ಸತ್ಯ ಶೋಧನಾ ಸಮಿತಿಯಿಂದ ಕೋಡಿಹಳ್ಳಿ ಚಂದ್ರಶೇಖರ್ ಮೇಲಿನ ಆರೋಪಗಳ ತನಿಖೆ: ಬಸವರಾಜಪ್ಪ

Update: 2022-06-28 13:55 GMT
ಬಸವರಾಜಪ್ಪ |  ಕೋಡಿಹಳ್ಳಿ ಚಂದ್ರಶೇಖರ್

ಚಿಕ್ಕಮಗಳೂರು, ಜೂ.28: ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಮಾಜಿ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಸಂಘದಿಂದ ಉಚ್ಛಾಟನೆ ಮಾಡಲಾಗಿದೆ. ಅವರ ಮೇಲಿನ ಆರೋಪಗಳ ತನಿಖೆಗೆ ಸತ್ಯ ಶೋಧನಾ ಸಮಿತಿಯನ್ನು ನೇಮಿಸಲಾಗಿದ್ದು, ಸಂಘದ ನೂತನ ರಾಜ್ಯಾಧ್ಯಕ್ಷನಾಗಿ ರಾಜ್ಯದ್ಯಂತ ಹಲವು ಬಣಗಳಾಗಿ ವಿಂಗಡಣೆಯಾಗಿರುವ ರೈತಸಂಘಟನೆಗಳನ್ನು ಒಗ್ಗೂಡಿಸಲು ಶ್ರಮಿಸುತ್ತಿದ್ದೇನೆ ಎಂದು ಸಂಘದ ನೂತನ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಹಿಂದಿನ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದ ತಕ್ಷಣ ತುರ್ತುಸಭೆ ನಡೆಸಿ ಸರ್ವ ಸದಸ್ಯರ ಒಮ್ಮತದ ನಿರ್ಣಯದೊಂದಿಗೆ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಸಂಘದಿಂದ ಉಚ್ಛಾಟನೆ ಮಾಡಲಾಗಿದೆ. ಸಂಘದ ಗೌರವಾಧ್ಯಕ್ಷನಾಗಿದ್ದ ತನಗೆ ಸರ್ವ ಸದಸ್ಯರು ಸರ್ವಾನುಮತದಿಂದ ರಾಜ್ಯಾಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ ಎಂದರು.

ಕೋಡಿಹಳ್ಳಿ ಚಂದ್ರಶೇಖರ್ ಅವರ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುವುದಕ್ಕೂ ಮುನ್ನ ನಾವು ಅವರ ಬಳಿ ಅನೇಕ ಬಾರಿ ಸಂಘದ ಲೆಕ್ಕಪತ್ರಗಳನ್ನು ಕೇಳಿದ್ದೆವು. ಆದರೆ ಇದಕ್ಕೆ ಅವರು ಸಮರ್ಪಕ ಉತ್ತರ ನೀಡುತ್ತಿರಲಿಲ್ಲ. ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದರು. ಅವರ ನಡೆಯಿಂದ ಅನೇಕರು ಸಂಘಟನೆ ತೊರೆದಿದ್ದಾರೆ. ರೈತ ಸಂಘಟನೆ ಕುಟುಂಬದ ವ್ಯವಹಾರವಲ್ಲ. ಇದು ಸಾರ್ವಜನಿಕ ಸಂಘಟನೆಯಾಗಿದ್ದು, ಕೋಡಿಹಳ್ಳಿ ಚಂದ್ರಶೇಖರ್ ಅವರು 40ಲಕ್ಷ ರೂ. ಮೌಲ್ಯದ ಕಾರು ಹೊಂದಿದ್ದಾರೆ. ಬೆಂಗಳೂರಿನಲ್ಲಿ 45 ಲಕ್ಷ ರೂ. ವೆಚ್ಚದಲ್ಲಿ ಸಂಘದ ಕಚೇರಿಯನ್ನು ಲೀಸ್‍ಗೆ ಪಡೆದಿದ್ದಾರೆ. ರೈತರ ಸಾಲಮನ್ನಾ ಅರ್ಜಿಗಳಿಂದ ಕೋಟ್ಯಂತರ ರೂ. ಸಂಗ್ರಹಿಸಿದ್ದಾರೆ. ಈ ಬಗ್ಗೆ ಇದುವರೆಗೂ ಅವರು ಲೆಕ್ಕ ನೀಡಿಲ್ಲ. ಕೋಡಿಹಳ್ಳಿ ಚಂದ್ರಶೇಖರ್ ಅವರು ಕೂಡಲೇ ಈ ಸಂಬಂಧದ ಲೆಕ್ಕಪತ್ರಗಳನ್ನು ಬಹಿರಂಗಪಡಿಸಬೇಕೆಂದರು.

