ರಾಜ್ಯದಲ್ಲಿ ಜು.1ರಿಂದ ವಿದ್ಯುತ್ ದರ ಹೆಚ್ಚಳ; ಗ್ರಾಹಕರಿಂದ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ ಸಂಗ್ರಹ

Update: 2022-06-28 13:08 GMT

ಬೆಂಗಳೂರು, ಜೂ.28: ಅಗತ್ಯ ವಸ್ತುಗಳು, ಪೆಟ್ರೋಲ್, ಡಿಸೇಲ್ ದರ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರ ಮೇಲೆ ರಾಜ್ಯ ಸರಕಾರ ಮತ್ತೊಂದು ಹೊರೆ ಹಾಕಿದ್ದು, ಜುಲೈ 1ರಿಂದ ಅನ್ವಯವಾಗುವಂತೆ ಪ್ರತಿ ತಿಂಗಳು 100 ಯೂನಿಟ್ ವಿದ್ಯುತ್ ಬಳಸುವ ಗ್ರಾಹಕರಿಂದ ಹೆಚ್ಚುವರಿಯಾಗಿ ಪ್ರತಿ ಯೂನಿಟ್‌ಗೆ 19 ರಿಂದ 31 ಪೈಸೆ ಸಂಗ್ರಹಿಸಲು ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್‌ಸಿ) ನಿರ್ಧರಿಸಿದೆ.

2021–22ನೇ ಸಾಲಿನ ಕೊನೆಯ ಎರಡು ತ್ರೈಮಾಸಿಕದಲ್ಲಿ ಕಲ್ಲಿದ್ದಲು ದರ ಹೆಚ್ಚಳವಾಗಿದೆ. ಹೀಗಾಗಿ, ಕಲ್ಲಿದ್ದಲು ಖರೀದಿಗೆ ಮಾಡಿರುವ ವೆಚ್ಚವನ್ನು ಗ್ರಾಹಕರಿಂದ ಸಂಗ್ರಹಿಸಲು ಅವಕಾಶ ಮಾಡಿಕೊಡುವಂತೆ ಎಸ್ಕಾಂಗಳು ಕೆಇಆರ್‌ಸಿಗೆ ಪಸ್ತಾವನೆ ಸಲ್ಲಿಸಿದ್ದವು. ಅದರ ಹಿನ್ನೆಲೆಯಲ್ಲಿ ಜು.1ರಿಂದ ಡಿ.31ರವರೆಗೆ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ(ಎಫ್‌ಎಸಿ) ಸಂಗ್ರಹಿಸಲು ಅನುವು ಮಾಡಿಕೊಡಲಾಗಿದೆ.

ಈ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕವು ಮೆಸ್ಕಾಂ ವಸೂಲಿ ಮಾಡುವ ಮಂಗಳೂರು ವಿಶೇಷ ಆರ್ಥಿಕ ವಲಯ(ಎಸ್‌ಇಝೆಡ್)ಕ್ಕೂ ಅನ್ವಯವಾಗಲಿದೆ. ಅದೇ ರೀತಿ ಹೆಸ್ಕಾಂ ಸಂಗ್ರಹಿಸುವ ದರಗಳು ಹುಕ್ಕೇರಿ ಆರ್‌ಇಸಿಎಸ್ ಮತ್ತು ಎಇಕ್ಯೂಯುಎಸ್ ವಿಶೇಷ ಆರ್ಥಿಕ ವಲಯಕ್ಕೂ ಅನ್ವಯವಾಗಲಿದೆ ಎಂದು ಕೆಇಆರ್‌ಸಿ ಆದೇಶದಲ್ಲಿ ತಿಳಿಸಲಾಗಿದೆ.

