕಾಂಗ್ರೆಸ್ ಸರಕಾರದ ದಾಖಲೆಯ ಅಭಿವೃದ್ಧಿಯ ಮುಂದೆ ತರಗೆಲೆಯಂತೆ ಉದುರಿ ಹೋಗುತ್ತಾರೆ ಎಂಬುದೇ ಸತ್ಯ. ಮೂಲಸೌಕರ್ಯ ಅಭಿವೃದ್ಧಿ ಎಂಬುದು ಇಷ್ಟೊಂದು ರೀತಿಯಲ್ಲಿ ಕಣ್ಣಿಗೆ ಕಾಣುವಂತೆ ಇದ್ದು, ರಸ್ತೆಗಳ ಆರಂಭದ ದಿನಾಂಕ ಮತ್ತು ಯಾರ ನೇತೃತ್ವದಲ್ಲಿ ಆ ರಸ್ತೆಗಳು ಆಗಿದೆ ಎಂಬ ಸಂಗತಿಯು ದಾಖಲಾಗಿದ್ದರೂ ನೀವು ಮತಿ ಭ್ರಮಣೆಗೆ ಒಳಗಾದವರಂತೆ ಮಾತನಾಡಿದರೆ ಅದಕ್ಕೆ ಯಾರು ಹೊಣೆ?' ಎಂದು ಟೀಕಿಸಿದ್ದಾರೆ.

‘ಅಷ್ಟಕ್ಕೂ ಉತ್ತಮ ಅಭಿವೃದ್ಧಿ ಕೆಲಸ ಮಾಡಿದ್ದೀರಿ ಎಂದು ನಿಮ್ಮ ಸರಕಾರದವರೇ ನನ್ನನ್ನು ಕರೆದು ಸನ್ಮಾನಿಸಿದ್ದಾರೆಂಬ ಸಂಗತಿಯನ್ನು ಮರೆಯಬೇಡಿ. ಇನ್ನು ಮೈಸೂರಿಗೆ ಬಂದಾಗಲೆಲ್ಲಾ ಮೈಸೂರನ್ನು ಪ್ಯಾರಿಸ್ ಮಾಡುತ್ತೇನೆ, ಉದಯ್‍ಪುರ ಮಾಡುತ್ತೇನೆ, ಹಾಗೆ ಮಾಡುತ್ತೇನೆ ಹೀಗೆ ಮಾಡುತ್ತೇನೆಂದು ಹೇಳಿ ಬಡವರು ಹಾಗೂ ಯುವ ಜನತೆಯ ಬದುಕಿಗೆ ಮಕ್ಮಲ್ ಟೋಪಿ ಹಾಕಿ ವಂಚಿಸುವ ಭಯಂಕರ ಸುಳ್ಳುಗಳ ಮತ್ತು ಹುಸಿ ಪ್ರಚಾರದ ನಮೋ ರೋಗದಿಂದ ನೀವು ಬಳಲುತ್ತಿದ್ದು ನಿಮ್ಮ ಅಜ್ಞಾನ ಮತ್ತು ಅಸೂಯೆಗೆ ಎಲ್ಲಿಂದ ಮದ್ದನ್ನು ಹುಡುಕಿ ತರಲಿ?' ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

‘ಅಭಿವೃದ್ಧಿ ಎಂದರೆ ಸುಳ್ಳು ಪ್ರಚಾರವಲ್ಲ, ಮಾಧ್ಯಮದ ಎದುರು ಮಾಡುವ ಚೀಪ್ ಗಿಮಿಕ್ ಅಲ್ಲ, ಒಣ ಪ್ರತಿಷ್ಟೆಯೂ ಅಲ್ಲ, ಅಭಿವೃದ್ಧಿ ಎಂದರೆ ಜನರನ್ನು ನಯವಾಗಿ ವಂಚಿಸುವುದಲ್ಲ, ಅಭಿವೃದ್ಧಿ ಎಂದರೆ ಅಭಿವೃದ್ಧಿ ಮಾತ್ರ, ಅಭಿವೃದ್ಧಿ ಮತ್ತು ದೂರದೃಷ್ಟಿಗೆ ಯಾವುದೇ ಪರ್ಯಾಯವಿಲ್ಲ' ಎಂದು ಮಹದೇವಪ್ಪ ಇದೇ ಸಂದರ್ಭದಲ್ಲಿ ಸಂಸದ ಪ್ರತಾಪಸಿಂಹ ಅವರಿಗೆ ತಿರುಗೇಟು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News