ತೀಸ್ತಾ ಸೆಟಲ್ವಾಡ್, ಶ್ರೀಕುಮಾರ್ ಬಂಧನ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ

Update: 2022-06-26 17:00 GMT

ಬೆಂಗಳೂರು, ಜೂ. 26: ಸಾಮಾಜಿಕ ಕಾರ್ಯಕರ್ತೆ ಹಾಗೂ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ನಿವೃತ್ತ ಡಿಜಿಪಿ ಶ್ರೀಕುಮಾರ್ ಅವರನ್ನು ಗುರಿಯಾಗಿಸಿ ಕೊಂಡು ಬಂಧಿಸಿರುವ ಕೇಂದ್ರ ಸರಕಾರದ ಕ್ರಮ ಖಂಡಿಸಿ ರಾಜ್ಯದ ವಿವಿಧೆಡೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಧರಣಿ, ಪ್ರ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ರಾಜಧಾನಿ ಬೆಂಗಳೂರು, ಕಲುಬರ್ಗಿ ಸೇರಿದಂತೆ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಪ್ರಗತಿಪರ ಸಂಘಟನೆಗಳು ಹಾಗೂ ಚಿಂತಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರಕಾರದ ಸರ್ವಾಧಿಕಾರ ಧೋರಣೆ ಸಲ್ಲದು, ಹಲವು ಜನಪರ ಹೋರಾಟಗಾರರನ್ನು ಕಳೆದುಕೊಂಡಿದ್ದೇವೆ. ಆದರೆ, ಟೀಸ್ಟಾ ಸೆಟಲ್ವಾಡ್ ಅವರನ್ನು ಉಳಿಸಿಕೊಳ್ಳಲೇಬೇಕು ಎಂದು ಘೋಷಣೆ ಕೂಗಿದರು.

ಗುಜರಾತ್ ಗಲಭೆಯಲ್ಲಿ ನರೇಂದ್ರ ಮೋದಿ ಬಳಗಕ್ಕೆ ಸುಪ್ರೀಂ ಕೋರ್ಟ್ ಕ್ಲೀನ್‍ಚಿಟ್ ಕೊಟ್ಟ ಬೆನ್ನಲ್ಲೇ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮತ್ತು ಅವರ ಬಳಗ ಸೇಡಿನ ರಾಜಕಾರಣ ಪ್ರಾರಂಭಿಸಿದೆ. ಸುಳ್ಳು ಆರೋಪದ ಮೇಲೆ ಟೀಸ್ಟಾ ಸೆಟಲ್ವಾಡ್ ಅವರನ್ನು ವಿಚಾರಣೆ ಹೆಸರಲ್ಲಿ ಕಸ್ಟಡಿಗೆ ತೆಗೆದುಕೊಂಡಿರುವುದು ಸರ್ವಾಧಿಕಾರಿ ದಬ್ಬಾಳಿಕೆ ಎಂದು ಹೋರಾಟಗಾರರು ಟೀಕಿಸಿದರು.

ಕಲಬುರ್ಗಿಯಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹೋರಾಟಗಾರ್ತಿ ಕೆ.ನೀಲಾ, ‘2002ರಲ್ಲಿ ಗುಜರಾತ್‍ನಲ್ಲಿ ನಡೆದ ಕೋಮು ಹಿಂಸಾಚಾರದ ನರಮೇಧದಲ್ಲಿ ಆಗಿನ ಸರಕಾರದ ಪಾತ್ರ ಇದ್ದುದನ್ನು ಸತತವಾಗಿ ಬಹಿರಂಗಪಡಿಸುತ್ತಲೇ ಇರುವ ಟೀಸ್ಟಾ ಸೆಟಲ್ವಾಡ್ ವಿರುದ್ಧ ಫ್ಯಾಶಿಸ್ಟ್ ಸರಕಾರ ನಡೆಸಿರುವ ದಾಳಿ ಅತ್ಯಂತ ಹೇಯವಾದ ಕೃತ್ಯ' ಎಂದು ಕಟು ಶಬ್ದಗಳಲ್ಲಿ ಖಂಡಿಸಿದರು.

ಈಗಿನ ಕೇಂದ್ರದ ಬಿಜೆಪಿ ಸರಕಾರ ದ್ವೇಷದ, ಸೇಡಿನ ರಾಜಕೀಯವನ್ನು ದೇಶದ ತುಂಬೆಲ್ಲ ಹರಡಿಸುತ್ತಿದೆ. ಅದನ್ನು ಜನಮಾನಸದಲ್ಲಿ ಕಸಿ ಮಾಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದ ಅವರು, ಟೀಸ್ಟಾ ಸೆಟಲ್ವಾಡ್ ಹಾಗೂ ಶ್ರೀಕುಮಾರ್ ಅವರನ್ನು ಈ ಕೂಡಲೇ ಬಿಡುಗಡೆ ಮಾಡಬೇಕೆಂದು ಅವರು ಆಗ್ರಹಿಸಿದರು.

ಬೆಂಗಳೂರಿನ ಪುರಭವನದ ಮುಂಭಾಗ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹೋರಾಟಗಾರ್ತಿ ಗೌರಮ್ಮಾ, ವಿಚಾರಣೆ ನೆಪದಲ್ಲಿ ಟೀಸ್ಟಾ ಅವರನ್ನು ಕರೆದೊಯ್ದು ಏಕಾಏಕಿ ಬಂಧಿಸಲಾಗಿದೆ. ಅಲ್ಲದೆ, ಈಗಿನ ಕೇಂದ್ರ ಸರಕಾರ ಜನಪರ ಹೋರಾಟಗಾರರನ್ನು ಗುರಿಯಾಗಿಸಿಕೊಂಡು ಬಂಧಿಸುತ್ತಿದೆ. ಇಂತಹ ಬೆಳವಣಿಗೆ ಒಳ್ಳೆಯದಲ್ಲ, ಅವರನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದಸಂಸ ಮುಖಂಡ ಆರ್.ಮೋಹನ್ ರಾಜ್, ಜನಶಕ್ತಿಯ ಗೌರಿ, ಎಸ್‍ಎಫ್‍ಐ ವಾಸುದೇವರೆಡ್ಡಿ, ನರಸಿಂಹಮೂರ್ತಿ, ಪ್ರಭಾ ಬೆಳವಂಗಲ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News