ಎಸ್.ಎಲ್.ಭೈರಪ್ಪ ಬಿಜೆಪಿ ವಕ್ತಾರರಂತೆ ಮಾತನಾಡಬಾರದು: ಎಚ್.ವಿಶ್ವನಾಥ್

Update: 2022-06-27 07:15 GMT

ಮೈಸೂರು, ಜೂ.27: ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪಠ್ಯಪರಿಷ್ಕರಣೆ ಮಾಡಿರುವುದನ್ನು ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಸಮರ್ಥಿಸಿಕೊಂಡಿರುವುದು ಖಂಡನೀಯ. ಭೈರಪ್ಪ ಹಿರಿಯ ಸಾಹಿತಿ, ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ಬಿಜೆಪಿ ವಕ್ತಾರರಂತೆ ಮಾತನಾಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.

ನಗರದ ಕಾಡಾ ಕಚೇರಿ ಆವರಣದಲ್ಲಿ  ತಮ್ಮ ನೂತನ ವಿಧಾನ ಪರಿಷತ್ ಕಚೇರಿಯನ್ನು ಸೋಮವಾರ ಉದ್ಘಾಟನೆಗೊಳಿಸಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು.

ಸಾಹಿತಿ ಭೈರಪ್ಪ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರು ಪಠ್ಯಪರಿಷ್ಕರಣೆ ಬಗ್ಗೆ ಧನಿ ಎತ್ತಿರುವುದು ಸರಿಯಲ್ಲ. ಅವರು ಸಾಹಿತ್ಯ ಲೋಕದ ಸೌಂದರ್ಯ ಹೆಚ್ಚಿಸುವ ಕೆಲಸ ಮಾಡಬೇಕೇ ಹೊರತೂ ಇಡೀ ಸಮಾಜ ವಿರೋಧಿಸುತ್ತಿರುವ ಪಠ್ಯಪರಿಷ್ಕರಣೆಯನ್ನು ಸಮರ್ಥಿಸಿಕೊಂಡಿರುವುದು ಸರಿಯಲ್ಲ. ಅವರು ಬಿಜೆಪಿ ವಕ್ತಾರರಂತೆ ಮಾತನಾಡಬಾರದು. ಬಿಜೆಪಿ ಪರ ವಕಾಲತ್ತು ವಹಿಸಬಾರದು. ಅವರ ಮಾತುಗಳಲ್ಲಿ ರಾಜಕೀಯ ದುರ್ನಾತ ಬರುತ್ತಿದೆ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಕುಟುಕಿದರು.

ಪಠ್ಯಪರಿಷ್ಕರಣೆ ಪುನರ್ ಪರಿಶೀಲಿಸುವ ವಿಚಾರದಲ್ಲಿ ಸರಕಾರ ಹಠ ಮಾಡಬಾರದು, ಇದನ್ನು ಪ್ರತಿಷ್ಠೆಯಾಗಿಯೂ ತೆಗೆದುಕೊಳ್ಳಬಾರದು, ಮೊದಲು ಪಠ್ಯಕ್ರಮವನ್ನು ಬದಲಾಯಿಸಿ ಶಿಕ್ಷಣ ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಕೆಲಸ ಮಾಡಬೇಕು ಎಂದು ಹೇಳಿದರು.

ಪಠ್ಯ ಪರಿಷ್ಕರಣೆ ಪ್ರಕ್ರಿಯೆ ಯಾವುದೋ ಪಕ್ಷದ ಕಾರ್ಯಕ್ರಮವಲ್ಲ, ಸದ್ಯ ಶಿಕ್ಷಣ ಇಲಾಖೆ ಅಧೋಗತಿಗೆ ಹೋಗುತ್ತಿದೆ. ಶಿಕ್ಷಣ ಇಲಾಖೆ ಗೊಂದಲಕ್ಕೆ ಕಂದಾಯ ಸಚಿವರು ಉತ್ತರ ಕೊಡಬೇಕಾ? ನಗರಾಭಿವೃದ್ಧಿ ಸಚಿವರು ಉತ್ತರಿಸುತ್ತಾರೆ ಎಂದರೆ ಏನರ್ಥ? ಶಿಕ್ಷಣ ಸಚಿವ ನಾಗೇಶ್ ಏನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿರುವ ಪಠ್ಯಕ್ರಮವನ್ನು ಇಡೀ ನಾಡು ಒಕ್ಕೊರಲಿನಿಂದ ವಿರೋಧಿಸಿದೆ. ಆದ್ದರಿಂದ ಈ ಪಠ್ಯಕ್ರಮವನ್ನು ಹಿಂಪಡೆದು ಪ್ರಸಕ್ತ ಸಾಲಿನಲ್ಲಿ ಹಳೆಯದ್ದನ್ನೇ ಬೋಧಿಸಬೇಕು ಎಂದು ವಿಶ್ವನಾಥ್ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News