ಪರಿಶಿಷ್ಟ ಸಮುದಾಯದ ಜನಪ್ರತಿನಿಧಿಗಳು ಪಕ್ಷದ ಗುಲಾಮರಾಗಿದ್ದಾರೆ: ಜ್ಞಾನಪ್ರಕಾಶ್ ಸ್ವಾಮೀಜಿ

Update: 2022-06-28 12:56 GMT

ಬೆಂಗಳೂರು, ಜೂ.28: ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಧರಣಿ 150 ದಿನ ಪೂರೈಸುವ ಮುನ್ನ ಸರಕಾರವು ಎಚ್ಚೆತ್ತುಕೊಂಡು ಪರಿಶಿಷ್ಟರ ಮೀಸಲಾತಿಯನ್ನು ಹೆಚ್ಚಳ ಮಾಡದಿದ್ದಲ್ಲಿ, ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮೀಜಿ, ಜ್ಞಾನಪ್ರಕಾಶ್ ಮಹಾಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ, ಬಸವನಾಗಿದೇವ ಮಹಾಸ್ವಾಮೀಜಿ, ಸಂತಸೇವಾಲಾಲ್ ಮಹಾಸ್ವಾಮೀಜಿ, ಇಮ್ಮಡಿ ಬಸವ ಮೇದಾರಕೇತೇಶ್ವರ ಸ್ವಾಮೀಜಿ, ಶಿವಲಿಂಗ ಶಿವಯೋಗಿ ಸ್ವಾಮೀಜಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ನಗರದ ಫ್ರೀಡಂಪಾರ್ಕ್‍ನಲ್ಲಿ ಜ್ಞಾನಪ್ರಕಾಶ್ ಮಹಾಸ್ವಾಮೀಜಿ ಮಾತನಾಡಿ, ಪರಿಶಿಷ್ಟ ಸಮುದಾಯಗಳ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಮಹರ್ಷಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರ ಹೋರಾಟ 150 ದಿನಕ್ಕೆ ಕಾಲಿಡುವ ಮುನ್ನ ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿದರು.

ಸರಕಾರವು ಪರಿಶಿಷ್ಟ ಸಮುದಾಯಗಳನ್ನು ಕಡೆಗಣಿಸುತ್ತಿದೆ. ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಯ ಬಳಿಗೆ ಪರಿಶಿಷ್ಟ ಸಮುದಾಯಗಳ ಜನಪ್ರತಿನಿಧಿಗಳನ್ನು ಕಳುಹಿಸಿ ಕಣ್ಣೊರೆಸುವ ಪ್ರಯತ್ನ ಮಾಡುತ್ತಿದೆ. ಪರಿಶಿಷ್ಟ ಸಮುದಾಯದವರು ಮೀಸಲಾತಿಯನ್ನು ಹೆಚ್ಚಿಸಿಲ್ಲ ಎಂದು ತಮ್ಮ ಸಮುದಾಯದ ಜನಪ್ರತಿನಿಧಿಗಳೊಂದಿಗೆ ಜಗಳವಾಡುವಂತಹ ಚಾಣಕ್ಯ ನೀತಿಯನ್ನು ಸರಕಾರ ಅನುಸರಿಸುತ್ತಿದ್ದಂತಿದೆ. ಆದರೆ ಸಮುದಾಯದ ಜನರು ತಮ್ಮ ಸಮುದಾಯದ ಜನಪ್ರತಿನಿಧಿಗಳು ಪಕ್ಷದ ಗುಲಾಮರಾಗಿದ್ದಾರೆ ಎಂದು ಮನಗಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಪರಿಶಿಷ್ಟ ಸಮುದಾಯಗಳ ಮೀಸಲಾತಿಯನ್ನು ಹೆಚ್ಚಳ ಮಾಡದಿದ್ದರೆ, ನಮ್ಮ ಸಮುದಾಯದ ಜನಪ್ರತಿನಿಧಿಗಳ ವಿರುದ್ಧ ಹೋರಾಟ ಮಾಡುವುದಿಲ್ಲ. ಬದಲಾಗಿ ಸರಕಾರದ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.  

ದಲಿತ ಸಂಘರ್ಷ ಸಮಿತಿಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನ್ಯಾ. ನಾಗಮೋಹನ್ ದಾಸ್ ವರಿದಿಯ ಶಿಫಾರಸ್ಸುಗಳನ್ನು ಅನುಷ್ಠಾನ ಮಾಡುವುದಾಗಿ ಭರವಸೆ ನೀಡಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫ್ರೀಡಂಪಾರ್ಕ್‍ಗೆ ಬಂದು, ಧರಣಿನಿರತ ಸ್ವಾಮೀಜಿಯನ್ನು ಭೇಟಿ ಮಾಡಿ 15 ದಿನದಲ್ಲಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಈ ಭರವಸೆಗಳು ಕೇವಲ ಸುಳ್ಳು ಭರವಸೆಗಳಾಗಿ ಉಳಿದಿವೆ ಎಂದು ಬೇಸರ ವ್ಯಕ್ತಪಡಿಸಿದರು. 

ಕರ್ನಾಟಕ ವಾಲ್ಮೀಕಿ ನಾಯಕ ಪರಿಷತ್ತಿನ ರಾಜ್ಯಾಧ್ಯಕ್ಷ ಬಿ.ವಿ. ಬಸವರಾಜ ನಾಯಕ ಮಾತನಾಡಿ, ಕರ್ನಾಟಕ ಸ್ವಾಭಿಮಾನಿ ಎಸ್ಸಿ-ಎಸ್ಟಿ ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರೀಯಾ ಸಮಿತಿಯು ಮೀಸಲಾತಿ ಹೆಚ್ಚಳ ಕುರಿತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯಗಳಲ್ಲಿ ಜನಜಾಗೃತಿಯನ್ನು ಮೂಡಿಸಲಾಗುತ್ತಿದೆ. ಕರಪತ್ರಗಳನ್ನು ಹಂಚಿಕೆ ಮಾಡಿ ಪ್ರತಿಭಟನೆಗೆ ಸಿದ್ಧಗೊಳಿಸಲಾಗುತ್ತಿದೆ ಎಂದರು.  

ಗೋಷ್ಠಿಯಲ್ಲಿ ಬಹುಜನ ಸಮಾಜಪಕ್ಷದ ರಾಜ್ಯ ಸಂಚಾಲಕ ಮಾರಸಂದ್ರ ಮುನಿಯಪ್ಪ, ಎಂ ವೆಂಕಟಸ್ವಾಮಿ, ಎಂ. ಗೋಪಿನಾಥ್, ಆರ್. ಮುನಿಯಪ್ಪ, ಎನ್. ಮೂರ್ತಿ, ಪಿ.ಮೂರ್ತಿ ಹಾಗೂ ಮೋಹನರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News