ವಿದ್ಯುತ್ ಕಂಪೆನಿಗಳ ಸುಧಾರಣೆ: ಏಕಸದಸ್ಯ ಸಮಿತಿ ಅವಧಿ ಮುಂದುವರಿಕೆಗೆ ಸಿಎಂ ಬೊಮ್ಮಾಯಿ ಸೂಚನೆ

Update: 2022-06-27 13:35 GMT

ಬೆಂಗಳೂರು, ಜೂ.27: ‘ರಾಜ್ಯದ ವಿದ್ಯುತ್ ಸರಬರಾಜು ಕಂಪೆನಿಗಳ ಕಾರ್ಯಕ್ಷಮತೆ ಹಾಗೂ ಹಣಕಾಸಿನ ಸಮರ್ಥನೀಯತೆಯ ಬಗ್ಗೆ ಮತ್ತು ಈ ಕಂಪೆನಿಗಳ ಸರ್ವತೋಮುಖ ಅಭಿವೃದ್ಧಿಯ ಸಲುವಾಗಿ, ಸರಕಾರವು ನಿವೃತ್ತ ಐಎಎಸ್ ಅಧಿಕಾರಿ ಗುರುಚರಣ್ ಅವರ ಅಧ್ಯಕ್ಷತೆಯಲ್ಲಿ ರಚಿಸಿದ್ದ ಏಕಸದಸ್ಯ ಸಮಿತಿಯ ಅವಧಿಯನ್ನು ವಿಸ್ತರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದ್ದಾರೆ.

ಸೋಮವಾರ ಸಮಿತಿಯ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಗುರುಚರಣ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರದಿಯನ್ನು ಇಂದು ಸಲ್ಲಿಸಿದರು. ಈ ಸಂದರ್ಭದಲ್ಲಿ ವರದಿಯ ಶಿಫಾರಸುಗಳ ಅನುಷ್ಠಾನದ ಸಂದರ್ಭದಲ್ಲಿ ಅವರ ಸಲಹೆ, ಮಾರ್ಗದರ್ಶನ ಪಡೆಯಲು ಅನುವಾಗುವಂತೆ ಸಮಿತಿಯ ಅವಧಿಯನ್ನು ವಿಸ್ತರಿಸುವಂತೆ ಬೊಮ್ಮಾಯಿ ಅವರು ಹೇಳಿದರು.

ಈ ವರದಿಯಲ್ಲಿ ರಾಜ್ಯದ ವಿದ್ಯುತ್ ಸರಬರಾಜು ಕಂಪೆನಿಗಳ ವಸ್ತುಸ್ಥಿತಿ, ಸುಧಾರಣೆಗಳ ಅಗತ್ಯತೆ ಮತ್ತು ಅನುಷ್ಠಾನ ಯೋಜನೆಯ ಬಗ್ಗೆ ಸವಿಸ್ತಾರ ವಿವರಣೆಗಳನ್ನು ನೀಡುವುದರೊಂದಿಗೆ ರಚನಾತ್ಮಕ ಬದಲಾವಣೆ, ಮಧ್ಯಮ ಮತ್ತು ದೀರ್ಘಾವಧಿಯ ಸುಧಾರಣೆ, ಈ ಸುಧಾರಣೆಗಳ ಸಕಾಲಿಕ ಅನುಷ್ಠಾನದ ಬಗ್ಗೆ ನಿಖರವಾಗಿ ತಿಳಿಸಲಾಗಿದೆ.

ಈ ವರದಿಯಲ್ಲಿ ತಿಳಿಸಿರುವ ಸುಧಾರಣಾ ಕಾರ್ಯಗಳನ್ನು ಅನುಷ್ಠಾನಗೊಳಿಸುವ ಕುರಿತು ವಿವರವಾಗಿ ಚರ್ಚಿಸಿ, ಕ್ರಿಯಾ ಯೋಜನೆ ರೂಪಿಸಬೇಕು ಎಂದು ಅವರು ತಿಳಿಸಿದರು. ಇಂಧನ ಸಚಿವ ವಿ.ಸುನಿಲ್ ಕುಮಾರ್, ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಿ.ಕುಮಾರ ನಾಯಕ್, ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News