ಕೋಡಿಹಳ್ಳಿ ಚಂದ್ರಶೇಖರ್ ಅವರು ಲೆಕ್ಕಪತ್ರವನ್ನು ಬಹಿರಂಗಪಡಿಸಿ ಭ್ರಷ್ಟಾಚಾರದ ಆರೋಪದಿಂದ ಹೊರಬಂದು ಹಸಿರು ಶಾಲು ಹಾಕಿಕೊಳ್ಳಲಿ, ಅಲ್ಲಿಯವರೆಗೂ ಅವರು ಹಸಿರು ಶಾಲು ಹಾಕಿಕೊಳ್ಳಲು ಅರ್ಹರಲ್ಲ. ರೈತಸಂಘ ನೂರಾರು ಜನರ ತ್ಯಾಗ ಬಲಿದಾನದಿಂದ ಹುಟ್ಟಿದ ಸಂಘಟನೆಯಾಗಿದ್ದು, ಸಂಘ ಯಾರ ಸ್ವತ್ತಲ್ಲ, ಕೋಡಿಹಳ್ಳಿಗೆ ಸಂಘದ ಮೇಲೆ ಗೌರವ ಇದ್ದಲ್ಲಿ ಹಸಿರು ಶಾಲು ತೆಗೆದಿಟ್ಟು ಆರೋಪ ಮುಕ್ತರಾದ ಬಳಿಕ ಮತ್ತೆ ರೈತಸಂಘ ಸೇರಿಕೊಳ್ಳಲು ನಮ್ಮ ಅಭ್ಯಂತರ ಇಲ್ಲ ಎಂದ ಅವರು, ಕೋಡಿಹಳ್ಳಿ ಚಂದ್ರಶೇಖರ್ ಮೇಲಿನ ಭ್ರಷ್ಟಾಚಾರದ ಆರೋಪದ ಬಗ್ಗೆ ರೈತ ಮುಖಂಡ ಡಾ.ಚಿಕ್ಕಸ್ವಾಮಿ ಅಧ್ಯಕ್ಷತೆಯಲ್ಲಿ ಸತ್ಯಶೋಧನ ಸಮಿತಿಯನ್ನು ರಚಿಸಿದ್ದು, ಈ ಸಮಿತಿ ಪರಿಶೀಲನೆ ನಡೆಸಿ ವರದಿ ನೀಡಲಿದೆ ಎಂದರು.

ಪ್ರಸಕ್ತ ಕಾರಣಾಂತಗಳಿಂದ ಕರ್ನಾಟಕ ರಾಜ್ಯ ರೈತ ಸಂಘ ಹಲವು ಬಣಗಳಾಗಿ ವಿಂಗಡಣೆಯಾಗಿದೆ. ಎಲ್ಲಾ ಸಂಘಟನೆಗಳನ್ನು ಒಂದು ವೇದಿಕೆಗೆ ತಂದು ರೈತ ಸಂಘವನ್ನು ಹಿಂದಿನಂತೆ ಬಲಿಷ್ಟಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ನಿಟ್ಟಿನಲ್ಲಿ ಕೆಲವು ರೈತ ಸಂಘಟನೆಗಳ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ವಿಲೀನಕ್ಕೆ ಮುಂದಾಗಿದ್ದಾರೆ. ಕೆಲವರು ರೈತ ಸಂಘಟನೆಗಳ ಒಕ್ಕೂಟ ರಚಿಸಿಕೊಂಡು ಹೋರಾಟಗಳನ್ನು ನಡೆಸುವಂತೆಯೂ ಸೂಚನೆ, ಸಲಹೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ರೈತ ಸಂಘಗಳ ಮುಖಂಡರೊಂದಿಗೆ ಚರ್ಚಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುವುದಾಗಿ ಹೇಳಿದರು.

