ಟಿಪ್ಪು ಶೆಟ್ಟರ್, ಕಾರಜೋಳರ ಎದೆಯಲ್ಲಿಯೂ ಇದ್ದಾರೆ: ಬಿ.ಕೆ.ಹರಿಪ್ರಸಾದ್ ವ್ಯಂಗ್ಯ

Update: 2022-06-27 14:44 GMT

ಬೆಂಗಳೂರು, ಜೂ. 27: ‘ಮೈಸೂರು ಹುಲಿ ಎಂದೇ ಖ್ಯಾತಿ ಪಡೆದಿರುವ ಟಿಪ್ಪು ಸುಲ್ತಾನ್ ನಮ್ಮ ಮೈಮೇಲಷ್ಟೇ ಅಲ್ಲ, ಬಿಜೆಪಿ ಹಾಗೂ ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳರ ಎದೆಯಲ್ಲಿದ್ದಾರೆ, ಅನುಮಾನವಿದ್ದರೆ ಎದೆ ಬಗೆದು ನೋಡಿ ಸಚಿವ ಆರ್.ಅಶೋಕ್ ಅವರೇ' ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್  ಕಂದಾಯ ಸಚಿವ ಅಶೋಕ್‍ಗೆ ತಿರುಗೇಟು ನೀಡಿದ್ದಾರೆ.

ಸೋಮವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಪಠ್ಯ ಪುಸ್ತಕದಲ್ಲಿ ಉದ್ದೇಶಪೂರ್ವಕವಾಗಿ ನಾಡಿನ ಸಾಂಸ್ಕೃತಿಕ ನಾಯಕರಿಗೆ ಬಿಜೆಪಿ ಸರಕಾರ ಮಾಡಿರುವ ಘನಘೋರ ಅಪರಾಧಗಳಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದೆ. ಟಿಪ್ಪು ಸುಲ್ತಾನರ ವಿಷಯವನ್ನ ಮತ್ತೆ ಮುನ್ನಲೆಗೆ ತಂದು ವಿಷಯವನ್ನ ಬೇರೆಡೆಗೆ ತಿರುಗಿಸಲು ಸಚಿವ ಆರ್.ಅಶೋಕ ಪ್ರಯತ್ನಿಸುತ್ತಿದ್ದಾರೆ' ಎಂದು ದೂರಿದ್ದಾರೆ.

‘ಟಿಪ್ಪುವಿನ ಪೋಷಾಕು ಧರಿಸಿ ಆಗಿನ ಸಿಎಂ ಶೆಟ್ಟರ್ ಜೊತೆಗೆ ಫೋಸ್ ನೀಡಿದವರು ತಾವೇ ಅಲ್ಲವೇ? ಆಗ ಮೈಮೇಲಷ್ಟೆಯಲ್ಲ, ತಲೆ ಮೇಲೆ ಹೊತ್ತು ಮೆರೆಸಿದ್ದನ್ನ ಮರೆತಿದ್ದೀರಾ? ಇತಿಹಾಸ ದಾಖಲೆ ಸಮೇತ ಸುಳ್ಳನ್ನ ಬೆತ್ತಲೆ ಮಾಡಿ ಬಿಡುತ್ತೆ ಹುಶಾರ್...! ಟಿಪ್ಪು ವೀರಾಧಿವೀರ, ಶೂರಾಧಿ ಶೂರ, ಪರಾಕ್ರಮಿ, ‘ಮೈಸೂರಿನ ಹುಲಿ' ಎಂಬ ಬಿರುದುಗಳನ್ನ ಕಾಂಗ್ರೆಸ್ ನೀಡಿದ್ದಲ್ಲ ಇತಿಹಾಸಕಾರರು. ಅದನ್ನ ಯಥಾವತ್ತು ಟಿಪ್ಪುವಿನ ಪರಾಕ್ರಮವನ್ನ, ಧೈರ್ಯ, ಸಾಹಸ, ದೇಶಪ್ರೇಮದ ಕಥನಗಳನ್ನ 425 ಪುಟಗಳ ಪುಸ್ತಕವನ್ನ ಪ್ರಕಟಿಸಿದ್ದು ಬಿಜೆಪಿ ಸರÀಕಾರ ಎಂಬುದು ಅಷ್ಟು ಬೇಗ ಮರೆತು ಹೋಯಿತಾ?' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕರ್ನಾಟಕ ಇತಿಹಾಸದಲ್ಲಿ 1782-1799ರ ನಡುವಿನ ಅವಧಿಯು ವಿಶಿಷ್ಟವಾದದ್ದು. ಈ ಅವಧಿಯಲ್ಲಿ ಮೈಸೂರು ಸಾಮ್ರಾಜ್ಯ ಟಿಪ್ಪು ಆಡಳಿತಕ್ಕೆ ಒಳಪಟ್ಟಿತ್ತು. ಏಕಾಂಗಿಯಾಗಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ವಿರುದ್ಧ ತೀವ್ರವಾಗಿ ಹೋರಾಡಿ, ಅವರಿಗೆ ಸೋಲಿನ ರುಚಿಯನ್ನು ತೋರಿಸುವಲ್ಲೂ ಯಶಸ್ವಿಯಾಗಿದ್ದ. ಅದು ಒಂದು ಬಾರಿ ಅಲ್ಲ, ಎರಡು ಬಾರಿ. ಅದಾಗ್ಯೂ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷರ ವಿರುದ್ಧ ಕೊನೆಯವರೆಗೂ ಹೋರಾಡಿ ರಣರಂಗದಲ್ಲೇ ವೀರಮರಣವನ್ನಪ್ಪಿದ' ಎಂದು ಅವರು ತಿಳಿಸಿದ್ದಾರೆ.

