ಟಿಪ್ಪು ಸುಲ್ತಾನ್ ದಲಿತರಿಗೆ ಭೂಮಿಯ ಹಕ್ಕನ್ನು ನೀಡಿದ ಮೊದಲ ನಾಯಕ: ಬಸವಲಿಂಗ ಸ್ವಾಮೀಜಿ

Update: 2022-06-28 16:00 GMT

ಮೈಸೂರು,ಜೂ.28: ರಾಜ್ಯವಷ್ಟೇ ಅಲ್ಲದೆ ತಾನು ಆಳ್ವಿಕೆ ನಡೆಸಿದ ಕೇರಳ, ತಮಿಳುನಾಡು ಮತ್ತು ಆಂಧ್ರದಲ್ಲಿ ದಲಿತರಿಗೆ ಭೂಮಿಯ ಹಕ್ಕನ್ನು ನೀಡಿದ ಮೊದಲ ನಾಯಕ ಟಿಪ್ಪು ಸುಲ್ತಾನ್ ಎಂದು ಬಸವಲಿಂಗ ಸ್ವಾಮೀಜಿ ಹೇಳಿದರು.

ನಗರದ ಅಶೋಕ ರಸ್ತೆಯ ಮಿಲಾದ್ ಬಾಗ್‍ನಲ್ಲಿ ಹಝ್ರತ್ ಟಿಪ್ಪು ಸುಲ್ತಾನ್ ಶಾಹಿದ್ ವೆಲ್‍ಫೇರ್ ಮತ್ತು ಉರೂಸ್ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ಟಿಪ್ಪು ಸುಲ್ತಾನ್ ಅವರ 230 ನೇ ಗಂಧ ಉರುಸ್‍ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದಲಿತರಿಗೆ ಭೂಮಿಯ ಹಕ್ಕನ್ನು ಮೊದಲು ನೀಡಿದ್ದು ಟಿಪ್ಪು ಸುಲ್ತಾನ್. ರಾಜ್ಯವಷ್ಟೇ ಅಲ್ಲದೆ ಆಳ್ವಿಕೆ ನಡೆಸಿದ ಕೇರಳ ತಮಿಳುನಾಡು ಮತ್ತು ಆಂಧ್ರದಲ್ಲಿ ಎಲ್ಲ ದಲಿತರು ಭೂಮಿಯ ಮಾಲಕತ್ವವನ್ನು ಪಡೆದರು ಎಂದು ತಿಳಿಸಿದರು.

ಟಿಪ್ಪು ಕರ್ನಾಟಕದ ಕೀರ್ತಿಯನ್ನು ಬೆಳಗಿದವರು, ನಂಜನಗೂಡಿಗೆ  ಶ್ರೀಕಂಠೇಶ್ವರ ದೇಗುಲಕ್ಕೆ ಪಚ್ಚೆಲಿಂಗ ನೀಡಿದರು. ಶೃಂಗೇರಿಯನ್ನು ಮರಾಠರು ಲೂಟಿ ಮಾಡಿದಾಗ ಅಲ್ಲಿನ ಸ್ವಾಮೀಜಿಗೆ ರಕ್ಷಣೆ ಕೊಟ್ಟದ್ದಲ್ಲದೆ ಧನ ಕನಕ ನೀಡಿದರು. ಸೌಹಾರ್ಧ ಪರಂಪರೆಯನ್ನು ಕಟ್ಟಿದ ಅವರನ್ನು ಕನ್ನಡಿಗರು ನಿತ್ಯ ಸ್ಮರಿಸಬೇಕು ಎಂದು ಹೇಳಿದರು.

ಚಿಕ್ಕ ಸಂಸ್ಥಾನವಾಗಿದ್ದ ಮೈಸೂರನ್ನು ವಿಸ್ತರಿಸಿದರು. ಕೃಷ್ಣ ನದಿಯಿಂದ ತಮಿಳುನಾಡಿನ ದಿಂಡಿಗಲ್ ವರೆಗೆ ಸಾಮ್ರಾಜ್ಯ ಹಬ್ಬಿತ್ತು. ಮೈಸೂರು ಅರಸರ ಗೌರವಕ್ಕೆ ಅವರೆಂದೂ ಚ್ಯುತಿ ತರಲಿಲ್ಲ. ಆದರೆ ಕೆಲ ಮೂರ್ಖರು ಅಜ್ಞಾನದಿಂದ ವಿರೋಧಿಸುತ್ತಿದ್ದಾರೆ. ಸರಿಯಾಗಿ ಇತಿಹಾಸ ಓದಿಕೊಳ್ಳಬೇಕು ಎಂದರು.