ರಸಗೊಬ್ಬರ ದಾಸ್ತಾನು ಮಗಳಿಗೆಗಳಲ್ಲಿ ರೈತರಿಗೆ ಭಾರೀ ಅನ್ಯಾಯವಾಗುತ್ತಿದೆ. ಕಳಪೆ ರಸಗೊಬ್ಬರ ವಿತರಣೆ ಮಾಡಲಾಗುತ್ತಿದೆ. ಪ್ರತೀ ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ದರಪಟ್ಟಿ, ದಾಸ್ತಾನು ಪಟ್ಟಿಯನ್ನು ಹಾಕಬೇಕು. ತೂಕಮಾಡಿ ರಸಗೊಬ್ಬರವನ್ನು ರೈತರಿಗೆ ವಿತರಣೆ ಮಾಡಬೇಕೆಂದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಡಿ.ಆರ್.ದುಗ್ಗಪ್ಪಗೌಡ, ಕಡೂರು ತಾಲೂಕು ಅಧ್ಯಕ್ಷ ನಿರಂಜನ್ ಮೂರ್ತಿ, ತರೀಕೆರೆ ತಾಲೂಕು ಅಧ್ಯಕ್ಷ ಓಂಕಾರಮೂರ್ತಿ, ಬಸವರಾಜ್, ಮಂಜೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ದಿಲ್ಲಿ ಮಾದರಿಯಲ್ಲಿ ರಾಜ್ಯದಲ್ಲೂ ರೈತ ಹೋರಾಟ: 

ರಾಜ್ಯ ಸರಕಾರ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ನೀಡಿರುವ ಪಠ್ಯದಲ್ಲಿ ಕೆಲ ಪರಿಷ್ಕರಣೆ ಮಾಡುವುದಾಗಿ ಹೇಳಿದೆ, ಆದರೆ ಇದು ಪರಿಪೂರ್ಣವಾಗಿಲ್ಲ, ಈ ಸಮಿತಿ ಪರಿಷ್ಕರಿಸಿದ ಪಠ್ಯದಲ್ಲಿ ಅನೇಕ ವಿಚಾರಗಳ ಪರಿಷ್ಕರಣೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಮುಕ್ತ ಮನಸ್ಸಿನಿಂದ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಅಲ್ಲದೇ ಕೃಷಿ ತಿದ್ದುಪಡಿ ಮಸೂದೆಗಳನ್ನು ಕೇಂದ್ರ ಸರಕಾರ ರೈತ ಹೋರಾಟಕ್ಕೆ ಮಣಿದು ಹಿಂಪಡೆದಿದೆ. ಆದರೆ ರಾಜ್ಯ ಸರಕಾರ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಭೂ ಸ್ವಾಧೀನ ಕಾಯ್ದೆಗಳಿಗೆ ಮಾಡಿರುವ ತಿದ್ದುಪಡಿಯನ್ನೂ ರದ್ದುಪಡಿಸುವುದಾಗಿ ಹೇಳಿ ಇನ್ನೂ ರದ್ದು ಮಾಡಿಲ್ಲ. ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಕ್ರಮವಹಿಸದಿದ್ದಲ್ಲಿ ಎಲ್ಲ ರೈತ ಸಂಘಟನೆಗಳನ್ನು ಒಗ್ಗೂಡಿಸಿ ದಿಲ್ಲಿ ಮಾದರಿಯ ರೈತ ಹೋರಾಟದಂತೆ ಹೋರಾಟ ರೂಪಿಸಲಾಗುವುದು.

- ಎಚ್.ಆರ್.ಬಸವರಾಜಪ್ಪ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News