‘ಬಿಜೆಪಿಯವರು ಇತ್ತೀಚೆಗೆ ಇತಿಹಾಸ ಅಷ್ಟೇ ಬದಲಾಯಿಸುತ್ತಿಲ್ಲ, ತಾವೇ ಹೇಳಿದ್ದ ಹೇಳಿಕೆಗಳನ್ನ, ಪ್ರಕಟಿಸಿದ್ದ ಪುಸ್ತಕಗಳ ಬಗ್ಗೆಯೂ ಸುಳ್ಳನ್ನ ಹೇಳಲು ಆರಂಭಿಸಿದ್ದಾರೆ. ಬಹುಶಃ ವಾಟ್ಸಪ್ ಯುನಿವರ್ಸಿಟಿಯ ಪ್ರಾರಂಭ ಆಗಿದ್ದು 2014ರಲ್ಲಿ, ಶೆಟ್ಟರ್ ಸಿಎಂ ಆಗಿದ್ದು 2012-13ರಲ್ಲಿ. ಹೀಗಾಗಿ 2014ರ ಮೊದಲ ಎಲ್ಲ್ಲ ಇತಿಹಾಸವೂ ಬಿಜೆಪಿಗೆ ಸುಳ್ಳಂತೆ ಭಾವಿಸುತ್ತಿದೆ. ಇತ್ತೀಚೆಗೆ ಕೋಟ ಶ್ರೀನಿವಾಸ್ ಪೂಜಾರಿ ವಾಟ್ಸಪ್ ಮಾಹಿತಿ ಹಾಕಿ ತಮ್ಮ ಇತಿಹಾಸ ತಿಳುವಳಿಕೆಯನ್ನ ಜಗಜ್ಜಾಹೀರು ಮಾಡಿಕೊಂಡಿದ್ದಾರೆ' ಎಂದು ಅವರು ಟೀಕಿಸಿದ್ದಾರೆ. 

‘ಪಠ್ಯ ಪರಿಷ್ಕರಣೆ ಹೆಸರಿನಲ್ಲಿ ನಡೆದಿರುವ ಪ್ರಮಾದಗಳಿಗೆ ಉತ್ತರ ಕೊಡಲು ಶಿಕ್ಷಣ ಸಚಿವರು ಅಸಮರ್ಥರು ಎಂಬುದನ್ನ ಸಾಬೀತು ಮಾಡಿದ್ದಾರೆ. ಶಿಕ್ಷಣ ಕ್ಷೇತ್ರದ ಬಗ್ಗೆ ಕಂದಾಯ ಸಚಿವರು ಉತ್ತರ ನೀಡುತ್ತಿರುವುದು ಸಂದೇಶವೇನು? ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ನಾಡಿನ ಶಿಕ್ಷಣ ಪ್ರೇಮಿಗಳು, ಸಾಹಿತಿ ಚಿಂತಕರು, ಸ್ವಾಮೀಜಿಗಳು ಸಿಎಂ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆಯುತ್ತಲೇ ಇದ್ದಾರೆ. ಸೌಜನ್ಯಕ್ಕೂ ಸಿಎಂ ಸಭೆ ಕರೆದು ಸ್ಪಷ್ಟಿಕರಣ ನೀಡಲು ಸಾಧ್ಯವಾಗುತ್ತಿಲ್ಲ. ಇದು ಪ್ರಜಾಪ್ರಭುತ್ವ ನಡೆಯಲ್ಲ. ಇನ್ನೂ ಕಾಲ ಮಿಂಚಿಲ್ಲ, ಕೂಡಲೇ ಅವಿವೇಕಿಯೊಬ್ಬ ಮಾತ್ರ ಮಾಡಿರುವ ಪಠ್ಯ ಪರಿಷ್ಕರಣೆಯನ್ನ ರದ್ದುಗೊಳಿಸಿ, ಕೂಡಲೇ ಹಿಂದಿನ ಪಠ್ಯ ಪುಸ್ತಕವನ್ನೇ ಬೋಧಿಸಲು ಅವಕಾಶ ಮಾಡಿಕೊಡಿಬೇಕು' ಎಂದು ಹರಿಪ್ರಸಾದ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News