ಓ ಮೆಣಸೇ...

Update: 2022-06-26 19:30 GMT

ಮುಂಬರುವ ರಾಷ್ಟ್ರಪತಿ ಚುನಾವಣೆಯು ಎರಡು ವಿರುದ್ಧ ಸಿದ್ಧಾಂತಗಳ ನಡುವಿನ ಹೋರಾಟವಾಗಿದೆ -ಯಶವಂತ್ ಸಿನ್ಹಾ, ಕೇಂದ್ರದ ಮಾಜಿ ಸಚಿವ
ನೀವು ಅಧಿಕೃತ ರಾಷ್ಟ್ರೀಯ ವಕ್ತಾರರಾಗಿಯೂ, ರಾಷ್ಟ್ರೀಯ ಉಪಾಧ್ಯಕ್ಷರಾಗಿಯೂ, ಕೇಂದ್ರ ಸಂಪುಟ ಸಚಿವರಾಗಿಯೂ ಬಹುಕಾಲ ಸೇವೆ ಸಲ್ಲಿಸಿರುವ ಪಕ್ಷದ ಸಿದ್ಧಾಂತದ ಕುರಿತು ಮಾತನಾಡಿದಾಗಲೆಲ್ಲಾ ನಿಮ್ಮ ಸಿದ್ಧಾಂತ ಏನಿರಬಹುದೆಂದು ಜನರು ಅಚ್ಚರಿಪಡತೊಡಗುತ್ತಾರೆ.

ಸಂಸ್ಕೃತಿ, ಪರಂಪರೆಯನ್ನು ಕಡೆಗಣಿಸಿದ್ದ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದರೆ ತಪ್ಪೇನು? - ಆರ್.ಅಶೋಕ್, ಸಚಿವ
ಪರಿಷ್ಕರಣೆಯ ಹೆಸರಲ್ಲಿ ಹಿಂಸೆಯನ್ನೇ ಸಂಸ್ಕೃತಿಯಾಗಿ, ವಿಧ್ವಂಸವನ್ನೇ ಪರಂಪರೆಯಾಗಿ ಚಿತ್ರಿಸುವ ಪಾಠಗಳನ್ನು ತುರುಕಿದ್ದು ತಪ್ಪುಎನ್ನುವುದು ಜನತೆಯ ಅಭಿಮತ.

ಆಪರೇಶನ್ ಕಮಲ ಪ್ರಜಾಪ್ರಭುತ್ವಕ್ಕೆ ಮಾರಕ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ತಮ್ಮನ್ನು ಮಾರಾಟಕ್ಕಿಟ್ಟಿರುವವರು, ಖರೀದಿಗೆ ಹೊರಟವರಿಗಿಂತ ಕಡಿಮೆ ಮಾರಕರೇನಲ್ಲ, ಪ್ರಜಾಪ್ರಭುತ್ವದ ಪಾಲಿಗೆ.

ಮುಸ್ಲಿಮ್, ದಲಿತ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ್ದೂ ನಾವೇ, ಇಂದು ಆದಿವಾಸಿ, ಬುಡಕಟ್ಟು ಮಹಿಳೆಯನ್ನು ರಾಷ್ಟ್ರಪತಿ ಮಾಡುವುದು ನಾವೇ. ಏಕೆಂದರೆ ನಾವು ಜಾತಿವಾದಿಗಳಲ್ಲ, ರಾಷ್ಟ್ರೀಯವಾದಿಗಳು -ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಹಲ್ಲಿಲ್ಲದ ಹುದ್ದೆಗಳ ವಿಷಯದಲ್ಲಿ ನಿಮ್ಮ ಔದಾರ್ಯ ಜಗತ್ಪ್ರಸಿದ್ಧವಾಗಿದೆ.

ಮಾನವ- ಪ್ರಾಣಿ ಸಂಘರ್ಷ ತಪ್ಪಿಸಲು ಹಣ್ಣಿನ ಗಿಡಗಳ ಸಂರಕ್ಷಣೆ ಅಗತ್ಯ -ಉಮೇಶ್ ಕತ್ತಿ, ಸಚಿವ
ಆ ಕ್ಷೇತ್ರದಲ್ಲಿ ಟಿಂಬರ್ ವ್ಯಾಪಾರಕ್ಕೆ ಸ್ಕೋಪ್ ಕಡಿಮೆ ಇರುವುದರಿಂದ, ನೆಟ್ಟು ಬೆಳೆಸಿದರೆ ಕೆಲವು ದಿನ ಉಳಿಯುವ ಸಾಧ್ಯತೆಗಳಿವೆ.

ನನನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡಿರುವುದರಿಂದ ಮುಜುಗರವೂ ಆಗಿಲ್ಲ, ಬೇಸರವೂ ಆಗಿಲ್ಲ, ಸಂತೋಷವೇ ಆಗಿದೆ - ಎಚ್.ಆರ್.ಶ್ರೀನಿವಾಸ್, ಶಾಸಕ
ಫುಡಾರಿಗಳೆಂದ ಮೇಲೆ ಜನರು ಅವರಿಂದ ಅಂತಹ ಯಾವುದನ್ನೂ ನಿರೀಕ್ಷಿಸುವುದು ಕೂಡಾ ಇಲ್ಲ.

ಅವಕಾಶ (ಸಚಿವ ಸ್ಥಾನ) ಕೊಟ್ಟರೆ ರಾಜ್ಯಮಟ್ಟದಲ್ಲಿ ನನ್ನ ಅನುಭವ ಹಂಚಿಕೊಳ್ಳುತ್ತೇನೆ - ರಾಮದಾಸ್, ಶಾಸಕ
ಸಚಿವರಾಗದಿದ್ದರೆ ಹಂಚಿಕೊಳ್ಳಲಿಕ್ಕಾಗದ ಚಿದಂಬರ ರಹಸ್ಯ ಯಾವುದೆಂಬ ಗುಟ್ಟನ್ನು ಮಾತ್ರ ಈಗಲೇ ಹಂಚಿಕೊಳ್ಳಿ.

ಬಿಜೆಪಿಯ ಅಧಿಕಾರ ದಾಹ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಬಹುಮತ ಪಡೆದ ಬಿಜೆಪಿಯೇತರ ಯಾವ ಸರಕಾರಗಳೂ ಉಳಿಯುವುದು ಕಷ್ಟ -ಕುಮಾರಸ್ವಾಮಿ, ಮಾಜಿ ಸಿಎಂ
ನಿಮ್ಮಂಥವರು ಇರುವ ತನಕ ಅವರ ಯಾವ ಸಂಚನ್ನೂ ಸೋಲಿಸುವುದು ಕಷ್ಟ.

ಕೊರೋನ ಹೊಸ ತಳಿ ದಾಳಿ ನಡೆಸುವ ಸಾಧ್ಯತೆ ಇದ್ದು, ಎಲ್ಲರೂ ಎಚ್ಚರದಿಂದಿರಬೇಕು - ಮನ್ಸುಖ್ ಮಾಂಡವೀಯ, ಕೇಂದ್ರ ಸಚಿವ
ಭ್ರಷ್ಟಾಚಾರ, ಹಿಂಸಾಚಾರಗಳಂತಹ ಸರಕಾರಿ ಪ್ರಾಯೋಜಿತ ಸೋಂಕುಗಳನ್ನು ನಿತ್ಯ ಅನುಭವಿಸಿ ಪಳಗಿದವರು ಕೊರೋನದ ಯಾವುದೇ ತಳಿಗೆ ಎಲ್ಲಿ ಸೊಪ್ಪು ಹಾಕುತ್ತಾರೆ?

ಈ.ಡಿ.ಅಧಿಕಾರಿಗಳ ಸುದೀರ್ಘ ವಿಚಾರಣೆಯ ವೇಳೆ ನಾನು ತಾಳ್ಮೆ ಕಳೆದುಕೊಳ್ಳದಿದ್ದುದನ್ನು ಕಂಡು ವಿಚಾರಣೆ ಮಾಡಿದವರಿಗೆ ಅಚ್ಚರಿ ಆಗಿದೆ - ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಸ್ವತಃ ನಿಮ್ಮ ಪಕ್ಷ ಕೊನೆಯುಸಿರು ಎಳೆಯುತ್ತಿರುವ ವಿಷಯದಲ್ಲಿ ನಿಮ್ಮ ಅನುಪಮ ಸಹನೆಯನ್ನು ಕಂಡವರಿಗೆ ಮಾತ್ರ ಕಿಂಚಿತ್ತೂ ಅಚ್ಚರಿಯಾಗಿಲ್ಲ.

ದೇವರ ಕೆಲಸ ಮಾಡುತ್ತಿರುವ ಶಿಕ್ಷಕರ ನೋವಿಗೆ ಸರಕಾರ ಸ್ಪಂದಿಸದಿರುವುದು ದುರದೃಷ್ಟಕರ - ಬೋಜೇಗೌಡ, ವಿ.ಪ.ಸದಸ್ಯ
ತಮ್ಮ ಕೆಲಸಗಳಿಗಾಗಿ ದೇವರನ್ನು ಬಳಸಿಕೊಳ್ಳುವವರು ಯಾರ ನೋವಿಗೂ ಸ್ಪಂದಿಸುವುದಿಲ್ಲ. ಇದು ಶೋಷಕರ ಸ್ವಭಾವಕ್ಕೆ ಸಂಬಂಧಿಸಿದ ವಿಷಯ, ಅದೃಷ್ಟಕ್ಕಲ್ಲ.

