ವಿಚ್ಛೇದನ ನೀಡಿ 52 ವರ್ಷದ ಬಳಿಕ ಒಂದಾದ ವೃದ್ಧ ದಂಪತಿ!

Update: 2022-06-27 17:36 GMT

ಬೆಂಗಳೂರು, ಜೂ.27: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ(ಕೆಎಸ್‍ಎಲ್‍ಎಸ್‍ಎ) ಇದೇ 25ರಂದು ಹಮ್ಮಿಕೊಂಡಿದ್ದ ಲೋಕ ಅದಾಲತ್‍ನಲ್ಲಿ 7.65 ಲಕ್ಷ ಪ್ರಕರಣ ಇತ್ಯರ್ಥಪಡಿಸಲಾಗಿದ್ದು, ಸರಕಾರಕ್ಕೆ 1,003 ಕೋಟಿ ರೂ. ಉಳಿತಾಯ ಮಾಡಲಾಗಿದೆ ಎಂದು ಕೆಎಸ್‍ಎಲ್‍ಎಸ್‍ಎ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ತಿಳಿಸಿದ್ದಾರೆ.

ಈ ಕುರಿತಂತೆ ಸೋಮವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಎಲ್ಲ ವ್ಯಾಜ್ಯಗಳು ಕೋರ್ಟ್‍ನಲ್ಲಿ ನಡೆದಿದ್ದೇ ಆಗಿದ್ದರೆ, ಅದರಿಂದ ಕೋರ್ಟ್ ಕಲಾಪ ನ್ಯಾಯಾಧೀಶರ ಸಮಯ, ಸಂಬಳ ಹಾಗೂ ಇತರೆ ಖರ್ಚುಗಳು 1,003 ಕೋಟಿ ಆಗುತ್ತಿತ್ತು. ಆದರೆ, ಇದನ್ನು ಲೋಕ ಅದಾಲತ್ ಮುಖಾಂತರ ಉಳಿತಾಯ ಮಾಡಲಾಗಿದೆ ಎಂದು ತಿಳಿಸಿದರು. 

52 ವರ್ಷಗಳ ಬಳಿಕ ಒಂದಾದರು: ಯೌವನದಲ್ಲಿ ದೂರವಾದವರು ವೃದ್ಧಾಪ್ಯದಲ್ಲಿ ಒಂದಾಗಿದ್ದಾರೆ. ಅದೂ ಸಹ ರಾಜಿ ಪಂಚಾಯತಿ  ಮೂಲಕ. 52 ವರ್ಷ ದೂರ ಇದ್ದ ದಂಪತಿಯನ್ನು ಲೋಕ್ ಅದಾಲತ್ ಒಂದು ಮಾಡಿದೆ. 

ವೃದ್ಧಾಪ್ಯದಲ್ಲಿ ಒಂದಾದ ದಂಪತಿಯ ಹೆಸರು ಬಸಪ್ಪ ಅಗಡಿ(85) ಹಾಗೂ ಕಲ್ಲವ್ವ ಅಗಡಿ(80) ಎಂದು ತಿಳಿದುಬಂದಿದೆ. ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದ ಈ ದಂಪತಿ 52 ವರ್ಷದ ಹಿಂದೆ ಡೈವರ್ಸ್ ತೆಗೆದುಕೊಂಡಿದ್ದರು.

ನ್ಯಾಯಾಲಯದ ಆದೇಶದಂತೆ ಪತಿ ಬಸಪ್ಪ ಅಗಡಿ ಪ್ರತಿ ತಿಂಗಳು ಕಲ್ಲವ್ವಳಿಗೆ ಜೀವನಾಂಶ ನೀಡುತ್ತಿದ್ದರು. ಆದರೆ, ಕೆಲ ತಿಂಗಳಿನಿಂದ ಜೀವನಾಂಶ ಕೊಡುವಲ್ಲಿ ಬಸಪ್ಪ ವಿಫಲವಾಗಿದ್ದರು. ಈ ಹಿನ್ನೆಲೆ ಕಲ್ಲವ್ವ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸ್ಥಳೀಯ ಹಿರಿಯ ದಿವಾನಿ ನ್ಯಾಯಾಲಯ ರಾಷ್ಟ್ರೀಯ ಮೆಗಾ ಲೋಕ ಅದಾಲತ್‍ನಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ತೀರ್ಮಾನಿಸಿತ್ತು.

ಜೀವನಾಂಶ ಕೊಡುವಲ್ಲಿ ವಿಫಲವಾದ ಬಸಪ್ಪ ಅಗಡಿಯನ್ನೂ ನ್ಯಾಯಾಧೀಶರು ಕರೆಯಿಸಿದ್ದರು. ವೃದ್ಧರಾದ ದಂಪತಿ ನ್ಯಾಯಾಲಯದ ಮೆಟ್ಟಿಲು ಹತ್ತಿರೋದನ್ನು ನೋಡಿ ನ್ಯಾಯಾಧೀಶರಿಗೂ ಅಚ್ಚರಿಯಾಯಿತು. ರಾಜಿ ಪಂಚಾಯಿತಿ ಮೂಲಕ ನ್ಯಾಯಾಧೀಶರು ಈ ದಂಪತಿಯನ್ನು ಒಂದು ಮಾಡಿದ್ದಾರೆ. ವಕೀಲರಾದ ಜಿ.ಆರ್ ಗಾಣಗೇರ ಅವರು ವಕಾಲತ್ತು ವಹಿಸಿದ್ದರು.     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News