ಬಿಬಿಎಂಪಿ ಮುಖ್ಯ ಆಯುಕ್ತ, ಎಂಜಿನಿಯರ್‌ಗಳ ಅಮಾನತಿಗೆ ಆದೇಶಿಸುವ ಎಚ್ಚರಿಕೆ ನೀಡಿದ ಹೈಕೋರ್ಟ್

Update: 2022-06-28 14:47 GMT

ಬೆಂಗಳೂರು, ಜೂ.28: ನಗರ ವ್ಯಾಪ್ತಿಯಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ವಿಫಲವಾಗಿರುವ ಬಿಬಿಎಂಪಿ ಮುಖ್ಯ ಆಯುಕ್ತರು, ಎಂಜಿನಿಯರ್ ಸೇರಿ ಎಲ್ಲರನ್ನೂ ಅಮಾನತುಗೊಳಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕಾಗುತ್ತದೆ ಎಂದು ಹೈಕೋರ್ಟ್ ಮಂಗಳವಾರ ಎಚ್ಚರಿಕೆ ನೀಡಿದೆ.

ನಗರ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚಲು ಸರಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸಬೇಕು ಎಂದು ಕೋರಿ ವಿಜಯನ್ ಮೆನನ್ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಪದೇ ಪದೇ ಸಮಯಾವಕಾಶವನ್ನು ಕೇಳುತ್ತೀರಿ, ಆದರೂ ಯಾವುದೇ ಪ್ರಗತಿ ಆಗುವುದಿಲ್ಲ. ಪೈಥಾನ್ ಯಂತ್ರಕ್ಕೆ ಅಗತ್ಯ ಸಹಕಾರವನ್ನೂ ನೀಡುತ್ತಿಲ್ಲ. ಹೀಗೇ ಮುಂದುವರೆದರೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಬಿಬಿಎಂಪಿಗೆ ನ್ಯಾಯಪೀಠವು ಎಚ್ಚರಿಸಿದೆ.

ಯಾವುದೇ ಕಾರಣಕ್ಕೂ ಅಧಿಕಾರಿಗಳನ್ನು ಬಿಬಿಎಂಪಿಯಲ್ಲಿ ಆರಾಮವಾಗಿ ಕಾಲ ಕಳೆಯಲು ಬಿಡುವುದಿಲ್ಲ. ಅಲ್ಲದೆ, ರಸ್ತೆ ಗುಂಡಿಗಳನ್ನು ಮುಚ್ಚಲು ಕಾರ್ಯಾದೇಶ ನೀಡಿದ ಪ್ರತಿಯನ್ನು ಹಾಗೂ ಸರ್ವೇ ವರದಿಯನ್ನು ಜೂ.30ರಂದು ನ್ಯಾಯಪೀಠಕ್ಕೆ ಸಲ್ಲಿಸಬೇಕು. ಅಂದೇ ಬೆಳಗ್ಗೆ 10.30ಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರು, ಅಧಿಕಾರಿಗಳು ಪೀಠದ ಮುಂದೆ ಹಾಜರಾಗಬೇಕೆಂದು ಪೀಠವೂ ಸೂಚನೆ ನೀಡಿದೆ.

ರಸ್ತೆ ಗುಂಡಿ ಮುಚ್ಚಲು ಸೇನೆಗೆ ವಹಿಸಬೇಕಾ: ಹೈಕೋರ್ಟ್ ಎಚ್ಚರಿಕೆ

ನಗರದ ರಸ್ತೆ ಗುಂಡಿ ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಅಸಮರ್ಥವಾಗಿದ್ದರೆ ಹೇಳಿ, ಈ ಕಾರ್ಯವನ್ನು ಸೇನೆಗೆ ನಿಯೋಜಿಸಲಾಗುವುದು. ರಿಪೇರಿಯಾದ ರಸ್ತೆಗಳು ಮಳೆಯಿಂದಾಗಿ ಗುಂಡಿಗಳು ಬೀಳುತ್ತಿವೆ. ಹೀಗೇ ಮುಂದುವರೆದರೇ ವಾಹನ ಸವಾರರು ಓಡಾಡುವುದಾದರೂ ಹೇಗೆ ಎಂದು ಹೈಕೋರ್ಟ್ ನ್ಯಾಯಪೀಠವು ಬಿಬಿಎಂಪಿಯನ್ನು ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News