ಎಸ್ಕಾಂ ಪ್ರಸ್ತಾವನೆಗಳು: ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ(ಎಫ್‌ಎಸಿ)ವನ್ನು ಪ್ರತಿ ಯೂನಿಟ್‌ಗೆ ಬೆಸ್ಕಾಂ-55.28 ಪೈಸೆ, ಮೆಸ್ಕಾಂ-38.98 ಪೈಸೆ, ಸಿಇಎಸ್‌ಸಿ-40.47 ಪೈಸೆ, ಹೆಸ್ಕಾಂ-49.54 ಹಾಗೂ ಜೆಸ್ಕಾಂ-39.36 ಪೈಸೆ ಹೆಚ್ಚಳ ಮಾಡುವಂತೆ ಕೆಇಆರ್‌ಸಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದವು.

ಈ ಸಂಬಂಧ ಕೆಇಆರ್‌ಸಿ ಅಧ್ಯಕ್ಷ ಪಿ.ರವಿಕುಮಾರ್ ನೇತೃತ್ವದಲ್ಲಿ ಜೂ.20ರಂದು ನಡೆದ ಆಯೋಗದ ಸಭೆಯಲ್ಲಿ ಚರ್ಚಿಸಿ, ಎಸ್ಕಾಂಗಳು ಸಲ್ಲಿಸಿರುವ ದರ ಹೆಚ್ಚಳದ ಪ್ರಸ್ತಾವನೆಯನ್ನು ಗಣನೆಗೆ ತೆಗೆದುಕೊಂಡು, 100 ಯೂನಿಟ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಸಲ್ಪಡುವ ಪ್ರತಿಯೂನಿಟ್ ವಿದ್ಯುತ್‌ಗೆ 19 ರಿಂದ 31 ಪೈಸೆಯನ್ನು ಗ್ರಾಹಕರಿಂದ ಸಂಗ್ರಹಿಸಲು ವಿವಿಧ ಎಸ್ಕಾಂಗಳಿಗೆ ಅನ್ವಯಿಸುವಂತೆ ಹೆಚ್ಚಳ ಮಾಡಲಾಗಿದೆ.

ಹೆಚ್ಚಳವಾಗಿರುವ ದರ: ಬೆಸ್ಕಾಂ-31 ಪೈಸೆ, ಮೆಸ್ಕಾಂ-21 ಪೈಸೆ, ಸಿಇಎಸ್‌ಸಿ-19 ಪೈಸೆ, ಹೆಸ್ಕಾಂ-27 ಪೈಸೆ ಹಾಗೂ ಜೆಸ್ಕಾಂ-26 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. ಕಳೆದ ಒಂದು ವರ್ಷದಿಂದ ಕಲ್ಲಿದ್ದಲು ಪೂರೈಕೆಯಲ್ಲಿ ಸಮಸ್ಯೆಯಾಗಿತ್ತು. ಅಲ್ಲದೆ, ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆಯ ವೆಚ್ಚವು ಹೆಚ್ಚಾಗಿದೆ. ಆದುದರಿಂದ, ಎಫ್‌ಎಸಿ ಸಂಗ್ರಹಕ್ಕೆ ಎಸ್ಕಾಂಗಳಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಕೆಇಆರ್‌ಸಿ ತಿಳಿಸಿದೆ.


ಎಸ್ಕಾಂಗಳು ಅನುಭವಿಸಿರುವ ನಷ್ಟದ ಪ್ರಮಾಣವನ್ನು ಪರಿಗಣಿಸಿ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ(ಎಫ್‌ಎಸಿ) ಸಂಗ್ರಹಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕಲ್ಲಿದ್ದಲು ದರ ಹಾಗೂ ವಿದ್ಯುತ್ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಆದುದರಿಂದ, ಎಫ್‌ಎಸಿ ಸಂಗ್ರಹಕ್ಕೆ ಆದೇಶ ನೀಡಲಾಗಿದೆ. ಇದೊಂದು ತಾತ್ಕಾಲಿಕ ಪ್ರಕ್ರಿಯೆಯಾಗಿದೆ.

- ಪಿ.ರವಿಕುಮಾರ್, ಕೆಇಆರ್‌ಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News