ಟಿಪ್ಪು ಕನ್ನಡ ವಿರೋಧಿಯಲ್ಲ, ಶೃಂಗೇರಿ ಮಠದೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಿದ್ದ ಪತ್ರಗಳು ಲಭ್ಯವಿವೆ. ಅವುಗಳನ್ನು ಓಧಿದರೆ ಟಿಪ್ಪು ಕನ್ನಡದ ಸುಪುತ್ರ ಎಂಬುದು ಅರಿವಾಗುತ್ತದೆ. ಅಬ್ದುಲ್ ಕಲಾಂ ಅವರು ತಮ್ಮ ಪುಸ್ತಕಗಳಲ್ಲಿ ಟಿಪ್ಪು ಹಾಗು ರಾಕೇಟ್ ತಂತ್ರಜ್ಞಾನವನ್ನು ಕೊಂಡಾಡಿದ್ದಾರೆ ಎಂದರು.

ಅಶೋಕ ರಸ್ತೆಯ ಮಿಲಾದ್ ಬಾಗ್‍ನಲ್ಲಿ ಹಝ್ರತ್ ಟಿಪ್ಪು ಸುಲ್ತಾನ್ ಶಾಹಿದ್ ವೆಲ್‍ಫೇರ್ ಮತ್ತು ಉರೂಸ್ ಸಮಿತಿ ವತಿಯಿಂದ ಟಿಪ್ಪು ಸುಲ್ತಾನ್ ಅವರ 230 ನೇ ಗಂಧದ ಉರುಸ್ ಆಚರಣೆ ಪ್ರಯುಕ್ತ ಮಂಗಳವಾರ ಸಂದಲ್ ಗಂಧ ಮೆರವಣಿಗೆ ನಡೆಯಿತು. 

ಮೀನಾ ಬಜಾರ್‍ನ ಟಿಪ್ಪು ಹಾಲ್‍ನಲ್ಲಿ ಬೆಳಿಗ್ಗೆ ಅಹಮದ್ ಶಾಷ ಖಾದ್ರಿ ಅವರ ನೇತೃತ್ವದಲ್ಲಿ ಸಾ,ಮೂಹಿಕ ಪ್ರಾರ್ಥನೆ  ನೆರವೇರಿತು. ಆ ಬಳಿಕ ಪವಿತ್ರ ಗಂಧವನ್ನು ಮಿಲಾದ್ ಬಾಗ್‍ಗೆ ತರಲಾಯಿತು. ಗೌರವ ಸಮರ್ಪಣೆ ಬಳಿಕ ಶಾಸಕ ತನ್ವೀರ್ ಸೇಠ್ ಗಂಧವನ್ನು ಹೊತ್ತು ಹೆಜ್ಜೆ ಹಾಕಿದರು.

ದಫ್ ಕಲಾವಿದರು ಸೂಫಿ ಸಂತರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಸಾರೋಟಿನಲ್ಲಿ ತನ್ವೀರ್ ಸೇಠ್ ಗಂಧವನ್ನು ತಲೆ ಮೇಲೆ ಹೊತ್ತು ಅಶೋಕ ರಸ್ತೆ ಸೆಂಟ್ ಫಿಲೋಮಿನ ವೃತ್ತ, ಫೌಂಟೇನ್ ವೃತ್ತ, ಬಡಾಮಖಾನ್ ಟಿಪ್ಪು ವೃತ್ತದವರೆಗೆ ಮೆರವಣಿಗೆಯಲ್ಲಿ ಸಾಗಿದರು.

