ಮಲೆನಾಡಿನಲ್ಲಿ ಮಳೆ ಅಭಾವ: ರೈತರಲ್ಲಿ ಆತಂಕ

Update: 2022-06-28 02:08 GMT
ಸಾಂದರ್ಭಿಕ ಚಿತ್ರ (PTI)

ಮೈಸೂರು: ಉತ್ತಮ ಮುಂಗಾರುಪೂರ್ವ ಮಳೆಯ ಬಳಿಕ ಮಲೆನಾಡು ಪ್ರದೇಶ ತೀವ್ರ ಮಳೆ ಅಭಾವ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಇದು ಕೃಷಿ ಚಟುವಟಿಕೆಗಳು ಕುಂಠಿತಗೊಳ್ಳಲು ಕಾರಣವಾಗಿದೆ. ಮೈಸೂರು ವಿಭಾಗದಲ್ಲಿ ಶೇಕಡ 50ರಷ್ಟು ಮಳೆ ಅಭಾವ ತಲೆದೋರಿದ್ದು, ರೈತರು ಆತಂಕಿತರಾಗಿದ್ದರೆ ಎಂದು timesofindia ವರದಿ ಮಾಡಿದೆ.

ನೈರುತ್ಯ ಮುಂಗಾರು ಜೂನ್ 16ರ ವೇಳೆಗೆ ರಾಜ್ಯದ ಎಲ್ಲ ಪ್ರದೇಶಗಳನ್ನು ವ್ಯಾಪಿಸಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (ಕೆಎಸ್‍ಎನ್‍ಡಿಎಂಸಿ) ವರದಿಯ ಪ್ರಕಾರ, ಜೂನ್ 1 ರಿಂದ 25ರವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಶೇಕಡ 68, ಕೊಡಗಿನಲ್ಲಿ 68%, ಚಿಕ್ಕಮಗಳೂರಿನಲ್ಲಿ 47%, ಹಾಸನದಲ್ಲಿ 7% ಮಳೆ ಅಭಾವ ಉಂಟಾಗಿದೆ. ಪ್ರಮುಖ ಮಲೆನಾಡು ತಾಲೂಕುಗಳಾದ ಕೊಪ್ಪ, ತೀರ್ಥಹಳ್ಳಿ, ಹೊಸನಗರ, ಮಡಿಕೇರಿ ಮತ್ತು ವಿರಾಜಪೇಟೆ ತಾಲೂಕುಗಳಲ್ಲಿ ಶೇಕಡ 60ರಷ್ಟು ಅಭಾವ ಕಂಡುಬಂದಿದೆ.

"ಇದುವರೆಗೂ ನಮಗೆ ಉತ್ತಮ ಮಳೆಯಾಗಿಲ್ಲ. ಸಾಮಾನ್ಯ ಅಥವಾ ಹದ ಮಳೆಯಾಗಿದೆ. ಇದುವರೆಗೆ ಬೆಳೆಗಳ ನಾಟಿಗೆ ಇದರಿಂದ ತೊಂದರೆಯಾಗಿಲ್ಲ. ಆದರೆ ಮುಂದಿನ ದಿನಗಳ ಬಗ್ಗೆ ಭೀತಿಗೆ ಕಾರಣವಾಗಿದೆ" ಎಂದು ಆಲೂರಿನ ರೈತ ಚನ್ನಕೇಶ್ವರ ಗೌಡ ಹೇಳುತ್ತಾರೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಪ್ರಾಧಿಕಾರದ ಪ್ರಕಾರ, ಇದುವರೆಗೆ ಮುಂಗಾರು ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ದುರ್ಬಲವಾಗಿದೆ. ಸಾಮಾನ್ಯವಾಗಿ ಜೂನ್‍ನಲ್ಲಿ ಶೇಕಡ 30ರಷ್ಟು ಮಳೆ ಬೀಳುತ್ತದೆ. ಆದರೆ ಈ ಬಾರಿ ಇದು ದುರ್ಬಲವಾಗಿದೆ. ಮುಂಗಾರುಪೂರ್ವ ಮಳೆಯಿಂದ ಅಣೆಕಟ್ಟುಗಳಿಗೆ ನೀರು ಹರಿಯಲು ಆರಂಭವಾಗಿದ್ದು, ಸರೋವರಗಳಲ್ಲಿ ನೀರಿನ ಮಟ್ಟ ಉತ್ತಮವಾಗಿದೆ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News