ಹೊಸ ಪಠ್ಯವನ್ನು ರದ್ದುಪಡಿಸಿ ಹಳೆಯ ಪಠ್ಯವನ್ನು ಮುಂದುವರಿಸುವುದೊಂದೇ ಪರಿಹಾರ: ಸಿದ್ದರಾಮಯ್ಯ

Update: 2022-06-27 17:52 GMT

ಬೆಂಗಳೂರು, ಜೂ.27: ಪಠ್ಯಪುಸ್ತಕ ಪರಿಷ್ಕರಣೆಯ ಹೆಸರಿನಲ್ಲಿ ಶಿಕ್ಷಣವನ್ನು ಕೇಸರಿಕರಣ ಮಾಡಲಾಗುತ್ತಿದೆ ಎಂದು ರಾಜ್ಯದಲ್ಲಿ ವಿವಾದವು ಸೃಷ್ಟಿಯಾದ ಬಳಿಕ ಇದೀಗ ತಪ್ಪೊಪ್ಪಿಕೊಂಡ ರಾಜ್ಯ ಸರಕಾರವು ಸಮಿತಿ ತಿದ್ದುಪಡಿ ಮಾಡಿದ್ದ ಪಠ್ಯಗಳನ್ನು ಮರು ಪರಿಷ್ಕರಿಸಲು ನಿರ್ಧರಿಸಿದೆ. 

ಈ ಬೆನ್ನಲ್ಲೇ  ಸರಣಿ ಟ್ವೀಟ್ ಮಾಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹೊಸ ಪಠ್ಯವನ್ನು ರದ್ದುಪಡಿಸಿ ಹಳೆಯ ಪಠ್ಯವನ್ನೇ ಮುಂದುವರಿಸುವುದೊಂದೇ ಸರ್ಕಾರದ ಮುಂದಿರುವ ಮಾರ್ಗ ಎಂದು ಹೇಳಿದ್ದಾರೆ.

'ಪರಿಷ್ಕೃತ ಪಠ್ಯಗಳಲ್ಲಿನ ಕೆಲವು ತಪ್ಪುಗಳನ್ನು ಸರಿಪಡಿಸಿ ಕಳೆದುಹೋದ ಮಾನ ಕಾಪಾಡುವ ವ್ಯರ್ಥ ಪ್ರಯತ್ನವನ್ನು ರಾಜ್ಯ ಬಿಜೆಪಿ ಸರ್ಕಾರ ಮಾಡಿದೆ. ಹಾಕಿರುವ ತೇಪೆಗಳಿಗಿಂತ ಉಳಿದಿರುವ ತೂತುಗಳೇ ಹೆಚ್ಚಾಗಿವೆ. ಹೊಸ ಪಠ್ಯವನ್ನು ರದ್ದುಪಡಿಸಿ ಹಳೆಯ ಪಠ್ಯವನ್ನೇ ಮುಂದುವರಿಸುವುದೊಂದೇ ಈಗಿನ ಪರಿಹಾರ' ಎಂದು ಹೇಳಿದ್ದಾರೆ.

'ಪರಿಷ್ಕೃತ ಪಠ್ಯಕ್ಕೆ ವಿರೋಧ ವ್ಯಕ್ತವಾದ ನಂತರ ರಾಜ್ಯ ಸರ್ಕಾರ ದಿನಕ್ಕೊಂದು ಹೇಳಿಕೆ ನೀಡಿ ತನ್ನ ತಪ್ಪನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಪಠ್ಯ ಪರಿಷ್ಕರಣೆಗೆ ರಚನೆಗೊಂಡ ಸಮಿತಿಯನ್ನೇ ರದ್ದುಗೊಳಿಸಿದ ನಂತರ ಅದರ ಶಿಫಾರಸಿನ ಪಠ್ಯ ಕೂಡಾ ರದ್ದಿಗೆ ಸೇರಬೇಕಲ್ಲವೇ? ' ಎಂದು ಪ್ರಶ್ನಸಿದ್ದಾರೆ.

'ರಾಜ್ಯ ಸರ್ಕಾರದ ಆದೇಶ ಇಲ್ಲದೆ ರಚನೆಗೊಂಡ ರೋಹಿತ ಚಕ್ರತೀರ್ಥ ಎಂಬ ಬುದ್ಧಿಗೇಡಿಯ ಅಧ್ಯಕ್ಷತೆಯ ಸಮಿತಿಯೇ ಅಕ್ರಮವಾಗಿರುವಾಗ, ಆ ಸಮಿತಿ ಪರಿಷ್ಕೃರಿಸಿರುವ ಪಠ್ಯ ಹೇಗೆ ಕ್ರಮಬದ್ಧವಾಗಲು ಸಾಧ್ಯ?' ಎಂದು ಟ್ವೀಟಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News