ಅಲ್ಲಿಂದ ಪವಿತ್ರ ಗಂಧವನ್ನು ಲಾರಿಯಲ್ಲಿ ಶ್ರೀರಂಗಪಟ್ಟಣದ ದರಿಯಾ ದೌವಲತ್ ಬಾಗ್‍ಗೆ ಕೊಂಡೊಯ್ಯಲಾಯಿತು.
ಇದೇ ವೇಳೆ ಕನ್ನಡ ಚಳವಳಿ ಹೋರಾಟಗಾರ ವಾಠಾಳ್ ನಾಗರಾಜ್ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.

ಟಿಪ್ಪು ಸುಲ್ತಾನ್ ಸರ್ವಜನಾಂಗದ ನಾಯಕ: ವಾಟಾಳ್ ನಾಗರಾಜ್ 

ಟಿಪ್ಪು ಸುಲ್ತಾನ್ ಒಂದು  ಜನಾಂಗದ ವ್ಯಕ್ತಿಯಲ್ಲ, ಅವರು ಸರ್ವಜನಾಂಗದ ನಾಯಕ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಬಣ್ಣಿಸಿದರು.

ನಗರದಲ್ಲಿ ಟಿಪ್ಪು ಸುಲ್ತಾನ್ ಅವರ 230 ನೇ ಗಂಧ ಉರಸ್ ಕಾರ್ಯಕ್ರಮದಲ್ಲಿ ಮಂಗಳವಾರ ಭಾಗವಹಿಸಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಒಂದು ಜನಾಂಗದ  ವ್ಯಕ್ತಿಯಲ್ಲ, ಅವರು ಸರ್ವಜನಾಂಗದ ನಾಯಕ, ಅವರನ್ನು ಒಂದು ಜಾತಿಗೆ ಗುರುತಿಸಿದರೆ ಅಗೌರವ ನೀಡಿದ ಹಾಗೆ ಎಂದು ಹೇಳಿದರು.

ಟಿಪ್ಪು ಸುಲ್ತಾನ್ ಈ ದೇಶದ ಅಪ್ರತಿಮ ನಾಯಕ, ದೇಶಕ್ಕಾಗಿ ತನ್ನ ಮಕ್ಕಳನ್ನೇ ಬ್ರಿಟಿಷರಿಗೆ ಒತ್ತೆಯಿಟ್ಟ ನಾಯಕ. ಅವರ ಆಡಳತಾವಧಿಯಲ್ಲಿ ಸಾಕಷ್ಟು ಸಾಮಾಜಿಕ ಸುಧಾರಣೆಯನ್ನು ತಂದಿದ್ದಾರೆ. ಮೈಸೂರಿನ ಜೀವನಾಡಿ ಕನ್ನಂಬಾಡಿಗೆ ಮೊದಲ ಬಾರಿಗೆ ಶಂಕುಸ್ಥಾಪನೆ ಮಾಡಿದವರು. ಇದರ ಹೆಬ್ಬಾಗಿಲಿನಲ್ಲಿ ಕನ್ನಡದಲ್ಲಿ ಅದ್ಭುತವಾಗಿ ಕನ್ನಡದ ಅಕ್ಷರವನ್ನು ಬರೆಸಿದ್ದಾರೆ. ಇದರಲ್ಲೇ ಅವರ ಕನ್ನಡ  ಪ್ರೇಮ ಎಂತಹುದು ಎಂದು ಗೊತ್ತಾಗುತ್ತದೆ ಎಂದು ಸ್ಮರಿಸಿದರು.

ಟಿಪ್ಪು ಸುಲ್ತಾನ್ ಪಡೆದ ಈ ದೇಶ ಧನ್ಯ, ಅವರ ಬಗ್ಗೆ ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟಿಪ್ಪು ಸುಲ್ತಾನ್ ಆಡಳಿತದಲ್ಲಿ ಜಾರಿಗೆ ತಂದ ರಾಕೆಟ್ ತಂತ್ರಜ್ಞಾನ ಸೇರಿದಂತೆ ಹಲವು ವಿಚಾರಗಳನ್ನು ಮೆಚ್ಚಿಕೊಂಡಿದ್ದಾರೆ.  ಯಾರು ಏನೆ ಹೇಳಿದರು ಸರಿ ನಾನು ಇರುವವರೆಗೂ ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆಯನ್ನು ಆಚರಣೆ ಮಾಡೇ ಮಾಡುತ್ತೇನೆ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News