ಸುಳ್ಯದ ಸ್ವಾತಂತ್ರ ಸಂಗ್ರಾಮಕ್ಕೆ ತನ್ನದೇ ಆದ ಇತಿಹಾಸ ಇದೆ - ಎಸ್.ಅಂಗಾರ, ಸಚಿವ
ಆ ಕಾಲದಲ್ಲಿ ಸುಳ್ಯದಲ್ಲಿ ಬಿಜೆಪಿಯ ಕಚೇರಿ ಉದ್ಘಾಟಿಸಲು ಮೋದಿ ಬಂದಿದ್ದರು ಎಂದು ಹೇಳಿ ನೋಡಿ. ಜನ ನಂಬುತ್ತಾರೆ.

ಶಿವಸೇನೆಯ ಬಂಡಾಯ ಶಾಸಕರನ್ನು ಅಸ್ಸಾಮಿಗೆ ಬದಲು ಪ.ಬಂಗಾಳಕ್ಕೆ ಕಳುಹಿಸಿ, ಒಳ್ಳೆಯ ಆತಿಥ್ಯ ನೀಡುತ್ತೇವೆ -ಮಮತಾ ಬ್ಯಾನರ್ಜಿ, ಪ.ಬಂ.ಸಿಎಂ
ಸದ್ಯ ನೀವು ಮಹಾರಾಷ್ಟ್ರದ ಚಿಂತೆ ಬಿಟ್ಟು, ನಿಮ್ಮ ಪಕ್ಷದ ಶಾಸಕರಿಗಾಗಿ ಎಲ್ಲೆಲ್ಲಾ ರೆಸಾರ್ಟ್ ಬುಕ್ ಆಗಿರಬಹುದು ಎಂಬ ಕುರಿತು ಚಿಂತಿಸಿ.

ದೇಶಭಕ್ತಿ ಗೀತೆಗಳು ದೇಶಪ್ರೇಮಕ್ಕೆ ಪ್ರೇರಣೆ - ಸುನೀಲ್ ಕುಮಾರ್, ಸಚಿವ
ಪ್ರಾಮಾಣಿಕ ದೇಶಪ್ರೇಮವು ಗೀತೆಗಳಿಂದ ಸಿಗುವ ಪ್ರೇರಣೆ ಯನ್ನು ಅವಲಂಬಿಸಿರುವುದಿಲ್ಲ.

ನಮ್ಮ ಬಂಡಾಯವನ್ನು ಚಾರಿತ್ರಿಕ ಎಂದು ರಾಷ್ಟ್ರೀಯ ಪಕ್ಷವೊಂದು ಬಣ್ಣಿಸಿದೆ - ಏಕನಾಥ ಶಿಂದೆ, ಶಿವಸೇನೆ ಬಂಡಾಯ ಗುಂಪಿನ ನಾಯಕ
ಚಾರಿತ್ರವೇ ಇಲ್ಲದವರಿಗೆ ಕೋತಿಯಾಟಗಳೇ ಚರಿತ್ರೆಯಾಗಿ ಕಾಣಿಸುತ್ತವೆ.

ಈ ದೇಶದಲ್ಲಿ ಸಾಮಾನ್ಯರಿಗೊಂದು ಕಾನೂನು, ಗಾಂಧಿ ಕುಟುಂಬಕ್ಕೊಂದು ಕಾನೂನಿಲ್ಲ - ಆರಗ ಜ್ಞಾನೇಂದ್ರ, ಸಚಿವ
ಅನುಕೂಲಕ್ಕಾಗಿ ಪ್ರತ್ಯೇಕ ಕಾನೂನುಗಳಿರುವುದು ಮನುವಾದಿ ಪರಿವಾರಕ್ಕೆ ಮಾತ್ರ.

ನಾನು ಮನಸ್ಸು ಮಾಡಿದರೆ ಯಾವಾಗ ಬೇಕಾದರೂ ಮುಖ್ಯಮಂತ್ರಿಯಾಗಬಹುದು - ಗಾಲಿ ಜನಾರ್ದನ ರೆಡ್ಡಿ, ಮಾಜಿ ಸಚಿವ
ಆದರೂ ಮನಸ್ಸು ಮಾಡದ ಆ ನಿಮ್ಮ ಮನಸ್ಸು ತಮ್ಮ ಕೈಗೆ ಸಿಕ್ಕಿದ್ದರೆ ಪರೀಕ್ಷೆಗೊಳಪಡಿಸಿ ಏನಾದರೂ ಕಂಡುಕೊಳ್ಳ ಬಹುದಿತ್ತು ಎಂದು ಹಲವಾರು ವಿರಕ್ತರು, ಯೋಗಿಗಳು, ಸನ್ಯಾಸಿಗಳು ಮತ್ತು ಮನೋ ವೈದ್ಯರು ಆಶೆ ಪಡುತ್ತಿದ್ದಾರೆ.

ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಮೈತ್ರಿ ಕೂಟವು ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ವಾರ್ಧಕ್ಯದಲ್ಲಿ ಎರಡೂ ಕಾಲುಗಳು ಒಂದೇ ಕಡೆ ಇದ್ದರೆ ಕ್ಷೇಮ.

ಕೆಲವು ಮುಸ್ಲಿಮ್ ಗೂಂಡಾಗಳು ಶಿವಮೊಗ್ಗವನ್ನು ಗೂಂಡಾರಾಜ್ಯ ಮಾಡಲು ಹೊಟಿದ್ದಾರೆ -ಕೆ.ಎಸ್.ಈಶ್ವರಪ್ಪ, ಶಾಸಕ
ಅವರೇನು ಶೇ.40ನಲ್ಲಿ ಪಾಲು ಕೇಳಲು ಬಂದರೇ?

ಮೂರು ಪಕ್ಷಗಳ ಧೋರಣೆಯಿಂದ ಬೇಸತ್ತು ಸ್ವಚ್ಛ ಆಡಳಿತಕ್ಕಾಗಿ ಆಪ್ ಸೇರಿದ್ದೇನೆ - ಮುಖ್ಯಮಂತ್ರಿ ಚಂದ್ರು, ಆಪ್ ಮುಖಂಡ
ಐದನೆಯ ಪಕ್ಷ ಬರುವವರೆಗಾದರೂ ಅಲ್ಲೇ ಇರುವಿರಾ?

ನೂರಾರು ವರ್ಷಗಳ ವಿದೇಶಿ ಆಕ್ರಮಣದ ಹೊರತಾಗಿಯೂ ಭಾರತ ತನ್ನ ಸಂಸ್ಕೃತಿ, ಸಂಪ್ರದಾಯವನ್ನು ಕಳೆದುಕೊಳ್ಳದೆ ವಿಶ್ವಕ್ಕೆ ಮಾದರಿಯಾಗಿದೆ - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ
ಸ್ವದೇಶಿಗಳು ಸ್ವದೇಶಿಗಳ ಮೇಲೆ ಎಸಗಿದ ಮಾದರಿ ಅಕ್ರಮಗಳ ಬಗ್ಗೆ ಹೇಳುತ್ತಿರಬೇಕು.

ಪ್ರವಾದಿ ನಿಂದನೆ ಪ್ರಕರಣದಿಂದಾಗಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲೂ ಭಾರತದ ಘನತೆಗೆ ಧಕ್ಕೆಯಾಗಿದೆ - ಅಜಿತ್ ದೋವಲ್, ರಾಷ್ಟ್ರೀಯ ಭದ್ರತಾ ಸಲಹೆಗಾರ
ಅದಕ್ಕಾಗಿ ದೇಶದೊಳಗಿರುವ ಜನರ ನಿವಾಸಗಳ ಮೇಲೆ ಬುಲ್ಡೋಜರ್ ಪ್ರಯೋಗವೇ?

‘ಅಗ್ನಿಫಥ್’ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರುವುದು ಆಶ್ಚರ್ಯಕರ - ಎಸ್.ಎಂ.ಕೃಷ್ಣ, ಮಾಜಿ ಸಿಎಂ
ತಮ್ಮ ಕುಡಿಗಳನ್ನು ಅಗ್ನಿಪಥ್‌ಗೆ ಸೇರಿಸಿ ನಮಗೂ ಒಂದಿಷ್ಟು ಅಚ್ಚರಿಯನ್ನು ಕೊಡಿ.

ರಾಜ್ಯದಲ್ಲಿ ಕಣ್ಣು - ಕಿವಿ ಇಲ್ಲದ ಭಂಡ ಸರಕಾರ ಇದೆ - ಧ್ರುವನಾರಾಯಣ, ಕೆಪಿಸಿಸಿ ಕಾರ್ಯಾಧ್ಯಕ್ಷ
ಮೆದುಳನ್ನೇಕೆ ಬಿಟ್ಟಿರಿ? 

Writer - ಪಿ.ಎ. ರೈ

contributor

Editor - ಪಿ.ಎ. ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...